ಕನ್ನಡಪ್ರಭವಾರ್ತೆ ಸೋಮವಾರಪೇಟೆ
ರಾಜ್ಯೋತ್ಸವವನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ, ವರ್ಷಪೂರ್ತಿ ನಡೆಸುವಂತಾಗಬೇಕು. ಕನ್ನಡ ಭಾಷೆ ನಮ್ಮ ಪ್ರತೀಕವಾಗಿದ್ದು, ಇದನ್ನು ಉಳಿಸಿ ಬೆಳೆಸಲು ಎಲ್ಲ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರತ್ನಕುಮಾರ್ ಹೇಳಿದರು.ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಸಂಘ ಅರಳಿಕಟ್ಟೆ ವತಿಯಿಂದ ಕಾಲೇಜಿನ ವೇದಿಕೆಯಲ್ಲಿ ಶುಕ್ರವಾರ ರಾಜ್ಯೋತ್ಸವ ಅಂಗವಾಗಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಫರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿ ಬೆಳವಣಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಕೊಡುಗೆ ಅಪಾರವಾಗಿದೆ. ರಾಜ್ಯೋತ್ಸವ ಆಚರಣೆ ಕೇವಲ ಭಾಷಾ ಕಾರ್ಯಕ್ರಮವಾಗದೆ, ನಾಡು, ನುಡಿ, ಆಚಾರ, ಸಂಸ್ಕೃತಿಗಳ ಅನಾವರಣದ ವೇದಿಕೆಯಾಗಿದೆ. ರಾಜ್ಯೋತ್ಸವದ ಕಾರ್ಯಕ್ರಮಗಳು ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತದೆ. ಶಿಕ್ಷಕರು ಹಾಗೂ ಸಾಹಿತಿ ಶಿವಕುಮಾರ್ ಮಾತನಾಡಿ, ಸಿರಿಗನ್ನಡಂ ಗೆಲ್ಗೆ ಎಂಬುದು ಕನ್ನಡಾಭಿಮಾನದ ವೇದಘೋಷದಂತಿದೆ. ಕನ್ನಡದ ಸ್ಮರಣೆ, ಆಚರಣೆಯು ಭಾಷೆಯ ಅಸ್ಮಿತೆಗೆ ಸಾಕ್ಷಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಉಪ ಪ್ರಾಂಶುಪಾಲರಾದ ಹೇಮಲತ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಲ್.ಎಂ. ಪ್ರೇಮ, ಕನ್ನಡ ಶಿಕ್ಷಕ ಬಿ. ವಿಜಯಕುಮಾರ್ ರಾಜರತ್ನ, ಧನ್ಯಾ ರಸಪ್ರಶ್ನೆ ಕಾರ್ಯಕ್ರಮ ನಿರ್ವಹಿಸಿದರು. ತೀರ್ಪುಗಾರರಾಗಿ ಸಾಹಿತಿ ಹಾಗೂ ಶಿಕ್ಷಕರಾದ ಕಾಜೂರು ಸತೀಶ್ ಕಾರ್ಯನಿರ್ವಹಿಸಿದರು. ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿಜೇತರಿಗೆ ಪ್ರಥಮ 5ಸಾವಿರ ರು., ದ್ವಿತೀಯ 3 ಸಾವಿರ ರು. ಹಾಗೂ ತೃತೀಯ 2 ಸಾವಿರ ರು. ಹಾಗೂ ಇಬ್ಬರಿಗೆ ತಲಾ ಒಂದು ಸಾವಿರ ರು. ಸಮಾಧಾನಕರ ಬಹುಮಾನ ಹಾಗೂ ಪಾರಿತೋಷಕಗಳು ನೀಡಲಾಯಿತು.