
ರ‍್ಯಾಲಿಯಲ್ಲಿ ಪಾಲ್ಗೊಂಡು ಮುಸ್ಲಿಂ, ದಲಿತ ಮುಖಂಡರ ಬೆಂಬಲ
ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ, ಶಾಂತಿ ಮತ್ತು ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ಸ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ವತಿಯಿಂದ ಗುರುವಾರ ಕಾರವಾರದಲ್ಲಿ ಶಾಂತಿ ರ‍್ಯಾಲಿ ನಡೆಯಿತು.ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ರ‍್ಯಾಲಿಯಲ್ಲಿ ವಿವಿಧ ಕ್ರೈಸ್ತ ಸಮುದಾಯಗಳ ಸುಮಾರು 2,000 ಮಂದಿ ಭಾಗವಹಿಸಿದ್ದರು. ಮುಸ್ಲಿಂ ಹಾಗೂ ದಲಿತ ಮುಖಂಡರು ಕೂಡ ರ‍್ಯಾಲಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಕಾರವಾರದ ಬಿಷಪ್ ರೆ. ಡಾ. ಡ್ಯುಮಿಂಗ್ ಡಯಾಸ್ ಸಭೆಯನ್ನುದ್ದೇಶಿಸಿ ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯಿಂದ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್‌ಗಳಂತೆ ಪರಿಗಣಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು, ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ನೀಡಿದರು. ನ್ಯಾಯ ಮತ್ತು ಹಕ್ಕುಗಳ ರಕ್ಷಣೆಗಾಗಿ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಟ ನಡೆಸುವುದು ಸಮುದಾಯದ ಉದ್ದೇಶವಾಗಿದೆ ಎಂದು ತಿಳಿಸಿದರು. ರ‍್ಯಾಲಿಯ ಸಂದರ್ಭದಲ್ಲಿ ಪಾಲಿಸಬೇಕಾದ ಮಾರ್ಗಸೂಚಿ ಹಾಗೂ ಶಿಸ್ತುಕ್ರಮಗಳ ಬಗ್ಗೆಯೂ ಭಾಗವಹಿಸಿದವರಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ರ‍್ಯಾಲಿಗೆ ಚಾಲನೆ ನೀಡಿದರು. ನಿಗದಿತ ಮಾರ್ಗದಲ್ಲಿ ಶಾಂತಿಯುತವಾಗಿ ಸಾಗಿದ ರ‍್ಯಾಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಕ್ತಾಯಗೊಂಡಿತು. ಬಳಿಕ ಪಾಸ್ಟರ್ ರವಿ ಬೆಸ್ತಾ ಅವರು ಸರ್ಕಾರಕ್ಕೆ ಸಲ್ಲಿಸಬೇಕಾದ ಮನವಿಯನ್ನು ಓದಿದರು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮನವಿ ಸ್ವೀಕರಿಸಿದರು.ಕಾರವಾರ ಧರ್ಮಪ್ರಾಂತ್ಯದ ಕುಲಪತಿ ರೆ. ಫಾ. ಬ್ಯಾಪ್ಟಿಸ್ಟ್ ಗೋಮ್ಸ್ ವಂದನಾರ್ಪಣೆ ಸಲ್ಲಿಸಿ, ರ‍್ಯಾಲಿಯ ಯಶಸ್ಸಿಗೆ ಸಹಕರಿಸಿದ ಸಂಘಟಕರು, ಧಾರ್ಮಿಕ ಮುಖಂಡರು, ಭಾಗವಹಿಸಿದವರು ಹಾಗೂ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು. ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ, ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಮುಜಂಮಿಲ್ ಮಾಂಡ್ಲಿಕ್, ಇಮ್ತಿಯಾಜ್ ಭುಕಾರಿ, ಜಾರ್ಜ್ ಫರ್ನಾಂಡಿಸ್, ಲಿಯೋ ಎಫ್. ಲೂಯಿಸ್, ಸ್ಯಾಮ್ಸನ್ ಜೆ. ಡಿಸೋಜಾ, ಫಾ. ರಿಚರ್ಡ್ ರಾಡ್ರಿಗಸ್, ಫಾ. ಲ್ಯಾನ್ಸಿ ರಾಡ್ರಿಗಸ್ ಸೇರಿದಂತೆ ಧರ್ಮಗುರುಗಳು, ಧರ್ಮಸಹೋದರಿಯರು, ಪಾಸ್ಟರ್‌ಗಳು, ಧಾರ್ಮಿಕ ಮುಖಂಡರು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.