ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಹೋಗಿ ಬರುವ ಭಕ್ತಾದಿಗಳಿಗಾಗಿ ಕರ್ನಾಟಕದಿಂದ ಹೆಚ್ಚುವರಿಯಾಗಿ 10ಕ್ಕೂ ಹೆಚ್ಚು ವಿಶೇಷ ರೈಲುಗಳು ಓಡಲು ಸಜ್ಜಾಗಿರೋವಾಗ, ಈ ಪೈಕಿ ಒಂದು ರೈಲು ಕೂಡಾ ಕಲ್ಯಾಣ ನಾಡಿನ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮಾರ್ಗವಾಗಿ ಓಡುತ್ತಿಲ್ಲ!
ಈ ಬೆಳವಣಿಗೆ ಕಲ್ಯಾಣ ನಾಡಿನ ರಾಮ ಭಕ್ತರನ್ನು ಕೆರಳುವಂತೆ ಮಾಡಿದೆ. ಅವರೆಲ್ಲರೂ ಕೇಂದ್ರದಲ್ಲಿ ಪ್ರತಿನಿಧಿಸಿರುತ್ತಿರುವ ಸಂಸದರು, ಮಂತ್ರಿಗಳನ್ನ ಹಳಿಯಲಾರಂಭಿಸಿದ್ದಾರೆ.ಮೊದಲೇ ಈ ಭಾಗದಲ್ಲಿ ರೈಲಿಗೆ ಬರ. ಇದೀಗ ಅಯೋಧ್ಯೆಗೆ ನಾಡಿನಾದ್ಯಂತ ಎಲ್ಲಾ ಕಡೆಯಿಂದ ವಿಶೇಷ ರೈಲುಗಳು ಓಡುತ್ತಿದ್ದರೂ ಇಲ್ಲಿಯೂ ಕೂಡಾ ಕಲ್ಯಾಣ ನಾಡನ್ನ ಕಡೆಗಣಿಸಲಾಗುತ್ತಿದೆ ಎಂದು ಅನೇಕರು ಈ ಭಾಗವನ್ನು ಕೇಂದ್ರ ಸರ್ಕಾರದಲ್ಲಿ ಪ್ರತಿನಿಧಿಸುತ್ತಿರುವ ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಸೇರಿ ಕಲಬುರಗಿ, ಯಾದಗಿರಿ, ರಾಯಚೂರು ಭಾಗದ ಜನನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಈಗಾಗಲೇ ನೈರುತ್ಯ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ ಹಾಗೂ ಸೆಂಟ್ರಲ್ ರೈಲ್ವೆಯವರು ಪ್ರಕಟಿಸಿರುವ ವೇಳಾಪಟ್ಟಿಯಂತೆ ಕೆಲವು ರೈಲುಗಳು ಜ.19ರಂದು ಇನ್ನೂ ಕೆಲವು ರೈಲುಗಳು ಫೆ.4ರಂದು ಕರ್ನಾಟಕ ವಿವಿಧ ಭಾಗಗಳಿಂದ ಅಯೋಧ್ಯೆಗೆ ಓಡಲು ಸಿದ್ಧವಾಗಿವೆ. ಹೀಗೆ ಸಿದ್ಧವಾಗಿರುವ ರೈಲುಗಳಲ್ಲಿ ಒಂದೂ ಕೂಡಾ ಕಲ್ಯಾಣ ನಾಡಿನಿಂದ ಸಾಗುತ್ತಿಲ್ಲ ಎಂಬುದೇ ಅಸಮಾಧಾನದ ಸಂಗತಿಯಾಗಿ ಇಲ್ಲಿನ ರಾಮ ಭಕ್ತರು, ಕರ ಸೇವಕರನ್ನು ಕಾಡಲಾರಂಭಿಸಿದೆ.ಲಭ್ಯ ಮಾಹಿತಿ ಪ್ರಕಾರ ನೈರುತ್ಯ ರೈಲ್ವೆಯವರು ಶ್ರೀ ವಿಶ್ವೇಶ್ವರಯ್ಯ ಟರ್ಮಿನಲ್ (ಬಯ್ಯಪ್ಪನಹಳ್ಳಿ) ಬೆಳಗಾವಿ, ಮೈಸೂರು, ತುಮಕೂರು, ಶಿವಮೊಗ್ಗ, ವಾಸ್ಕೋದಿಂದ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಓಡಿಸುತ್ತಿದ್ದಾರೆ. ಇವೆಲ್ಲ ರೈಲುಗಳು ಗದಗ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ ಜಿಲ್ಲೆಗಳ ಮೂಲಕ ಸಂಚರಿಸುತ್ತಿವೆಯೇ ಹೊರತು ಒಂದೂ ರೈಲು ಕಲ್ಯಾಣದ ಜಿಲ್ಲೆಗಳಗುಂಟ ಓಡುತ್ತಿಲ್ಲ!
ಇನ್ನೂ ಸೆಂಟ್ರಲ್ ರೈಲ್ವೆಯವರು ಸೊಲ್ಲಾಪುರದಿಂದ ಹಾಗೂ ಉಸ್ಮಾನಾಬಾದ್‌ನಿಂದ ಅಯೋಧ್ಯೆಗೆ 2 ವಿಶೇಷ ರೈಲು ಓಡಿಸಲು ಮುಂದಾಗಿದ್ದೂ ಇವು ಕೂಡಾ ಕಲಬುರಗಿ ಸೇರಿ ಕಲ್ಯಾಣ ನೆಲದಿಂದ ದೂರವೇ ಉಳಿದುಕೊಂಡು ರಾಮ ಭಕ್ತರ ಕಣ್ಣು ಕೆಂಪಗಾಗಿಸಿವೆ.ಸೆಂಟ್ರಲ್ ರೈಲ್ವೆ ಅಡಿಯಲ್ಲೇ ಕಲಬುರಗಿ ಸೇರಿ ಕಲ್ಯಾಣ ನಾಡಿನ ಜಿಲ್ಲೆಗಳ ಸಿಂಹಪಾಲು ಇದ್ದರೂ ಕೂಡಾ ಇವರೇ ಪಕ್ಕದ ಸೊಲ್ಲಾಪುರದಿಂದ ರೈಲನ್ನು ಅಯೋಧ್ಯೆಗೆ ಓಡಿಸುವ ಬದಲು ಅದನ್ನೇ ಕಲಬುರಗಿಯಿಂದ ಓಡಿಸಬಹುದಿತ್ತು. ಹೀಗಾದಲ್ಲಿ ಕಲಬುರಗಿ, ಬೀದರ್‌ನಿಂದಲೂ ಅಯೋಧ್ಯೆಗೆ ರೈಲು ಸಂಚಾರ ಸವಲತ್ತು ದೊರಕಲಿತ್ತು. ಇಂತಹ ಸುಲಭದ ಅವಕಾಶಗಳಿಂದಲೂ ರೈಲ್ವೆ ಇಲಾಖೆ ಕಲ್ಯಾಣದ ಜನರನ್ನು ವಂಚಿತರನ್ನಾಗಿಸಿದೆ ಎಂಬ ಅಸಮಾಧಾನದ ಮಾತುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿವೆ.
ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಇಲ್ಲೆಲ್ಲಾ ಬಿಜೆಪಿ ಸಂಸದರೇ ಇದ್ದರೂ ಸಹ ಅಯೋಧ್ಯೆಗೆ ಒಂದೂ ರೈಲು ಸವಲತ್ತು ಇವರು ಮಾಡಿಸಲಾಗಿಲ್ಲ. ಇವರಿಗೆ ಜನರ ಮತ ಬೇಕಷ್ಟೆ. ಸವಲತ್ತು ಕೊಡುವಲ್ಲಿ ನಮ್ಮ ಹಕ್ಕನ್ನು ಮಂಡಿಸಲು ಇವರು ಸದಾಕಾಲ ಹಿಂದೇಟನ್ನೇ ಹಾಕುತ್ತಿದ್ದಾರೆ. ಇಂತಹ ಧೋರಣೆಯಿಂದಲೇ ಕಲ್ಯಾಣ ನಾಡು ರೈಲು ಸೇವೆಯಲ್ಲಿ ಇಂದಿಗೂ ತುಂಬ ಬಡವಾಗಿದೆ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜ.22ರಂದು ನಡೆಯಲಿದ್ದು, ಆದಾದ ಬಳಿಕ ಮಂದಿರ ವೀಕ್ಷಣೆಗೆ ಎಲ್ಲೆಡೆ ಸಹಸ್ರಾರು ಸಂಖ್ಯೆಯಲ್ಲಿ ಜನ ತೆರಳಲಿದ್ದಾರೆ. ಶ್ರೀರಾಮ ಜನ್ಮಭೂಮಿ ಸಹ ಜ.23ರ ಬಳಿಕ ರಾಮಮಂದಿರ ಭಕ್ತರಿಗೆ ಮುಕ್ತ ಎಂದು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರಿನಿಂದಲೂ ಅಯೋಧ್ಯೆ ವಿಶೇಷ ರೈಲು ಇರಬೇಕಿತ್ತು. ಆದರೆ ಇಲ್ಲಿರುವ ಕೇಂದ್ರ ಸಚಿವರು, ಬಿಜೆಪಿ ಸಂಸದರ ಅಲಕ್ಷ್ಯತನದಿಂದ ಅಯೋಧ್ಯೆ ಎಕ್ಸಪ್ರೆಸ್ ಕಲ್ಯಾಣದತ್ತ ಇಣುಕಿಯೋ ನೋಡದಂತಾಗಿದೆ. ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿಯೇ ರೈಲ್ವೆ ಇಲಾಖೆ ಮಲತಾಯಿ ಧೋರಣೆ ನಮ್ಮನ್ನು ಹಾಗೇ ಬೇಟೆಯಾಡುತ್ತಿದೆ.- ಆನಂದ ಭೀಮಸೇನರಾವ ದೇಶಪಾಂಡೆ, ರಾಮ ಭಕ್ತ, ರೈಲು ಬಳಕೆದಾರ, ಕಲಬುರಗಿ.- ಆನಂದ ಭೀಮಸೇನರಾವ ದೇಶಪಾಂಡೆ, ರಾಮ ಭಕ್ತ, ರೈಲು ಬಳಕೆದಾರ, ಕಲಬುರಗಿ.