ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಕಂಬಳ ಸಮಿತಿ ವತಿಯಿಂದ 7ನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳಕ್ಕೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡುಕರೆಯಲ್ಲಿ ಶನಿವಾರ ಉದ್ಘಾಟನೆಗೊಂಡಿತು.ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಅವರು ಕಂಬಳವನ್ನು ಉದ್ಘಾಟಿಸಿ, ಈ ಬಾರಿ ಬೆಂಗಳೂರು ಭಾಗಕ್ಕೆ ಕಂಬಳವನ್ನು ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ದೇಶಕ್ಕೆ ಪರಿಚಯಿಸುವ ಕೆಲಸ ಇಲ್ಲಿನ ಮುಖಂಡರು, ಸಂತರು ಮಾಡಬೇಕಿದೆ. ಕಾಂತಾರ ಚಲನಚಿತ್ರದ ಮೂಲಕ ತುಳುನಾಡಿದ ಭೂತಕೋಲ, ಕಂಬಳ ಮೊದಲಾದ ಜಾನಪದೀಯ ಆಚರಣೆಗಳನ್ನು ಸಾಂಕೇತಿಕವಾಗಿ ಎಲ್ಲೆಡೆ ಪಸರಿಸುವ ಕೆಲಸವಾಗಿದೆ. ಕಂಬಳವನ್ನು ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದೆ. ನೇರವಾಗಿ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಪ್ರಾದೇಶಿಕ ಸೊಗಡಿನ ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಂಬಳವನ್ನು ಜಗದ್ವಿಖ್ಯಾತಿಗೊಳಿಸೋಣ ಎಂದರು.ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾಮಾನಂದ ಮಾತನಾಡಿ, ಯಕ್ಷಗಾನ-ಕಂಬಳ ಇವೆಲ್ಲವೂ ನಮ್ಮ ನೆಲದ ಸಂಸ್ಕೃತಿ. ಇದು ಉಳಿಯುವವರೆಗೆ ದೇಶ ಉಳಿಯುತ್ತದೆ. ಸಂಸ್ಕೃತಿ ಮೂಲಕವೇ ನಮ್ಮ ದೇಶ ಜಗತ್ತಿನಲ್ಲಿ ಹೆಸರು ಪಡೆದಿದಿದೆ ಎಂದರು.ಕಂಕನಾಡಿ ಶ್ರೀ ಬ್ರಹ್ಮ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಾಸಕ ಡಾ. ಭರತ್ ಶೆಟ್ಟಿ, ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಅನಿಲ್ ಕುಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪ್ರಮುಖರಾದ ಮೋನಪ್ಪ ಭಂಡಾರಿ, ಕದ್ರಿ ನವನೀತ್ ಶೆಟ್ಟಿ, ದಯಾನಂದ ಕತ್ತಲ್ ಸಾರ್, ಆಶಿಕ್ ಬಳ್ಳಾಲ್ ಕೂಳೂರು ಬೀಡು, ಕುಡುಂಬೂರು ಗುತ್ತಿನ ಗುತ್ತಿನಾರ್ ಕೆ. ಜಯರಾಮ ಶೆಟ್ಟಿ, ಕಂಬಳ ಸಮಿತಿ ಗೌರವ ಸಲಹೆಗಾರ ಪ್ರಸಾದ್ ಕುಮಾರ್ ಶೆಟ್ಟಿ, ಜಯರಾಮ ಮುಕ್ಕಾಲ್ದಿ, ಪುಷ್ಪರಾಜ್ ಚೌಟ ಪ್ರದೀಪದ ಆಳ್ವ, ರಾಜೇಶ್ ಶೆಟ್ಟಿ, ಭಾಗ್ಯೋದಯ ಶೆಟ್ಟಿ, ರಾಘವೇಂದ್ರ ಹೊಳ್ಳ, ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಮತ್ತಿತರರಿದ್ದರು.ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಸ್ವಾಗತಿಸಿ, ಪ್ರಸ್ತಾವಿಸಿದರು.