ಕನ್ನಡಪ್ರಭ ವಾರ್ತೆ ಗದಗ
ಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಸಾಸನೂರ ಬೇಕರಿಯ ಮಾಲೀಕರು ಮತ್ತು ಅಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು ಶ್ರದ್ಧಾ ಭಕ್ತಿಯಿಂದ ಶ್ರೀರಾಮ ಮಂದಿರವನ್ನು ಕೇಕ್‌ನಲ್ಲಿ ನಿರ್ಮಿಸಿದ್ದಾರೆ. ಕಳೆದ 8 ದಿನಗಳಿಂದ ನಿರಂತರವಾಗಿ ಯೂಟ್ಯೂಬ್ ಮತ್ತು ಗೂಗಲ್ ಮೂಲಕ ನೋಡಿಕೊಂಡು ಕೇಕ್ ನಿರ್ಮಾಣಕ್ಕಾಗಿ ಶ್ರಮಿಸಿರುವ ಕಾರ್ಮಿಕರು ಅತ್ಯಂತ ಸುಂದರವಾದ ಶ್ರೀರಾಮ ಮಂದಿರವನ್ನು ಕೇಕ್‌ನಲ್ಲಿ ಕಟ್ಟಿದ್ದಾರೆ. ನಿರ್ಮಾಣವಾಗಿರುವ ಈ ಕೇಕ್ ಶುಗರ್ ಪೇಸ್ಟ್‌ನಿಂದ ಕೂಡಿದ್ದು, ಶುದ್ಧ ಸಸ್ಯಹಾರಿಯಾಗಿದೆ. ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಿಟ್ಟರೂ ಕೆಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ.
ಜ. 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಅದೇ ದಿನ ಈ ಬೃಹತ್ ಕೇಕ್ ಅನ್ನು ತಮ್ಮ ಬೇಕರಿಯ ಮುಂಭಾಗದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ಬೇಕರಿ ಮಾಲೀಕರು, ಅಂದು ಬೇಕರಿಗೆ ಬರುವ ಪ್ರತಿಯೊಬ್ಬರಿಗೂ ಶ್ರೀರಾಮ ಮಂದಿರದ ಉದ್ಘಾಟನೆಯ ಉಡುಗೊರೆ ನೀಡಲಿದ್ದಾರೆ. ಅಂದೇ ಸಂಪೂರ್ಣ ಕೇಕ್ ಅನ್ನು ಸಾರ್ವಜನಿಕರಿಗೆ ಅರ್ಪಿಸುವ ಯೋಜನೆ ಹಾಕಿಕೊಂಡಿದ್ದಾರೆ.