ಅವಸರದಲ್ಲಿ ಉದ್ಘಾಟನೆ ಮಾಡಿದ್ದರಿಂದ ರಾಮಮಂದಿರ ಸೋರುತ್ತಿದೆ: ತಂಗಡಗಿ

KannadaprabhaNewsNetwork | Published : Jun 26, 2024 12:38 AM

ಸಾರಾಂಶ

ಬಿಜೆಪಿಯವರು ಲೋಕಸಭಾ ಚುನಾವಣೆಗಾಗಿ ಅವಸರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಉದ್ಘಾಟನೆ ಮಾಡಿದ್ದರಿಂದ ಈಗ ಸೋರುವ ಪರಿಸ್ಥಿತಿ ಬಂದಿದೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ಬಿಜೆಪಿಯವರು ಲೋಕಸಭಾ ಚುನಾವಣೆಗಾಗಿ ಅವಸರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಉದ್ಘಾಟನೆ ಮಾಡಿದ್ದರಿಂದ ಈಗ ಸೋರುವ ಪರಿಸ್ಥಿತಿ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಇಲ್ಲಿನ ಪ್ರಗತಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದೇವಸ್ಥಾನ ಕಟ್ಟಿಸಲಿ. ದೇವರ ಬಗ್ಗೆ ನಮಗೂ ಗೌರವ, ಭಕ್ತಿ ಇದೆ. ಆದರೆ, ಶ್ರೀರಾಮ, ಆಂಜನೇಯನನ್ನು ರಾಜಕಾರಣಕ್ಕೆ ತಂದು ಅವಸರ ಮಾಡಿದ್ದಕ್ಕೆ ಇವತ್ತು ರಾಮಮಂದಿರ ಸೋರುವ ಪರಿಸ್ಥಿತಿ ಬಂದಿದೆ. ರಾಮಂದಿರ ಕಟ್ಟಿರುವ ಅಯೋಧ್ಯೆಯಲ್ಲಿ ಸಮಾಜವಾದಿ ಪಾರ್ಟಿ ಗೆದ್ದಿದೆ. ಕೊಪ್ಪಳದಲ್ಲಿ ಆಂಜನೇಯನನ್ನು ರಾಜಕಾರಣಕ್ಕೆ ತಂದಿದ್ದಕ್ಕೆ ಕಾಂಗ್ರೆಸ್‌ ಗೆದ್ದಿದೆ ಎಂದು ತೀಕ್ಷ್ಣವಾಗಿ ಹೇಳಿದರು.‌ಕಾಂಗ್ರೆಸ್‌ನಲ್ಲಿ ಮೂರು ಉಪಮುಖ್ಯಮಂತ್ರಿ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಉಪಮುಖ್ಯಮಂತ್ರಿ ಚರ್ಚೆ ಅಗತ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಉಪಮುಖ್ಯಮಂತ್ರಿ ‌ಹುದ್ದೆ ಬಗ್ಗೆ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಸರ್ಕಾರ ಬಹಳ ಚೆನ್ನಾಗಿ ನಡೆಯುತ್ತಿದೆ. ಸಿಎಂ ಮತ್ತು ಡಿಸಿಎಂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕೇ ಹೊರತು ಡಿಸಿಎಂ ಕುರಿತ ಚರ್ಚೆಯಲ್ಲ ಎಂದು ತಿಳಿಸಿದರು.

ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರ ಮನೆಯಲ್ಲಿ ಈ ರೀತಿ ಆಗಿರುವುದು ನೋವಿನ ಸಂಗತಿ. ಆದರೆ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇದು ಕಾಂಗ್ರೆಸ್ ಷಡ್ಯಂತ್ರ ಎನ್ನುತ್ತಾರೆ. ಹೀಗೆ ಮಾಡಿ ಎಂದು ನಾವು ಹೇಳಿದ್ದೇವಾ? ಇದರಲ್ಲಿ ಯಾರ ಪಾತ್ರವೂ ಇಲ್ಲ. ಇವರ ತಪ್ಪು ಮಾಡಿ ಸಿಕ್ಕಿಬಿದ್ದಿದ್ದಕ್ಕೆ ನಮ್ಮ ಪಕ್ಷದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.ಕ್ಷೇತ್ರದ ಗ್ರಾಪಂಗಳಿಗೆ ಭೇಟಿ:

ಕ್ಷೇತ್ರದಲ್ಲಿ ಚುನಾವಣೆ ಗೆದ್ದ ಬಳಿಕ ಎಲ್ಲ ಗ್ರಾಪಂಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಬೇಕು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ನಿರ್ಧರಿಸಿದ್ದೇವು. ಅದರಂತೆ ಗ್ರಾಪಂಗಳಿಗೆ ಭೇಟಿ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಒಟ್ಟು 32 ಗ್ರಾಪಂಗಳಿವೆ. ಈಗಾಗಲೇ 27 ಗ್ರಾಪಂಗಳಿಗೆ ಭೇಟಿ ಮಾಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತಿದೆ ಎಂದರು.ಅಭಯ ಹಸ್ತ ಕಾರ್ಯಕ್ರಮ:

ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮರಳಿ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಂದ ಅಭಯ ಹಸ್ತ ಕಾರ್ಯಕ್ರಮ ಜರುಗಿತು.

ಮರಳಿ, ಆಚಾರ ನರ್ಸಾಪುರ ಗ್ರಾಮಗಳಲ್ಲಿ ನಡೆದ ಅಭಯ ಹಸ್ತ ಕಾರ್ಯಕ್ರಮದಲ್ಲಿ ಜಲ್ವಂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಸಚಿವರು ಚರ್ಚೆ ನಡೆಸಿದರು.

ಪ್ರಮುಖವಾಗಿ ಪ್ರಗತಿನಗರದಲ್ಲಿ ಸರ್ವೆ ನಂ. 21ರಲ್ಲಿ 162 ಕುಟಂಬಗಳಿಗೆ ಹಕ್ಕು ಪತ್ರ ನೀಡಬೇಕೆಂಬ ನಿವಾಸಿಗಳ ಒತ್ತಡ ಹಿನ್ನೆಲೆ ಸಚಿವರು ಕೂಡಲೆ ಇದನ್ನು ಪರಿಶೀಲಿಸಿ ಹಕ್ಕುಪತ್ರ ನೀಡಬೇಕೆಂದು ಸೂಚಿಸಿದರು.

ಅದೇ ರೀತಿಯಾಗಿ ಸರ್ವೆ 74ರಲ್ಲಿ 42 ಕುಟಂಬಗಳಿಗೆ ಜುಲೈ 12 ರೊಳಗೆ ಹಕ್ಕುಪತ್ರ ನೀಡಬೇಕೆಂದು ತಹಸೀಲ್ದಾರರಿಗೆ ಸೂಚಿಸಿದರು.

ಅಲ್ಲದೇ ಗ್ರಾಮಗಳ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದ ಸಚಿವರು, ಅಧಿಕಾರಿಗಳು ಗ್ರಾಮಗಳ ಜನರ ಜೊತೆ ಸಂಪರ್ಕದಲ್ಲಿದ್ದು ಅವರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ ನಾಗರಾಜ್, ತಾಪಂ ಇಒ ಲಕ್ಷ್ಮೀದೇವಿ, ಜಿಪಂ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅದ್ಯಕ್ಷ ರೆಡ್ಡಿ ಶ್ರೀನಿವಾಸ ಇತರರು ಭಾಗವಹಿಸಿದ್ದರು.

Share this article