ಸ್ವಾತಂತ್ರ್ಯ ದೊರೆತ ವೇಳೆಯೇ ರಾಮ ಮಂದಿರ ನಿರ್ಮಾಣವಾಗಬೇಕಿತ್ತು

KannadaprabhaNewsNetwork |  
Published : Jan 02, 2024, 02:15 AM IST
31ಡಿಡಬ್ಲೂಡಿ4ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ನಗರದ ಲೈನ್ ಬಜಾರ್ ರಾಮ ದೇವರ ಗುಡಿಯಿಂದ ಆದರ್ಶ ಬಾಲಿಕಾ ಪ್ರೌಢಶಾಲೆವರೆಗೆ ಮೆರವಣಿಗೆ ಸಾಗಿತು.  | Kannada Prabha

ಸಾರಾಂಶ

ಅಮೃತ ಕಾಲದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಅದನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮದಾಗಿದೆ ಎಂದು ದೇವರ ಹುಬ್ಬಳ್ಳಿ ಸಿದ್ಧಾರೂಢ ಮಠದ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

ರಾಮ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಯಲ್ಲಿ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಧಾರವಾಡ

ಸ್ವಾತಂತ್ರ್ಯ ದೊರೆತ ಸಮಯದಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕಿತ್ತು ಎಂದು ದೇವರ ಹುಬ್ಬಳ್ಳಿ ಸಿದ್ಧಾರೂಢ ಮಠದ ಶಿವಯೋಗಿ ಸ್ವಾಮೀಜಿ ಹೇಳಿದರು.

ನಗರದ ಆದರ್ಶ ಬಾಲಿಕಾ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ನಡೆದ ರಾಮ‌ ಮಂತ್ರಾಕ್ಷತೆ ವಿತರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ‌ ಸಮಯದಲ್ಲೇ ರಾಮ‌ ಮಂದಿರ ನಿರ್ಮಾಣವಾಗಿದ್ದರೆ ಬಹಳ ಉತ್ತಮವಾಗುತ್ತಿತ್ತು. ನ್ಯಾಯಾಲಯಕ್ಕೆ ಹೋಗುವ ಪ್ರಸಂಗವೇ ಬರುತ್ತಿರಲಿಲ್ಲ ಎಂದರು.

ಮಂದಿರ ವಹಿ ಬನಾಯೆಂಗೆ ಎಂಬ ಧ್ಯೇಯವನ್ನು ಎಲ್ಲ ರಾಮ‌ ಭಕ್ತರು ಸಾಕಾರಗೊಳಿಸಿದ್ದಾರೆ. ಈ ಧ್ಯೇಯಕ್ಕಾಗಿ ಪ್ರಾರ್ಣಾರ್ಪಣೆಗೈದವರನ್ನು ಸದಾ ಸ್ಮರಿಸಬೇಕು ಎಂದ ಅವರು, ಭಾರತ ಇಂದು ವಿಶ್ವದಲ್ಲಿ ಉಚ್ಛ್ರಾಯ ಸ್ಥಾನದಲ್ಲಿದೆ. ಭಾರತ ಹೇಳಿದರೆ ಇಡೀ ಜಗತ್ತು ಕೇಳುತ್ತಿದೆ. ಇಂತಹ ಅಮೃತ ಕಾಲದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಅದನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮದಾಗಿದೆ ಎಂದರು.

ಆರ್‌ಎಸ್ಸೆಸ್‌ ಮುಖಂಡ ಚ.ರಾ.ನರೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮ ಮಂದಿರ ಅಭಿಯಾನ ಗ್ರಾಮ ಗ್ರಾಮಗಳನ್ನು, ಭಾರತೀಯರನ್ನು ಒಂದುಗೂಡಿಸಿದೆ. 25 ಕೋಟಿ ಪರಿವಾರಗಳನ್ನು ಸಂಪರ್ಕಿಸಿ ರಾಮನ ಮಂತ್ರಾಕ್ಷತೆ ನೀಡಿ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಇದು ಸುವರ್ಣಾಕ್ಷರದಲ್ಲಿ ಬರೆಯುವ ದಾಖಲೆಯಾಗಲಿದೆ ಎಂದರು.

ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಗರಗ ಮಡಿವಾಳೇಶ್ವರ ಮಠದ ಪ್ರಶಾಂತ ದೇವರು, ಸುಳ್ಳದಶಿವಸಿದ್ಧ ರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಡಾ. ಎಸ್. ಆರ್. ರಾಮನಗೌಡರ, ಸಂಘ ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ, ಜಿಲ್ಲಾ ಸಂಘಚಾಲಕ ಡಾ. ವ್ಯಾಸರಾಜ ದೇಶಪಾಂಡೆ, ಕಲ್ಲನಗೌಡ ಪಾಟೀಲ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಬಸವರಾಜ ಕೌಜಲಗಿ, ನರಸಪ್ಪ ಭಟ್ಟಂಗಿ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ನಗರದ ಲೈನ್ ಬಜಾರ್ ರಾಮ ದೇವರ ಗುಡಿಯಿಂದ ಆದರ್ಶ ಬಾಲಿಕಾ ಪ್ರೌಢಶಾಲೆವರೆಗೆ ಮೆರವಣಿಗೆ ಸಾಗಿತು. ಮಾತೆಯರು ಪೂರ್ಣ ಕುಂಭ ಹೊತ್ತು, ಕಲಾವಿದರು ಡೊಳ್ಳು ವಾದನ ಹಾಗೂ ಹಿಂದೂ ಕಾರ್ಯಕರ್ತರು ರಾಮನ ಜಯ ಘೋಷಣೆ ಮೂಲಕ ಮೆರವಣಿಗೆಯಲ್ಲಿ ಸಾಗಿದರು.

31ಡಿಡಬ್ಲೂಡಿ4

ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ