ಗದಗ: 130 ವರ್ಷದ ಹಿಂದೆಯೇ ರಾಮಮಂದಿರ ನಿರ್ಮಾಣ!

KannadaprabhaNewsNetwork |  
Published : Jan 14, 2024, 01:32 AM ISTUpdated : Jan 14, 2024, 01:12 PM IST
ಶ್ರೀರಾಮ ಮಂದಿರದ ಒಳನೋಟ | Kannada Prabha

ಸಾರಾಂಶ

ಜ. 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ನಡೆಯುತ್ತಿದೆ. ಆದರೆ ಗದಗ ತಾಲೂಕಿನ ಬೆಳದಡಿ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆಯೇ ರಾಮ ಮಂದಿರ ನಿರ್ಮಾಣವಾಗಿ ನಿತ್ಯವೂ ಪೂಜೆಗೊಳ್ಳುತ್ತಿದೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜ. 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ನಡೆಯುತ್ತಿದೆ. ಆದರೆ ಗದಗ ತಾಲೂಕಿನ ಬೆಳದಡಿ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆಯೇ ರಾಮ ಮಂದಿರ ನಿರ್ಮಾಣವಾಗಿ ನಿತ್ಯವೂ ಪೂಜೆಗೊಳ್ಳುತ್ತಿದೆ.

ಅಯೋಧ್ಯೆ ಪ್ರಭು ಶ್ರೀರಾಮನಿಗೂ ಗದಗ ಜಿಲ್ಲೆಗೂ ನಂಟಿದೆ ಎನ್ನುತ್ತಾರೆ ಜಿಲ್ಲೆಯ ಹಿರಿಯರು. ತಾಲೂಕಿನ ಬೆಳದಡಿ ಗ್ರಾಮದಲ್ಲಿ ರಾಮ, ಲಕ್ಷ್ಮಣ ಒಂದು ದಿನ ವಾಸ್ತವ್ಯ ಮಾಡಿರುವ ಉಲ್ಲೇಖವಿದೆಯಂತೆ. ಅದನ್ನು ಆಧರಿಸಿ ಗೊಂದಾವಲಿ ಬ್ರಹ್ಮ ಚೈತನ್ಯ ಮಹಾರಾಜರ ಆಜ್ಞೆಯಂತೆ ಗ್ರಾಮದಲ್ಲಿ ಸುಮಾರು 130 ವರ್ಷದ ಹಿಂದೆಯೇ ರಾಮಮಂದಿರ ನಿರ್ಮಾಣವಾಗಿದೆ.

ಅಂದು ಅರಣ್ಯ ಪ್ರದೇಶವಾಗಿತ್ತು:  ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಹನುಮಾನ್ ಮೂರ್ತಿಗಳನ್ನು ಹೊಂದಿರುವ ಭವ್ಯ ರಾಮ ಮಂದಿರವಿದ್ದು, ಇಲ್ಲಿ ನಿತ್ಯವೂ ಪೂಜೆಗೊಳುತ್ತಿವೆ. ಕಪ್ಪತ್ತಗುಡ್ಡ ಸೆರಗಿನ ಈ ಪ್ರದೇಶ ಮೊದಲು ದಂಡಾರಣ್ಯ ಪ್ರದೇಶವಾಗಿತ್ತು. ಬೆಳದಡಿ ಗ್ರಾಮ ಆಗ ದಟ್ಟವಾದ ಅರಣ್ಯ ಪ್ರದೇಶವಾಗಿತ್ತು. 

ಸೀತಾ ಮಾತೆ ಶೋಧಕ್ಕೆ ಹೋಗುವ ವೇಳೆ ಶ್ರೀರಾಮ, ಲಕ್ಷ್ಮಣರು ದಟ್ಟವಾದ ಕಾಡಿನಲ್ಲಿ ಒಂದು ದಿನ ವಾಸ್ತವ್ಯ ಮಾಡಿದ್ದರು. ನಂತರ ಬೆಳದಡಿ, ಬೈರಾಪುರ ಮಾರ್ಗವಾಗಿ ಕಿಷ್ಕಿಂಧೆಗೆ ಹೋಗಿದ್ದರು ಎನ್ನುವ ಐತಿಹ್ಯವಿದೆ.

ಗಮನ ಸೆಳೆಯುತ್ತಿದೆ: ಜೈಪುರದಿಂದ ತರಿಸಿದ ಅಮೃತ ಶಿಲೆಯಿಂದ ಕೆತ್ತನೆ ಮಾಡಿರುವ ಶ್ರೀರಾಮ, ಲಕ್ಷ್ಮಣ, ಸೀತಾ ದೇವಿ, ಹನುಮಾನ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಶ್ರೀರಾಮನ ಪಾದ ಸ್ಪರ್ಶದಿಂದ ಈ ಸ್ಥಳ ಪುಣ್ಯ ಸ್ಥಳವಾಗಿದೆ. ಬೇಡಿ ಬಂದವರಿಗೆ ಇಷ್ಟಾರ್ಥ ಪೂರೈಸುವ ದೇವಸ್ಥಾನ ಇದಾಗಿದೆ. 

ನಿತ್ಯ ರಾಮರಕ್ಷಾ ಸ್ತೋತ್ರ, ಭೂಪಾಳಿ, ಕಾಕಡ ಆರತಿ, ನೈವೇದ್ಯ ಆರತಿ, ವಿಷ್ಣು ಸಹಸ್ರ ನಾಮ, ಶೇಜಾರತಿ ವಿವಿಧ ಶ್ಲೋಕ ಪಠಣ ಅನೇಕ ಪೂಜೆ ಪುರಸ್ಕಾರಗಳು ನಡೆಯುತ್ತಿರುವುದು ವಿಶೇಷವಾಗಿದೆ.ನಮ್ಮದು ಕೃಷಿ ಪ್ರಧಾನ ಗ್ರಾಮವಾಗಿದ್ದು, ನಮಗೆ ಅಯೋಧ್ಯೆಗೆ ಹೋಗಿ ಶ್ರೀರಾಮನನ್ನು ನೋಡಲು ಆಗುವುದಿಲ್ಲ. 

ನಮ್ಮ ಗ್ರಾಮಕ್ಕೆ ಶ್ರೀರಾಮ ಬಂದು ಹೋಗಿದ್ದಾರೆ. ಅದಕ್ಕಾಗಿ ಗ್ರಾಮದಲ್ಲಿಯೇ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ನಿತ್ಯವೂ ರಾಮನ ಜಪ, ವಿಶೇಷ ಪೂಜೆ ಮಾಡುತ್ತೇವೆ ಬೆಳದಡಿ ಶ್ರೀರಾಮನ ಭಕ್ತರು ಹೇಳುತ್ತಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ