ವಿವಿಧೆಡೆ ಸಂಭ್ರಮದಿಂದ ರಾಮನವಮಿ ಆಚರಣೆ

KannadaprabhaNewsNetwork |  
Published : Mar 28, 2026, 02:00 AM IST
ಗದಗದಲ್ಲಿ ಶುಕ್ರವಾರ ರಾಮನವಮಿ ದಿನದಂದು ತೆರೆದ ಮಾಂಸದಂಗಡಿಗಳು. | Kannada Prabha

ಸಾರಾಂಶ

ಗದಗ ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ರಾಮನವಮಿ ಹಬ್ಬವನ್ನು ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಗದಗ

ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ರಾಮನವಮಿ ಹಬ್ಬವನ್ನು ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ರಾಮನವಮಿ ಅಂಗವಾಗಿ ಜಿಲ್ಲಾದ್ಯಂತ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ನಗರದ ಕುಷ್ಟಗಿ ಚಾಳದ ಶ್ರೀ ರಾಮ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮ ಕಣ್ಮನ ಸೆಳೆಯಿತು. ಇಲ್ಲಿ ಶ್ರೀ ಬಾಲರಾಮನ ತೋಟ್ಟಿಲೊತ್ಸವವನ್ನು ಭಕ್ತರು ಭಕ್ತಿ ಭಾವದಿಂದ ನೆರವೇರಿಸಿದರು. ಜೊತೆಗೆ ಶ್ರೀರಾಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ದೇವಾಲಯವನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಶ್ರೀರಾಮನ ಆಶೀರ್ವಾದ ಪಡೆದುಕೊಂಡರು.

ಜಿಲ್ಲೆಯ ವಿವಿಧ ಭಾಗಗಳಾದ ರೋಣ, ನರಗುಂದ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ರಾಮನವಮಿ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ರಾಮನಾಮ ಸಂಕೀರ್ತನೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು.

ಹಬ್ಬದ ಅಂಗವಾಗಿ ಹಲವೆಡೆ ರಾಮಜನ್ಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಕ್ತರು ಶ್ರೀರಾಮನ ಜನ್ಮ ಕ್ಷಣವನ್ನು ಸಂಭ್ರಮದಿಂದ ಆಚರಿಸಿದರು. ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.ನಿಯಮ ಉಲ್ಲಂಘಿಸಿ ತೆರೆದ ಮಾಂಸದಂಗಡಿಗಳು

ಕನ್ನಡಪ್ರಭ ವಾರ್ತೆ ಗದಗ

ನಗರದಲ್ಲಿ ರಾಮನವಮಿ ದಿನದಂದು ನಗರಸಭೆ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡದಂತೆ ನಗರಸಭೆಯು ಪ್ರಕಟಣೆ ನೀಡಿ ಆದೇಶಿಸಿತ್ತು. ಆದರೆ, ನಗರದಲ್ಲಿ ಕಾನೂನು ನಿಯಮ ಉಲ್ಲಂಘಿಸಿ ಕೆಲ ಮಾಂಸದಂಗಡಿಗಳು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀರಾಮನವಮಿ

ಮುಂಡರಗಿ: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಸಾಯಿ ಬಾಬಾ ಮೂರ್ತಿಗೆ ಮಂಗಲ ಸ್ನಾನ, ಆರತಿ, ಕಾಕಡಾರತಿ, ಅಭಿಷೇಕ, ಮಹಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ದುಪಾರ್ಚನೆ, ಅಲಂಕಾರ, ನೈವೇದ್ಯ, ಆರತಿ ಮಹಾಮಂಗಳಾರತಿ, ಮಹಾಪ್ರಸಾದ, ಸೂರ್ಯಾಸ್ಥಕ್ಕೆ ದೂಪಾರತಿ, ಸಂಜೆ ಶೇಜಾರತಿ ನಡೆಯಿತು.ದೇವಸ್ಥಾನದಲ್ಲಿ ರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಮಹಿಳೆಯರು ವಿವಿಧ ದೇವರ ಹೆಸರು ಕೂಗಿ ತೊಟ್ಟಿಲು ಜೋಗುಳ ಪದ ಹಾಡಿದರು, ನಂತರ ಮಹಿಳೆರಿಗೆ ಉಡಿ ತುಂಬಿದರು. ಚಿಕ್ಕ ಮಕ್ಕಳು ರಾಮನ ವೇಷಧರಿಸುವ ಮೂಲಕ ಸಂಭ್ರಮಿಸಿದರು. ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದರು, ಪೂಜಾ ಕೈಂಕರ್ಯಗಳುನ್ನು ವಿ.ಚಿ. ಜೋಶಿ ನಡೆಸಿಕೊಟ್ಟರು,ಈ ಸಂದರ್ಭದಲ್ಲಿ ಸುಮಿತ್ರಾ ತಾಪಸ್ಕರ, ಸುರೇಶ ಬೋಸ್ಲೆ, ಭರಮಪ್ಪ ಪುಟ್ಟಣ್ಣವರ, ನಿಂಗನಗೌಡ್ರ ಗೌಡ್ರ. ಮಂಜುಳಾ ಸಜ್ಜನರ, ರಾಮಣ್ಣ ಇಲ್ಲೂರು, ಹುಲ್ಲಿಗೆಮ್ಮ ಭಜಂತ್ರಿ, ಡಾ. ಅಕ್ಕಮದೇವಿ ಸಾಲಿ, ಕವಿತಾ ಪಾಸಿ, ಯಲ್ಲಪ್ಪ ಕವಲೂರ, ಮಂಜುನಾಥ ಜಾಗಟಗೇರಿ ಸೇರಿದಂತೆ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ.

ಮುಂಡರಗಿ: ಪಟ್ಟಣದ ಸುಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ರಾಮ ನವಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಮಣ್ಣ ಇಲ್ಲೂರ, ಮಂಜುನಾಥ ಇಟಗಿ, ಶಿವು ನವಲಗುಂದ, ಚಂದ್ರಪ್ಪ ಬಳ್ಳಾರಿ, ಆನಂದ ರಾಮೇನಹಳ್ಳಿ, ವೆಂಕಟೇಶ ತೋಟದ, ಪರಶುರಾಮ ಸುಣಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುದ್ಧ ಎಫೆಕ್ಟ್, ರಸಗೊಬ್ಬರ ಬಳಕೆ ಮೇಲೆ ನಿಗಾ
ಆಧ್ಯಾತ್ಮಿಕ ನೆಲೆಯಲ್ಲಿ ಮಕ್ಕಳ ಬದುಕು ರೂಪಗೊಳ್ಳಲಿ-ಪೇಜಾವರ ಶ್ರೀ