ಕನ್ನಡಪ್ರಭ ವಾರ್ತೆ ಉಡುಪಿ
ರಾಮ ಮಂದಿರ ಅವರದ್ದೂ ಅಲ್ಲ, ನಮ್ಮದೂ ಅಲ್ಲ, ಅಯೋಧ್ಯಾ ರಾಮ ಮಂದಿರ 140 ಕೋಟಿ ಮಂದಿ ಜನರದ್ದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹಬ್ಬಾಳ್ಕಾರ್ ಹೇಳಿದ್ದಾರೆ.ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ಕೊಟ್ಟಿದ್ದೇನೆ. ರಾಮ, ಕೃಷ್ಣ, ಪರಮೇಶ್ವರನ ಮೇಲೆ ನನಗೆ ವೈಯಕ್ತಿಕವಾಗಿ ಬಹಳ ಭಕ್ತಿ ಇದೆ. ನಾನು ನಮ್ಮ ಸಂಸ್ಕೃತಿ, ಭಕ್ತಿಯನ್ನು ಆಚರಿಸುತ್ತೇನೆ ಎಂದರು.
ರಾಮಮಂದಿರ ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ, ನಾನು ದೈವೀಭಕ್ತಳು ಎಂದು ಪದೇ ಪದೇ ಹೇಳುತ್ತೇನೆ, ರಾಮ ಮಂದಿರಕ್ಕೆ ಒಂದಲ್ಲ ಒಂದು ದಿನ ಹೋಗುತ್ತೇನೆ ಎಂದು ಹೇಳಿದರು.ಪರ್ಯಾಯಕ್ಕೆ ಸರ್ಕಾರ 10 ಕೋಟಿ ರು. ಮಂಜೂರು:
ಉಡುಪಿ ಪರ್ಯಾಯಕ್ಕೆ ರಾಜ್ಯ ಸರ್ಕಾರ 10 ಕೋಟಿ ರು.ಗಳನ್ನು ಮಂಜೂರು ಮಾಡಿದ್ದು ಸದ್ಯವೇ ಬಿಡುಗಡೆಯಾಗಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರ್ಯಾಯಕ್ಕೆ ಸರ್ಕಾರ ಅನುದಾನ ನೀಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದರು.ಉಡುಪಿ ನಗರದ ಸುಂದರೀಕರಣಕ್ಕೆ ನಗರೋತ್ಥಾನ ನಿಧಿಯಿಂದ ಈಗಾಗಲೇ 30 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಪರ್ಯಾಯದ ಹಿನ್ನಲೆಯಲ್ಲಿ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 10 ಕೋಟಿ ರು. ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಮಂಜೂರಾಗಿದೆ ಎಂದರು.ಉಡುಪಿಯ ಪರ್ಯಾಯೋತ್ಸವ ದೊಡ್ಡ ಸಂಪ್ರದಾಯವಾಗಿದ್ದು, ತಾನು ಪ್ರಥಮ ಬಾರಿಗೆ ಅದರಲ್ಲಿ ಭಾಗಿಯಾಗುತಿದ್ದೇನೆ, ಅದಕ್ಕಾಗಿ ಕುಟುಂಬ ಸಹಿತ ಬಂದಿದ್ದೇನೆ ಎಂದರು.ಪರ್ಯಾಯೋತ್ಸವಕ್ಕೆ ಮುಖ್ಯಮಂತ್ರಿ ಅವರಿಗೂ ಆಹ್ವಾನ ನೀಡಲಾಗಿದೆ. ಆದರೇ ಬೇರೆ ಕಾರ್ಯಕ್ರಮಗಳಿರುವುದರಿಂದ ಅವರು ಭಾಗವಹಿಸುತ್ತಿಲ್ಲ. ಗೃಹಸಚಿವರು ಪರ್ಯಾಯ ದರ್ಭಾರ್ ನಲ್ಲಿ ಭಾಗವಹಿಸುತ್ತಾರೆ ಎಂದರು.