ಕಾರಟಗಿ: ಅಯೋಧ್ಯೆಯಲ್ಲಿ ಜರುಗಿದ ರಾಮಮಂದಿರ ಉದ್ಘಾಟನೆ ನಿಮಿತ್ತ ಸೋಮವಾರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮ, ಕ್ಯಾಂಪುಗಳಲ್ಲಿ ಶ್ರೀರಾಮನ ದೇವಸ್ಥಾನಗಳಲ್ಲಿ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳು ನಡೆದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಬೆಳಿಗ್ಗೆಯಿಂದ ಕೆಲ ದೇವಸ್ಥಾನಗಳಲ್ಲಿ ಅಗ್ನಿಹೋತ್ರ ಹೋಮ ಹಾಗೂ ಶ್ರೀರಾಮನಿಗೆ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳಿಂದ ಸಂಭ್ರಮ ಸಡಗರದಿಂದ ಜರುಗಿದವು.ಇಲ್ಲಿನ ನವಲಿ ರಸ್ತೆಯ ವಾಸವಿ ದೇವಸ್ಥಾನದಲ್ಲಿ ವಿವಿಧ ಪೂಜೆಗಳು ನಡೆದವು. ಆರ್ಯವೈಶ್ಯ ಸಮಾಜ ಹಮ್ಮಿಕೊಂಡ ಈ ವಿಶೇಷ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಶ್ರೀರಾಮ ನಾಮ ಜಪ ಪೂಜೆಗಳು, ಪಲ್ಲಕ್ಕಿ ಉತ್ಸವಗಳು ನಡೆದವು.
ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆ ಕಾರ್ಯಕ್ರಮಗಳ ನೇರಪ್ರಸಾರ ಕಾರ್ಯಕ್ರಮ ಆಯೋಜಿಸಿದ್ದರು. ಬೆಳಿಗ್ಗೆಯಿಂದಲೇ ವಾಸವಿ ದೇವಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಸಲ್ಲಿಸಿದ ನೂರಾರು ಮಹಿಳೆಯರು ದೀಪ ಬೆಳಗಿಸುವ ಮೂಲಕ ಶ್ರೀರಾಮನ ನಾಮಸ್ಮರಣೆ ಮಾಡಿದರು.ಇನ್ನು ಹೋಮ-ಹವನ ಭಜನೆ ಸೇರಿದಂತೆ ಮತ್ತು ಶ್ರೀರಾಮನ ಪಲ್ಲಕ್ಕಿ ಉತ್ಸವವನ್ನು ದೇವಸ್ಥಾನ ಸಮಿತಿಯ ಹಿರಿಯರು ಶ್ರೀ ರಾಮನ ನಾಮಸ್ಮರಣೆ ಯೊಂದಿಗೆ ಉತ್ಸವ ನಡೆಸಿದರು . ಇನ್ನು ರಾತ್ರಿ ವೇಳೆ ಶ್ರೀ ರಾಮನ ಭಾವಚಿತ್ರಕ್ಕೆ ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾಲಂಕಾರ ಮಾಡಿದರು. ಭಕ್ತರಿಗೆ ಪಾನಕದ ಜತೆಗೆ ಮಂತ್ರಾಕ್ಷತೆ ಮತ್ತು ತೀರ್ಥ ವಿತರಿಸಿದರು. ನಂತರ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಪಟ್ಟಣದ ರಾಘವೇಂದ್ರ ಮಠದಲ್ಲಿ ಸಹ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.ತಾಲೂಕಿನ ಈಳಿಗನೂರಿನ ಆರಾಧ್ಯ ದೈವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.ಇನ್ನು ಬಸವಣ್ಣಕ್ಯಾಂಪಿ, ಚೆಳ್ಳೂರು ಕ್ಯಾಂಪ್ ಮತ್ತು ದೇವಿಕ್ಯಾಂಪಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಶ್ರೀರಾಮನ ಪೂಜೆಗಳು ನಡೆದವು. ಕ್ಯಾಂಪಿನ ನಿವಾಸಿಗಳು ದೇವಸ್ಥಾನ ಅಲಂಕರಿಸಿದ್ದರು. ಪೂಜೆ ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಸಹ ನಡೆಸಲಾಯಿತು.ತಾಲೂಕಿನಾದ್ಯಂತ ಜೈ ಶ್ರೀರಾಮ್ ಶ್ರೀರಾಮನ ನಾಮಸ್ಮರಣೆ ಮೊಳಗಿತು.