ಕನ್ನಡಪ್ರಭ ವಾರ್ತೆ ಉಡುಪಿಅಯೋಧ್ಯೆಗೆ ತೆರಳಿದ್ದ ರಾಮಮಂದಿರದ ಕರಸೇವಕ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರಿಯ ಕಾರ್ಯಕರ್ತ ಇಲ್ಲಿನ ಪಾಂಗಾಳದ ನಿವಾಸಿ ಪಾಂಡುರಂಗ ಶಾನುಭಾಗ್ (66) ಭಾನುವಾರ ಮಧ್ಯಾಹ್ನ ಅಲ್ಲಿನ ರಾಮಮಂದಿರದ ಬಳಿ ಹೃದಯಾಘಾತದಿಂದ ನಿಧನರಾದರು.ಪತ್ನಿ, ಮಗ, ಅಣ್ಣ - ಅತ್ತಿಗೆ ಅವರ ಮಗನ ಜೊತೆಗೆ ಅಯೋಧ್ಯೆಗೆ ತೆರಳಿದ್ದ ಶ್ಯಾನುಭಾಗ್, ಬೆಳಗ್ಗೆ ರಾಮನ ದರ್ಶನದ ಅನುಭವ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿದ್ದರಲ್ಲದೆ, ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂತೋಷಪಟ್ಟಿದ್ದರು.ಮಧ್ಯಾಹ್ನ 3 ಗಂಟೆಗೆ ಪುನಃ ರಾಮಮಂದಿರದಲ್ಲಿ ನಡೆಯುವ ರಾಮನ ಪಲ್ಲಕ್ಕಿಉತ್ಸವಕ್ಕೆ ಕುಟುಂಬಸ್ಥರೊಂದಿಗೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಯಿತು. ತಕ್ಷಣ ಅವರ ಮಗ, ರಾಮಮಂದಿರದಲ್ಲಿ ಕಳೆದ 48 ದಿನಗಳಿಂದ ಮಂಡಲೋತ್ಸವದಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿರುವ ಸುವರ್ಧನ್ ನಾಯಕ್ ಅವರಿಗೆ ಕರೆ ಮಾಡಿದರು. ತಕ್ಷಣ ನಾಯಕ್ ಅವರು ಶ್ಯಾನುಭಾಗ್ ಅವರನ್ನು ಸ್ಥಳೀಯ ಶ್ರೀರಾಮ್ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.
ಹುಟ್ಟಿನಿಂದಲೇ ಅಂಧರಾದ ಶ್ಯಾನುಭಾಗ್, ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗ ನಡೆಸಿ ನಿವೃತ್ತರಾಗಿದ್ದರು. ಜೀವನ ಪರ್ಯಂತ ರಾಷ್ಟ್ರೀಯವಾದ, ಹಿಂದು ಸಿದ್ಧಾಂತಕ್ಕಾಗಿ ಕೆಲಸ ಮಾಡಿದ್ದ ಅವರು, ಈ ವಯಸ್ಸಿನಲ್ಲಿಯೂ ಸಂಘ ಪರಿವಾರದಲ್ಲಿ ಅತ್ಯಂತ ಸಕ್ರಿಯರಾಗಿದ್ದರು. ಈ ಹಿಂದೆಯೂ ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರು, ದೈಹಿಕ ನ್ಯೂನತೆಯ ನಡುವೆಯೂ ಕರಸೇವೆಯಲ್ಲಿ ಭಾಗವಹಿಸಿದ್ದರು.ದೈಹಿಕವಾಗಿ ಅಂಧತ್ವ ಇದ್ದರೂ, ಅಪೂರ್ವ ನೆನಪು ಶಕ್ತಿಯನ್ನು ಹೊಂದಿದ್ದರು. ಒಮ್ಮೆ ಅವರನ್ನು ಮಾತನಾಡಿಸಿ ಪರಿಚಯಿಸಿಕೊಂಡವರನ್ನು ಮತ್ತೊಮ್ಮೆ ಸಿಕ್ಕಿದಾಗ ಧ್ವನಿಯಲ್ಲಿಯೇ ಗುರುತು, ಹೆಸರು ಹಿಡಿದು ಮಾತನಾಡಿಸುವಂತಹ ವಿಶೇಷ ಶಕ್ತಿಯನ್ನು ಹೊಂದಿದ್ದರು.* ಪೇಜಾವರ ಶ್ರಿಗಳಿಂದ ಸಂತಾಪ ಬೆಳಗ್ಗೆ ರಾಮಮಂದಿರಕ್ಕೆ ಬಂದಿದ್ದಾಗ ಕರಸೇವಕ ಶಾನುಭಾಗರನ್ನು ಪೇಜಾವರ ಶ್ರೀಗಳು ಸಂತೋಷದಿಂದ ಬರಮಾಡಿಕೊಂಡು ತೀರ್ಥಪ್ರಸಾದ ನೀಡಿದ್ದರು. ಸಂಸ್ಕೃತದಲ್ಲಿಯೇ ಅವರೊಂದಿಗೆ ಮಾತನಾಡಿ ಕುಶಲೋಪರಿ ನಡೆಸಿದ್ದರು. ಸಂಜೆ ಪಲ್ಲಕ್ಕಿ ಉತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಶ್ಯಾನುಭಾಗರ ನಿಧನದ ಸುದ್ದಿ ಕೇಳಿ ಪೇಜಾವರ ಶ್ರೀಗಳು ತೀವ್ರ ಆಘಾತ ವ್ಯಕ್ತಪಡಿಸಿದರು. ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.