ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ಹಳೆಯ ಬಸ್ ನಿಲ್ದಾಣ ಸಮೀಪದ ಆಂಜನೇಯ ದೇಗುಲದವರೆಗೆ ಮಹಿಳೆಯರಿಂದ ಆಕರ್ಷಕ ರಂಗೋಲಿ ಬಿಡಿಸುವುದರೊಂದಿಗೆ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಗಳು ನಡೆಯಲಿವೆ.
ಲೀಲಾವತಿ ಬಡಾವಣೆಯಲ್ಲಿರುವ ಪುರಸಭೆ ಉದ್ಯಾನವನ ದ ರಾಮ ಮಂದಿರ. ಹಳೇ ಎಂ.ಸಿ.ರಸ್ತೆಯ ಆಂಜನೇಯ ಸ್ವಾಮಿ ದೇವಾಲಯ. ಕೋಟೆ ಬೀದಿಯ ಶ್ರೀರಾಮ ಮಂದಿರ ದೇವಾಲಯಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ದಲ್ಲಿ ಬಾಲರಾಮ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ರಾಮೋತ್ಸವದ ಪೂಜೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.ಶಿವಪುರದ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜಾ ಕಾರ್ಯ
ಬೆಳಗ್ಗೆ ಮಂದಿರದಲ್ಲಿ ಸೀತಾರಾಮ ಲಕ್ಷ್ಮಣ ಮತ್ತು ಆಂಜನೇಯ ಸಮೇತ ಮೂಲ ವಿಗ್ರಹಕ್ಕೆ ಅಭಿಷೇಕ ಮತ್ತು ಹೋಮದ ನಂತರ ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ. ಬಳಿಕ ರಾಮಮಂದಿರದ ವತಿಯಿಂದ ಶ್ರೀಭೈರವೇಶ್ವರ ದೇಗುಲದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
1992ರಲ್ಲಿ ನಡೆದ ಅಯೋಧ್ಯೆಯ ಕರಸವೇ ಸಂದರ್ಭದಲ್ಲಿ ಶಂಕುಸ್ಥಾಪನೆಗೊಂಡು ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಶಿವಪುರದ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಶಿವಪುರ ರಾಮಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.ಮಧ್ಯಾಹ್ನ 2.30 ಸುಮಾರಿಗೆ ಮದ್ದೂರಿನ ಪ್ರವಾಸಿ ಮಂದಿರದ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ಶ್ರೀ ರಾಮಮಂದಿರದ ವರೆಗೆ ಪುಷ್ಪಾಲಂಕಾರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ ಶ್ರೀರಾಮ ಮಂದಿರದಲ್ಲಿ 28 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜಿ. ಎಂ. ನರಸಿಂಹಮೂರ್ತಿ ಹಾಗೂ 18 ವರ್ಷಗಳ ಕಾಲ ಅರ್ಚಕರಾಗಿ ಕಾರ್ಯನಿರ್ವಹಿಸಿದ ಕೃಷ್ಣಚಾರ್ ಅವರುಗಳನ್ನು ದೇಗುಲದ ಆಡಳಿತ ಮಂಡಳಿ ಹಾಗೂ ಶಿವಪುರ ಗ್ರಾಮಸ್ಥರಿಂದ ಅಭಿನಂದಿಸಲಾಗುವುದು ಎಂದು ಆಡಳಿತ ಮಂಡಳಿಯ ಎಸ್ .ಕೆ. ತಮ್ಮಣ್ಣ ತಿಳಿಸಿದ್ದಾರೆ.