ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಖಾತೆ ಬದಲು

KannadaprabhaNewsNetwork |  
Published : Aug 13, 2026, 01:15 AM IST
ರಾಮಲಿಂಗಾ ರೆಡ್ಡಿ | Kannada Prabha

ಸಾರಾಂಶ

ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಯವರ ಖಾತೆಯನ್ನು ಇದೀಗ ಬದಲಿಸಲಾಗಿದೆ. ಜಲಸಂಪನ್ಮೂಲ ಖಾತೆ ಬದಲು ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿಯವರ ಖಾತೆಯನ್ನು ಇದೀಗ ಬದಲಿಸಲಾಗಿದೆ. ಜಲಸಂಪನ್ಮೂಲ ಖಾತೆ ಬದಲು ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ ನೀಡಲಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಖುದ್ದು ಶಿವಕುಮಾರ್‌ ಅವರು ತಡರಾತ್ರಿವರೆಗೆ ಮನವೊಲಿಸಿದ್ದರು. ಇದೀಗ ಸಂಪುಟ ವಿಸ್ತರಣೆ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ಬದಲಿಗೆ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಅಲ್ಪಸಂಖ್ಯಾತರಿಗೆ ಆದ್ಯತೆ:ಖಾತೆ ಹಂಚಿಕೆಯಲ್ಲೂ ಅಲ್ಪಸಂಖ್ಯಾತ ಸಚಿವರಿಗೆ ಆದ್ಯತೆ ನೀಡಲಾಗಿದೆ. ಜಮೀರ್‌ ಅಹ್ಮದ್‌ಖಾನ್‌ ಅವರಿಗೆ ವಸತಿ ಇಲಾಖೆ ತಪ್ಪಿಸಲು ತೀವ್ರ ಪ್ರಯತ್ನ ನಡೆದ ಹೊರತಾಗಿಯೂ ಜಮೀರ್‌ ಅವರು ವಸತಿ ಇಲಾಖೆ ಉಳಿಸಿಕೊಂಡಿದ್ದಾರೆ. ಯು.ಟಿ. ಖಾದರ್‌, ರಿಜ್ವಾನ್‌ ಅರ್ಷದ್ ಅವರಿಗೂ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ.ಹಳೆ ಖಾತೆಯಲ್ಲೇ ಮುಂದುವರೆದವರು:ಸಂತೋಷ್‌ ಲಾಡ್‌ ಅವರಿಗೆ ಕಾರ್ಮಿಕ ಮತ್ತು ಉದ್ಯೋಗ ಖಾತೆ, ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಖಾತೆ, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಶಿವರಾಜ್‌ ತಂಗಡಗಿ ಅವರ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳೇ ಮುಂದುವರೆಸಲಾಗಿದೆ.

9 ಮಂದಿ ಹೊಸಬರಿಗೆ ತೂಕದ ಖಾತೆಕೆ.ಎಚ್. ಮುನಿಯಪ್ಪ ಅವರಿಂದ ತೆರವಾದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೂತನ ಸಚಿವ ರಿಜ್ವಾನ್‌ ಅರ್ಷದ್ ಅವರಿಗೆ ನೀಡಲಾಗಿದೆ. ಹೊಸದಾಗಿ ಸಂಪುಟ ಸೇರಿರುವ ಲಕ್ಷ್ಮಣ ಸವದಿ ಅವರಿಗೆ ಕೃಷಿ ಮಾರುಕಟ್ಟೆ ಹೊರತುಪಡಿಸಿ ಸಹಕಾರ ಇಲಾಖೆ, ರುದ್ರಪ್ಪ ಲಮಾಣಿ ಅವರಿಗೆ ಸಕ್ಕರೆ ಮತ್ತು ಜವಳಿ, ಟಿ. ರಘು ಮೂರ್ತಿ ಅವರಿಗೆ ಪರಿಶಿಷ್ಟ ಪಂಡಗಳ ಕಲ್ಯಾಣ ಇಲಾಖೆ, ಡಾ. ಅಜಯ್‌ ಸಿಂಗ್‌ ಅವರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಇಲಾಖೆ, ಬಸವರಾಜ ರಾಯರಡ್ಡಿ ಅವರಿಗೆ ಉನ್ನತ ಶಿಕ್ಷಣ, ಶಿವಲಿಂಗೇಗೌಡ ಅವರಿಗೆ ಅಬಕಾರಿ, ಪುಟ್ಟರಂಗಶೆಟ್ಟಿ ಅವರಿಗೆ ವೆಂಕಟೇಶ್‌ ಅವರಿಂದ ತೆರವಾದ ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ, ವಿಜಯಾನಂದ ಕಾಶಪ್ಪನವರ್‌ ಅವರಿಗೆ ಸಣ್ಣ ಕೈಗಾರಿಕೆ ಜವಾಬ್ದಾರಿ ನೀಡಲಾಗಿದೆ.ಮೊದಲ ಬಾರಿಗೆ ಶಾಸಕರಾಗಿ ಮೊದಲ ಯತ್ನದಲ್ಲೇ ಸಂಪುಟ ಸೇರಿರುವ ಕೆ.ಎಸ್‌. ಬಸವಂತಪ್ಪ ಅವರಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳ ಸಾರಿಗೆ ಇಲಾಖೆಗಳ ಹೊಣೆ ವಹಿಸಲಾಗಿದೆ.ಹಾಲಿ ಸಚಿವರ ಬದಲಾದ ಖಾತೆಗಳು:ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ, ಅಲ್ಪಸಂಖ್ಯಾತ ಹಾಗೂ ಹಜ್‌, ವಕ್ಫ್‌ ಖಾತೆಗಳನ್ನು ಹೊಂದಿದ್ದ ಬಿ.ಝಡ್‌. ಜಮೀರ್‌ ಅಹ್ಮದ್‌ಖಾನ್‌ ಅವರ ಬಳಿ ವಸತಿ ಖಾತೆ ಮಾತ್ರ ಉಳಿಸಲಾಗಿದೆ. ಉಳಿದಂತೆ ಅಲ್ಪಸಂಖ್ಯಾತ ಹಾಗೂ ಹಜ್‌, ವಕ್ಫ್‌ ಖಾತೆಯನ್ನು ಸಚಿವ ಯು.ಟಿ. ಖಾದರ್‌ ಅವರಿಗೆ ಆರೋಗ್ಯ ಇಲಾಖೆಯ ಜತೆ ಹೆಚ್ಚುವರಿಯಾಗಿ ವಹಿಸಲಾಗಿದೆ.ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಚಲುವರಾಯಸ್ವಾಮಿ ಅವರಿಗೆ ರಾಮಲಿಂಗಾರೆಡ್ಡಿ ಅವರಿಂದ ತೆರವಾದ ಬೃಹತ್‌ ಮತ್ತು ಮಧ್ಯಮ ನೀರಾವರಿ ಇಲಾಖೆ ಹೊಣೆ ನೀಡಲಾಗಿದೆ.

ನರೇಂದ್ರಸ್ವಾಮಿಗೆ ಕೃಷಿ ಖಾತೆ:ಸಮಾಜ ಕಲ್ಯಾಣದ ಮೇಲೆ ಕಣ್ಣಿಟ್ಟಿದ್ದ ನರೇಂದ್ರ ಸ್ವಾಮಿ ಅವರಿಗೆ ಕೃಷಿ ಖಾತೆ ನೀಡಲಾಗಿದೆ. ಎಚ್.ಸಿ. ಬಾಲಕೃಷ್ಣ ಅವರಿಗೆ ಪೌರಾಡಳಿತ, ಬಿ. ನಾಗೇಂದ್ರ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ನೀಡಲಾಗಿದೆ.ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಖಾತೆ ವಹಿಸಿಕೊಂಡಿದ್ದ ನಾಗೇಂದ್ರ ಅವರು ಮತ್ತೆ ಅದೇ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ವಾಲ್ಮೀಕಿ ಹಗರಣದ ಆರೋಪದ ಹಿನ್ನೆಲೆ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದೆ.

ಸಿಎಂ ಬಳಿಯೇ ಉಳಿದ ಖಾತೆಗಳು:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಬಳಿ ಯಾರಿಗೂ ಹಂಚಿಕೆಯಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಜತೆಗೆ ಪ್ರಮುಖ ಏಳು ಖಾತೆಗಳು ಉಳಿದುಕೊಂಡಿವೆ.ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್), ಗುಪ್ತಚರ, ಮಾಹಿತಿ, ಕಾನೂನು ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ನಗರ ಮತ್ತು ಪಟ್ಟಣ ಯೋಜನೆ ಆಯುಕ್ತಾಲಯ, ಬಿಡಿಎ ಹಾಗೂ ಬಿಎಆರ್‌ಡಿಎ ಶಿವಕುಮಾರ್‌ ಬಳಿಯೇ ಉಳಿದಿವೆ.

ಪೌರ ಕಾರ್ಮಿಕ ದಂಪತಿ ಪುತ್ರನಿಗೆ 2 ಖಾತೆ:ಪೌರಕಾರ್ಮಿಕ ದಂಪತಿಯ ಪುತ್ರ ಕೆ.ಎಸ್‌.ಬಸವಂತಪ್ಪ ಅವರಿಗೆ ಎರಡು ಪ್ರಮುಖ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಮುಜರಾಯಿ ಹಾಗೂ ಬಂದರು, ಮೀನುಗಾರಿಕೆ, ಒಳನಾಡ ಸಾರಿಗೆ ವಹಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ 100 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆ
ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ