ರಾಮನಗರ-ಮಾಗಡಿ ಬರಪೀಡಿತ ತಾಲೂಕು ಘೋಷಣೆ

KannadaprabhaNewsNetwork |  
Published : Aug 28, 2026, 01:15 AM IST
ತೀವ್ರ ಬರದಿಂದ ತತ್ತರಿಸಿದ್ದ ಕೂಡ್ಲಿಗಿ ಜನ ಗುಳೆ ಹೋದ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ವರದಿ | Kannada Prabha

ಸಾರಾಂಶ

ರಾಮನಗರ: ಮುಂಗಾರು ಅವಧಿಯಲ್ಲಿ ಮಳೆ ಕೊರತೆ, ಬೆಳೆಗಳ ಸ್ಥಿತಿಗತಿ ಮತ್ತು ಮಣ್ಣಿನ ತೇವಾಂಶ ಕಡಿಮೆಯಿಂದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ 5 ತಾಲೂಕುಗಳ ಪೈಕಿ 2 ತಾಲೂಕುಗಳನ್ನು ಮಾತ್ರ ತೀವ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ

ರಾಮನಗರ: ಮುಂಗಾರು ಅವಧಿಯಲ್ಲಿ ಮಳೆ ಕೊರತೆ, ಬೆಳೆಗಳ ಸ್ಥಿತಿಗತಿ ಮತ್ತು ಮಣ್ಣಿನ ತೇವಾಂಶ ಕಡಿಮೆಯಿಂದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ 5 ತಾಲೂಕುಗಳ ಪೈಕಿ 2 ತಾಲೂಕುಗಳನ್ನು ಮಾತ್ರ ತೀವ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಈ ಮುಂಗಾರಿನಲ್ಲಿ ಶೇಕಡ 34ರಷ್ಟು ಮಳೆ ಕೊರತೆ ಉಂಟಾಗಿದ್ದು, ಇಡೀ ಜಿಲ್ಲೆಯಲ್ಲಿ ಬರ ಆವರಿಸಿದೆ. ಹೀಗಿದ್ದರೂ ರಾಜ್ಯ ಸರ್ಕಾರ ರಾಮನಗರ ಮತ್ತು ಮಾಗಡಿ ತಾಲೂಕುಗಳನ್ನು ಮಾತ್ರ ಬರ ಪೀಡಿತ ತಾಲೂಕುಗಳಾಗಿ ಘೋಷಿಸಿದೆ.

ಈ ಬಾರಿ ಮುಂಗಾರು ಹಂಗಾಮು ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ. ಹಾಗಾಗಿ ಸರ್ವೆ ಮಾಡಿದ ಅಧಿಕಾರಿಗಳು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂಬುದಾಗಿ ಸರ್ಕಾರಕ್ಕೆ ವರದಿ ನೀಡಿದ್ದರು. ಮಳೆ ಮತ್ತು ಬೆಳೆ ಕೊರತೆ, ತೇವಾಂಶದ ಆಧಾರದ ಮೇಲೆ ಬರ ಪೀಡಿತ ಎಂದು ಗುರುತಿಸಲಾಗಿದೆ.

ಶೇ. 34ರಷ್ಟು ಮಳೆ ಕೊರತೆ:

ಈ ವೇಳೆಗೆ ಬಿತ್ತನೆಯಾಗಿ ಹರಗುವ ಕಾರ್ಯ ಮುಗಿಯಬೇಕಿತ್ತು. ಆದರೆ, ಇನ್ನೂ ಬಿತ್ತನೆಯೇ ಮಾಡಲಾಗಿಲ್ಲ. ಇನ್ನು ರಾಸುಗಳ ಮೇವಿಗೆ ಹಾಕಿದ್ದ ಮುಸುಕಿನ ಜೋಳ, ಹುರುಳಿ ಕೂಡ ಮಳೆ ಇಲ್ಲದೇ ಭೂಮಿ ಬಿಟ್ಟು ಮೇಲೆದ್ದಿಲ್ಲ. ಕೆಲವೆಡೆ ತೇವಾಂಶದ ಕೊರತೆಯಿಂದ ಚಿಗುರು ಹೊಡೆದಿಲ್ಲ. ಇದರಿಂದ ಸಾವಿರಾರು ರುಪಾಯಿ ವೆಚ್ಚ ಮಾಡಿದ ಖುಷ್ಕಿ ಭೂಮಿಯನ್ನೇ ನಂಬಿದ್ದ ರೈತರ ಮುಖದಲ್ಲಿ ದುಃಖ ಮಡುಗಟ್ಟಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕಳೆದ ಆಗಸ್ಟ್‌ನಲ್ಲಿ ಮಳೆ ಕೊರತೆ ಉಂಟಾಗಿದೆ. ಜತೆಗೆ, ಮಾನ್ಸೂನ್‌ ವ್ಯಾಪ್ತಿಯ ಜೂ.1ರಿಂದ ಆ.4ರ ತನಕ ಜಿಲ್ಲೆಯಲ್ಲಿ 166.8 ಮಿಲಿ ಮೀಟರ್‌ ವಾಡಿಕೆ ಮಳೆಗೆ 109.8 ಮಿಲಿ ಮೀಟರ್‌ ವಾಸ್ತವ ಮಳೆಯಾಗಿದೆ. ಆ ಮೂಲಕ ಶೇ.34ರಷ್ಟು ಮಳೆ ಕೊರತೆ ಕಂಡು ಬಂದಿದೆ. ಹೀಗಾಗಿ ರಾಗಿ ಹಾಗೂ ದ್ವಿದಳ ಧಾನ್ಯಗಳ ಬಿತ್ತನೆ ಕುಂಠಿತವಾಗಿದೆ.

ಕೃಷಿ ಚಟುವಟಿಕೆ ಹಿನ್ನಡೆ:

ಜಿಲ್ಲೆಯಲ್ಲಿ ಒಟ್ಟು 80,758 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿ ಪಡಿಸಿದ್ದು, 1106 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಎಳ್ಳು, ಅಲಸಂದೆ, ತೊಗರಿ , ಹುರುಳಿ, ಅವರೆ ಮತ್ತು ನೆಲಗಡಲೆ ಬೆಳೆಗಳು (ಶೇ.1.37ರಷ್ಟು) ಬಿತ್ತನೆಯಾಗಿದೆ. ಇನ್ನು ಜುಲೈ ಹಾಗೂ ಆಗಸ್ಟ್‌ನಲ್ಲಿ ಮಳೆ ಕೊರತೆಯಾದ್ದರಿಂದ ಜಿಲ್ಲೆಯ ಪ್ರಧಾನ ಬೆಳೆಯಾದ ರಾಗಿ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ.

ಘೋಷಣೆ ಬಳಿಕ:

ಸರ್ಕಾರ ಒಂದು ತಾಲೂಕನ್ನು ಬರ ಎಂದು ಘೋಷಿಸಿದ ಬಳಿಕ ಆ ತಾಲೂಕಿಗೆ ಬೆಳೆ ನಷ್ಟ ಪರಿಹಾರ ದೊರೆಯಲಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಇದ್ದರೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತದೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರು ಒದಗಿಸುವ ಸಂಬಂಧ ವ್ಯವಸ್ಥೆ ಮಾಡಲಾಗುತ್ತದೆ. ಗೋಶಾಲೆ ತೆರೆಯಲಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಬಾಕ್ಸ್ ..............

ಉಳಿದ ತಾಲೂಕು ಘೋಷಣೆ ಸಾಧ್ಯತೆ:

ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗದೆ ವಾತಾವರಣ ಇದೇ ರೀತಿ ಮುಂದುವರಿದರೆ ಕನಕಪುರ, ಹಾರೋಹಳ್ಳಿ ಹಾಗೂ ಚನ್ನಪಟ್ಟಣ ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ. ಮಳೆ ಇಲ್ಲದ ಕಾರಣ ಕೆರೆ ಕಟ್ಟೆಗಳು ಹಾಗೂ ಜಲಾಶಯಗಳು ನೀರಿಲ್ಲದೆ ಬರಿದಾಗಿವೆ.

ಈಗ ಚನ್ನಪಟ್ಟಣದಲ್ಲಿ 11,023 ಹೆಕ್ಟೇರ್ ಗುರಿಯಲ್ಲಿ 298 ಹೆಕ್ಟೇರ್ , ಕನಕಪುರ ತಾಲೂಕಿನಲ್ಲಿ 22,233 ಹೆಕ್ಟೇರ್ ಪೈಕಿ ಕೇವಲ 240 ಹೆಕ್ಟೇರ್ ಹಾಗೂ ಹಾರೋಹಳ್ಳಿ ತಾಲೂಕಿನಲ್ಲಿ 10,133 ಹೆಕ್ಟೇರ್ ಪೈಕಿ ಕೇವಲ 4 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಸಕಾಲಕ್ಕೆ ಮಳೆಯಾಗದಿದ್ದರೆ, ಈ ನಾಲ್ಕು ತಾಲೂಕು ಸಹ ಬರ ಪೀಡಿತವಾಗಲಿದೆ.

ಬಾಕ್ಸ್ .......

64 ಗ್ರಾಮಗಳಲ್ಲಿ ಕುಡಿವ ನೀರಿಗೆ ಸಮಸ್ಯೆ :

ಜಿಲ್ಲೆಯಲ್ಲಿ ಒಟ್ಟು 34 ಗ್ರಾಮ ಪಂಚಾಯಿತಿಗಳ 64 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, 24 ಗ್ರಾಮಗಳಲ್ಲಿ 24 ಬಾಡಿಗೆ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 41 ಗ್ರಾಮಗಳಲ್ಲಿ 44 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಬಾಕ್ಸ್ ...............

ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ :

ಫಸಲ್ ಬಿಮಾ ಯೋಜನೆಯಡಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಬೆಳೆ ವಿಮೆ ಅಡಿ ಬಿತ್ತನೆ ತಡೆ ವಿಶೇಷ ಅವಕಾಶದಡಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರೈತರು ವಿಮೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ರೈತರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

(ಬರದ ಸಾಂದರ್ಭಿಕ ಫೋಟೋ ಬಳಸಿ ಸರ್‌)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾರಾಯಣ ಶ್ರೀಗಳ ಜಯಂತಿ: ಪ್ರಣವಾನಂದ ಶ್ರೀಗಳ ಕಡೆಗಣನೆ
ಇಂದು ಶರಣ ಶ್ರೀನುಲಿಯ ಚಂದಯ್ಯ ಜಯಂತಿ