ರಾಮನಗರ ಜಿಲ್ಲೆ ಮರುನಾಮಕರಣ ಚರ್ಚೆ ಮತ್ತೆ ಮುನ್ನಲೆಗೆ

KannadaprabhaNewsNetwork | Published : Jul 5, 2024 12:52 AM

ಸಾರಾಂಶ

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಆಗಲಿದೆಯೇ ಅಥವಾ ರಾಮನಗರ ಜಿಲ್ಲೆಯ 5 ತಾಲೂಕುಗಳು ಬೆಂಗಳೂರಿಗೆ ಸೇರಲಿವೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಆಗಲಿದೆಯೇ ಅಥವಾ ರಾಮನಗರ ಜಿಲ್ಲೆಯ 5 ತಾಲೂಕುಗಳು ಬೆಂಗಳೂರಿಗೆ ಸೇರಲಿವೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಇದಕ್ಕೆ ಕಾರಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಳೆದ ವರ್ಷ ಹಾಗೂ ಈ ವರ್ಷ ಆಡಿರುವ ಭಿನ್ನವಾದ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಇದು ಜನರಲ್ಲಿ ಗೊಂದಲ ಮೂಡಿಸಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳ ನಡುವೆ ರಾಜಕೀಯ ಸಂಘರ್ಷಕ್ಕೂ ಎಡೆ ಮಾಡಿಕೊಟ್ಟಿದೆ.

ಕಳೆದ ವರ್ಷ(2023) ಅಕ್ಟೋಬರ್‌ನಲ್ಲಿ ಡಿ.ಕೆ.ಶಿವಕುಮಾರ್ ನಾವು ರಾಮನಗರ ಜಿಲ್ಲೆಯವರಲ್ಲ. ಬೆಂಗಳೂರು ಜಿಲ್ಲೆಯವರು. ರಾಮನಗರ ಅಂತ ಹೇಳಿ ನಮ್ಮನ್ನು ಮೂಲೆಗೆ ಸೇರಿಸಬೇಡಿ. ಕೆಲವರು ಹೆಸರಿಗೆ ಹೆಸರು ಮಾಡಿದ್ದಾರೆ. ಕನಕಪುರ ಬೆಂಗಳೂರಿಗೆ ಸೇರಲಿದ್ದು, ನಾವು ಬೆಂಗಳೂರಿನವರು ಎಂದು ಹೇಳಿದ್ದರು.

ಈಗ (2024) ನಾವು ಬೆಂಗಳೂರು ಜಿಲ್ಲೆಯವರು. ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ಎಲ್ಲವೂ ಬೆಂಗಳೂರಿಗೆ ಸೇರಲಿವೆ. ಇನ್ನೆರಡು ದಿನ ಕಾದು ನೋಡಿ, ಇದಕ್ಕೆಲ್ಲ ಉತ್ತರ ಸಿಗಲಿದೆ. ನಮ್ಮ ಪಠ್ಯಪುಸ್ತಗಳಲ್ಲು ಬೆಂಗಳೂರು ಎಂದೇ ಇಡೆ. ಮುಂದೆ ಎಲ್ಲಾ ತಾಲೂಕುಗಳು ಬೆಂಗಳೂರಿಗೆ ಸೇರಲಿದ್ದು, ರಾಮನಗರವು ವಿಭಾಗವಾಗಿಯೇ ಇರಲಿದೆ ಎಂದಿದ್ದಾರೆ.

ಮೊದಲ ಬಾರಿ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆಯ ಮರು ನಾಮಕರಣ ಕುರಿತು ಮಾತನಾಡಿದಾಗ ಜೆಡಿಎಸ್ - ಬಿಜೆಪಿ ನಾಯಕರ ನಡುವೆ ವಾಕ್ಸಮರವೇ ನಡೆದಿತ್ತು. ಜೆಡಿಎಸ್ ನಾಯಕರಾದ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸೇರಿದಂತೆ ಅನೇಕರು ಜಿಲ್ಲೆ ಹೆಸರು ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ರಾಮನಗರ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕುಮಾರಸ್ವಾಮಿ, ಒಂದು ಹೆಜ್ಜೆ ಮುಂದೆ ಹೋಗಿ ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ. ಚೂರುಚೂರು ಮಾಡುವುದಕ್ಕೆ ರಾಮನಗರ ಕಲ್ಲು ಬಂಡೆಯೇ ಎಂದೆಲ್ಲ ಪ್ರಶ್ನಿಸಿದ್ದರು. ಅಲ್ಲದೆ, ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ತನ್ನ ಕೊನೆ ಉಸಿರು ಇರುವವರೆಗೂ ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಶಪಥ ಕೂಡ ಮಾಡಿದ್ದರು.

ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೂ ಬೀರಿತು. ಜೆಡಿಎಸ್ - ಬಿಜೆಪಿ ನಾಯಕರು ಇದನ್ನು ಕಾಂಗ್ರೆಸ್ ಮೇಲೆ ಅಸ್ತ್ರವಾಗಿ ಬಳಸಿ ಯಶಸ್ವಿಯಾದರು.

ಇದೀಗ ಮತ್ತೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹೊಸ್ತಿಲಲ್ಲಿ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳು ಬೆಂಗಳೂರಿಗೆ ಸೇರಲಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿರುವ ಮಾತಿನ ಒಳಾರ್ಥವೇನು? ರಾಮನಗರ ಜಿಲ್ಲೆ ಎಂದಿರುವ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಆಗಲಿದಿಯೇ ಅಥವಾ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳನ್ನು ಸೇರಿಸಿ ಬೆಂಗಳೂರು ಜಿಲ್ಲೆಯನ್ನು ಅಸ್ತಿತ್ವಕ್ಕೆ ತರುತ್ತಾರೆಯೇ ಎಂದೆಲ್ಲ ವ್ಯಾಖ್ಯಾನ ಮಾಡಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಭಜನೆಯಾಗಿ ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು. ಸಭೆ ಸಮಾರಂಭಗಳಲ್ಲಿ ರಾಮನಗರ ಜಿಲ್ಲೆ ಅಂತ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದರು. ಆಗಲೇ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಇಡಬೇಕಿತ್ತು ಎಂದು ಇಂಗಿತ ವ್ಯಕ್ತಪಡಿಸುತ್ತಿದ್ದರು.

ಆಗ ಪ್ರಯತ್ನ, ಈಗ ವಿರೋಧ:

ಇದಾದ ಬಳಿಕ ಹಿಂದಿನ ಬಿಜೆಪಿ ಸರ್ಕಾರ ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡಲು ಮುಂದಾಗಿತ್ತು. ಇದಕ್ಕಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ . ಅಶ್ವತ್ಥ ನಾರಾಯಣ ಹೆಚ್ಚಿನ ಆಸಕ್ತಿ ವಹಿಸಿದ್ದರು. ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಕೈಬಿಟ್ಟಿತು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡುವ ಅಥವಾ ಜಿಲ್ಲೆಯ ತಾಲೂಕುಗಳನ್ನು ಬೆಂಗಳೂರಿಗೆ ಸೇರಿಸುವ ಪ್ರಯತ್ನ ನಡೆದಿದೆ. ಇದು ರಾಜಕೀಯ ಸಮರಕ್ಕೂ ಕಾರಣವಾಗುವ ಸಾಧ್ಯತೆಗಳಿವೆ.

ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ನೇಮ್ ಇದೆ. ಆ ಹೆಸರಿದ್ದರೆ ರಾಮನಗರ ಜಿಲ್ಲೆಗೂ ಅದರದೆ ಆದ ಸ್ಥಾನಮಾನ ಇರುತ್ತದೆ. ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ, ನಷ್ಟ ಆಗುವುದಿಲ್ಲ. ಜೊತೆಗೆ ಜಿಲ್ಲೆಯ ಭೂಮಿ ಬೆಲೆ ಏರಿಕೆಯಾಗಲಿದ್ದು, ಹೆಚ್ಚಿನ ಕೈಗಾರಿಕೆಗಳು ಬರಲಿವೆ. ಅನುದಾನ, ಮೂಲಭೂತ ಸೌಕರ್ಯಗಳು ಸಿಗಲಿವೆ ಎಂಬುದು ಕಾಂಗ್ರೆಸ್ಸಿಗರ ವಾದ.

ರಾಮನಗರಕ್ಕೆ ರಾಮನ ಹೆಸರಿದ್ದು, ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವುದರಿಂದ ಅಥವಾ ತಾಲೂಕುಗಳನ್ನು ಬೆಂಗಳೂರಿಗೆ ಸೇರಿವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ಜೆಡಿಎಸ್ - ಬಿಜೆಪಿ ನಾಯಕರು.

ಬಾಕ್ಸ್ ..............

ಜಿಲ್ಲಾಧಿಕಾರಿ ಅವಿನಾಶ್ ಎತ್ತಂಗಡಿ ?

ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಹಾಗೂ ರಾಮನಗರ ಜಿಲ್ಲೆಯ 5 ತಾಲೂಕುಗಳು ಬೆಂಗಳೂರಿಗೆ ಸೇರಿಸುವ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ರವರ ವರ್ಗಾವಣೆ ಮಾತುಗಳು ಕೇಳಿ ಬರುತ್ತಿದೆ.

2013ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅವಿನಾಶ್ ರಾಮನಗರ ಜಿಲ್ಲೆಗೆ ಬರುವುದಕ್ಕೂ ಮುನ್ನ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ರಾಯಚೂರು ಜಿಪಂ ಸಿಇಒ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಪಂ ಸಿಇಒ ಆಗಿ ಕೆಲಸ ಮಾಡಿದ್ದರು. ರಾಮನಗರ ಜಿಲ್ಲೆ ಮರು ನಾಮಕರಣದ ಚರ್ಚೆಗಳು ನಡೆಯುತ್ತಿರುವಾಗಲೇ ಜಿಲ್ಲಾಧಿಕಾರಿ ಅವಿನಾಶ್ ರವರ ವರ್ಗಾವಣೆ ವದಂತಿಯೂ ಹರಿದಾಡುತ್ತಿದೆ.

ಬಾಕ್ಸ್ .............

2014ರ ನವೆಂಬರ್ 1ರಂದು ಕರ್ನಾಟಕ ರಾಜ್ಯದ 12 ಜಿಲ್ಲೆಗಳ ಹೆಸರುಗಳನ್ನು ಬದಲಾವಣೆ ಮಾಡಿದಾಗ, ಅದನ್ನು ದೃಢೀಕರಿಸಲು ವಿಧಾನಸಭೆಯಲ್ಲಿ ಪ್ರತ್ಯೇಕ ವಿಧೇಯಕವನ್ನು ಮಂಡನೆ ಮಾಡಲಾಗಿದೆ. ಬ್ರಿಟಿಷರ ಮತ್ತು ಬೇರೆ ರಾಜರುಗಳ ಕಾಲದಲ್ಲಿ ಬದಲಾಗಿದ್ದ ಹೆಸರುಗಳನ್ನು, ಈಗ ಕನ್ನಡದಲ್ಲಿ ಹೇಳುವಂತೆಯೇ ಆ 12 ಜಿಲ್ಲೆಗಳ ಹೆಸರುಗಳನ್ನು( ಕೆಲವು ನಗರಗಳಿಗೆ ಇಂಗ್ಲಿಷಿನಲ್ಲಿ ಬರೆಯುವ ಸ್ಪೆಲ್ಲಿಂಗ್ ಬದಲಾವಣೆ ಮಾಡಲಾಯಿತು) ಬದಲಾಯಿಸಲಾಯಿತು.

2014ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ 12 ಜಿಲ್ಲೆಗಳ ಹೆಸರನ್ನು ಬದಲಾವಣೆ ಮಾಡುವ ಪ್ರಸ್ತಾವಕ್ಕೆ ಅಂಗೀಕಾರ ನೀಡಿತು. ಅದರಂತೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮೈಸೂರು, ಹೊಸಪೇಟೆ, ಶಿವಮೊಗ್ಗ, ಹುಬ್ಬಳ್ಳಿ, ತುಮಕೂರು, ಬೆಳ್ಳಾರಿ ಇದ್ದ ಹೆಸರು ಬಳ್ಳಾರಿ, ಬಿಜಾಪುರದ ಹೆಸರು ವಿಜಯಪುರ, ಬೆಳಗಾಂ ಇದ್ದ ಹೆಸರು ಬೆಳಗಾವಿ, ಗುಲ್ಬರ್ಗಾ ಇದ್ದ ಹೆಸರು ಕಲಬುರಗಿ ಎಂದು ಬದಲಾಗಿದೆ. ಇಂಗ್ಲಿಷ್ ಉಚ್ಚಾರಣೆ ವೇಳೆ ಕೊನೆಯ ಅಕ್ಷರ ಅರ್ಧ ಅಕ್ಷರವಾಗುತ್ತಿದ್ದು, ಅದನ್ನು ಕನ್ನಡ ಉಚ್ಚಾರಣೆಗನುಗುಣವಾಗಿ ಬದಲಾವಣೆ ಮಾಡಲಾಗಿದೆ. ಆದರೆ, ಇದು ಸರ್ಕಾರಿ ಕಡತಗಳಲ್ಲಿ ಸಂಪೂರ್ಣ ಬದಲಾವಣೆ ಮಾಡುವುದು ಕಷ್ಟವಾಗಿದ್ದು, ಈ ಹಳೆಯ ದಾಖಲೆಗಳನ್ನು ತಿದ್ದುವುದು ತುಂಬಾ ಶ್ರಮದಾಯಕ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆ ರೂಪಿಸಲಾಗಿದ್ದು, ಬದಲಾದ ಹೆಸರಿನ ಬಗ್ಗೆ ತಕರಾರು ಎದುರಾದಾಗ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ವಾದ ಮಾಡಲು ಅನುಕೂಲವಾಗುವಂತೆ ಕಾಯ್ದೆ ರೂಪಿಸಲಾಗಿದೆ.

ಬಾಕ್ಸ್‌...............

ಹಳೆಯ ಹೆಸರು - ಬದಲಾದ ಹೆಸರು

Bangalore - Bengaluru(ಬೆಂಗಳೂರು)

Belgaum - Belagavi(ಬೆಳಗಾವಿ)

Mysore - Mysuru(ಮೈಸೂರು)

Mangalore - Mangaluru(ಮಂಗಳೂರು)

Hubli - Hubballi(ಹುಬ್ಬಳ್ಳಿ)

Gulbarga - Kalaburagi(ಕಲಬುರಗಿ)

Shimoga - Shivamogga(ಶಿವಮೊಗ್ಗ)

Bellary - Ballari(ಬಳ್ಳಾರಿ)

Bijapur - Vijayapura(ವಿಜಯಪುರ)

Chikmagalur -Chikkamagaluru(ಚಿಕ್ಕಮಗಳೂರು)

Tumkur - Tumakuru(ತುಮಕೂರು)

Hospet - Hosapete(ಹೊಸಪೇಟೆ)

ಬಾಕ್ಸ್ ....

ಜಿಲ್ಲೆ ಜನರ ಅಭಿಪ್ರಾಯ ಸಂಗ್ರಹವೂ ಮುಖ್ಯ !

ರಾಮನಗರ ಜಿಲ್ಲೆಗೆ ಮರು ನಾಮಕರಣ ಮಾಡುವ ಅಥವಾ ತಾಲೂಕುಗಳನ್ನು ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಜಿಲ್ಲೆಯ ಜನರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಜಿಲ್ಲಾಡಳಿತದಿಂದ ನಡೆದಿಲ್ಲ. ಜಿಲ್ಲೆಯ ಹೆಸರಿನ ಬದಲಾವಣೆ ವಿಚಾರ ಬಂದಾಗ ಜಿಲ್ಲಾಡಳಿತ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಬೇಕು. ಸಲಹೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಬೇಕು. ಇದ್ಯಾವ ಪ್ರಕ್ರಿಯೆಗಳು ಜಿಲ್ಲಾಡಳಿತಿಂದ ನಡೆದೇ ಇಲ್ಲ. ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಬೇಕಾದರೆ ಅಲ್ಲಿನ ಜಿಲ್ಲಾ ಪಂಚಾಯಿತಿ - ಮಹಾನಗರ ಪಾಲಿಕೆಗಳು ಮರುನಾಮಕರಣ ಮಾಡುವ ಪ್ರಸ್ತಾವನೆಯ ಅಂಗೀಕಾರ ಮಾಡಬೇಕು.

ಜಿಲ್ಲಾ ಪಂಚಾಯಿತಿ - ಮಹಾನಗರ ಪಾಲಿಕೆಯು ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಬಹುಮತದಿಂದ ಅಂಗೀಕರಿಸಿದ ಬಳಿಕ ಅದನ್ನು ರಾಜ್ಯ ಸರ್ಕಾರಕ್ಕೆ ರವಾನಿಸಲಾಗುತ್ತದೆ. ರಾಜ್ಯ ಸರ್ಕಾರ ಅದನ್ನು ಪರಿಗಣಿಸಿದರೆ, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ. ಗೃಹ ಸಚಿವಾಲಯ ಮತ್ತು ಸಂಬಂಧಿಸಿದ ಇತರೆ ಇಲಾಖೆಗಳ ಅನುಮೋದನೆ ದೊರಕಿದ ಬಳಿಕ ರಾಜ್ಯ ಸರ್ಕಾರ ಹೆಸರು ಬದಲಾವಣೆ ಮಾಡಬಹುದಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ''''ಕನ್ನಡಪ್ರಭ''''ಕ್ಕೆ ಪ್ರತಿಕ್ರಿಯೆ ನೀಡಿದರು.

4ಕೆಆರ್ ಎಂಎನ್‌ 1.ಜೆಪಿಜಿ

ರಾಮನಗರ ಜಿಲ್ಲೆ ನಕ್ಷೆ

Share this article