ರಾಮನಗರ ನಗರಸಭೆ: ಪಾರ್ಕ್‌ ಜಾಗ ಒತ್ತುವರಿ ತೆರವುಗೊಳಿಸಿ ಫೆನ್ಸಿಂಗ್ ಅಳವಡಿಕೆ

KannadaprabhaNewsNetwork |  
Published : Jan 10, 2025, 12:48 AM IST
9ಕೆಆರ್ ಎಂಎನ್ 7.ಜೆಪಿಜಿರಾಮನಗರದ 27ನೇ ವಾರ್ಡಿನಲ್ಲಿ  ಉದ್ಯಾನವನಕ್ಕೆ ಮೀಸಲಿರಿಸಿದ್ದ ಒತ್ತುವರಿ ತೆರವುಗೊಳಿಸಿದ  ಜಾಗಕ್ಕೆ ತಹಸೀಲ್ದಾರ್ ತೇಜಸ್ವಿನಿರವರು ಭೇಟಿ ನೀಡಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್ ಹಾಗೂ ಆಯುಕ್ತ ಶಿವನಾಂಕರಿಗೌಡ ಅವರೊಂದಿಗೆ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಂಪೇಗೌಡನದೊಡ್ಡಿ ಗ್ರಾಮದ ಆನಂದಮ್ಮ, ಇದು ನಮಗೆ ಸೇರಿದ ಭೂಮಿ ಎಂದು ವಾದ ಮುಂದಿಟ್ಟರು. ಇಲ್ಲಿ ನಾವು ಸಾಗುವಳಿ ಮಾಡುತ್ತಿದ್ದೇವೆ ಎಂದು ವಾದಿಸಿದರಾದರೂ ದಾಖಲೆ ಪ್ರಸ್ತುತಪಡಿಸಲು ವಿಫಲರಾದರು. ಅಧಿಕಾರಿಗಳ ಬಳಿ ವಾಗ್ವಾದಕ್ಕೆ ಇಳಿದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ 27ನೇ ವಾರ್ಡಿನಲ್ಲಿ ಉದ್ಯಾನವನಕ್ಕೆ ಮೀಸಲಿರಿಸಿದ್ದ 1 ಎಕರೆ 30 ಗುಂಟೆ ವಿಸ್ತೀರ್ಣದ ಒತ್ತುವರಿ ತೆರವುಗೊಳಿಸಿದ ಜಾಗಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ನೇತೃತ್ವದಲ್ಲಿ ಗುರುವಾರ ಫೆನ್ಸಿಂಗ್ ಅಳವಡಿಕೆ ಕಾರ್ಯ ನಡೆಯಿತು.

ಜನವರಿ 1ರಂದು ತಹಸೀಲ್ದಾರ್ ಸರ್ವೇ ನಡೆಸಿ ಗಡಿ ಗುರುತು ಮಾಡಿದ್ದರು. ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಒತ್ತುವರಿ ತೆರವು ಮಾಡಿ, ಹದ್ದುಬಸ್ತು ಮಾಡಲಾಗಿದ್ದ ಜಾಗಕ್ಕೆ ಅಧಿಕಾರಿಗಳ ಸಮ್ಮುಖದಲ್ಲಿ ಫೆನ್ಸಿಂಗ್ ಅಳವಡಿಸಲಾಯಿತು.

ಈ ಸಂಬಂಧ ಮಾತನಾಡಿದ ಎ.ಬಿ.ಚೇತನ್‌ಕುಮಾರ್, ಉದ್ಯಾನವನ ಒತ್ತುವರಿ ತೆರವು ಮಾಡುವಂತೆ ಈ ಹಿಂದಿನಿಂದಲೂ ಸಾರ್ವಜನಿಕರು, ಅಕ್ಕಪಕ್ಕದ ಬಡಾವಣೆ ನಿವಾಸಿಗಳು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜ. 1ರಂದು ಎಡಿಎಲ್‌ಆರ್ ನೇತೃತ್ವದಲ್ಲಿ ನಿಯಮಾನುಸಾರ ಸರ್ವೇ ಮಾಡಲಾಗಿತ್ತು. ವಿಸ್ತರಣೆಯಾಗಿರುವ 27ನೇ ವಾರ್ಡ್‌ನ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾರ್ಕ್ ಜಾಗವನ್ನು ಗುರುತಿಸಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ತಹಸೀಲ್ದಾರ್ ತೇಜಸ್ವಿನಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಆಯುಕ್ತರಾದ ಶಿವನಾಂಕರಿಗೌಡ ಮಾತನಾಡಿ, ಸರ್ವೇ ನಂ 72, 73, 74/2, 151, 152ರ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಬಡಾವಣೆಯಲ್ಲಿ 1 ಎಕರೆ 30 ಗುಂಟೆ ಜಾಗವನ್ನು ಉದ್ಯಾನವನಕ್ಕೆ ಮೀಸಲಿಡಲಾಗಿದೆ. ಈ ಜಾಗ ಪ್ರಾಧಿಕಾರದ ಆಯುಕ್ತರ ಹೆಸರಿಗೆ ನೋಂದಣಿಯಾಗಿದೆ. ಇದು ಒತ್ತುವರಿಯಾಗಿರುವ ಕುರಿತು ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತೆರವು ಕಾರ್ಯಾಚರಣೆ ವೇಳೆ ಆಕ್ಷೇಪ:

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಂಪೇಗೌಡನದೊಡ್ಡಿ ಗ್ರಾಮದ ಆನಂದಮ್ಮ, ಇದು ನಮಗೆ ಸೇರಿದ ಭೂಮಿ ಎಂದು ವಾದ ಮುಂದಿಟ್ಟರು. ಇಲ್ಲಿ ನಾವು ಸಾಗುವಳಿ ಮಾಡುತ್ತಿದ್ದೇವೆ ಎಂದು ವಾದಿಸಿದರಾದರೂ ದಾಖಲೆ ಪ್ರಸ್ತುತಪಡಿಸಲು ವಿಫಲರಾದರು. ಅಧಿಕಾರಿಗಳ ಬಳಿ ವಾಗ್ವಾದಕ್ಕೆ ಇಳಿದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ತೇಜಸ್ವಿನಿ ಅವರು, ಫೆನ್ಸಿಂಗ್ ಅಳವಡಿಸುವ ಕಾರ್ಯಕ್ಕೆ ಅಡಚಣೆ ಮಾಡಬೇಡಿ. ಏನೆ ದಾಖಲೆ ಇದ್ದರೂ ಕಚೇರಿಯಲ್ಲಿ ಬಂದು ನೀಡಿ. ನಿಮಗೆ ಸೇರಿದ್ದರೆ ಬಿಡಿಸಿಕೊಡುವೆ. ಸರ್ವೇ ಬಗ್ಗೆ ಆಕ್ಷೇಪವಿದ್ದರೆ ಡಿಡಿಎಲ್‌ಆರ್, ಎಡಿಎಲ್‌ಆರ್, ತಹಸೀಲ್ದಾರ್ ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸಿ. ನಿಮಗೇ ಸೇರಿದಲ್ಲಿ ನಿಮ್ಮ ಪರ ಕೆಲಸ ಮಾಡಿಕೊಡುವೆ. ಆದರೆ ಈಗ ಕೆಲಸಕ್ಕೆ ತೊಂದರೆ ನೀಡಬೇಡಿ ಎಂದು ಸೂಚಿಸಿದರು.

ಸ್ಥಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಗರಸಭೆ ಪ್ರತಿನಿಧಿ ಮುತ್ತುರಾಜು, ಎಂಜಿನಿಯರ್ ನಿಸರ್ಗ, ನಗರಸಭೆ ಮಾಜಿ ಅಧ್ಯಕ್ಷ ಬಾಬು, ಜಿಗೇನಹಳ್ಳಿ ವಾರ್ಡ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ಶಿವಕುಮಾರ್, ಖಜಾಂಚಿ ಪುಟ್ಟಮಾರೇಗೌಡ, ಸದಸ್ಯ ಚಂದ್ರಮೋಹನ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ