- 18 ಲಕ್ಷ ವೆಚ್ಚದಲ್ಲಿ ಸ್ತಬ್ಧಚಿತ್ರ, ಮಳಿಗೆ ನಿರ್ಮಾಣ - ಚಾಮರಾಜನಗರ ಜಿಲ್ಲೆ ಕಲಾವಿದರಿಂದ ಅರಳಲಿರುವ ಸ್ತಬ್ಧಚಿತ್ರ
-ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ರೇಷ್ಮೆ ಹಾಗೂ ಮಾವು ಬೆಳೆಗಳ ಮಾದರಿ ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ರಾಮನಗರ ಜಿಲ್ಲೆಯಿಂದ ಪ್ರದರ್ಶನಗೊಳ್ಳಲಿವೆ.
ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಜಂಬುಸವಾರಿ ಎಷ್ಟು ಚಿತ್ತಾಕರ್ಷವೋ, ಅದರಲ್ಲಿ ಪಾಲ್ಗೊಳ್ಳಲಿರುವ ಸ್ತಬ್ಧಚಿತ್ರಗಳೂ ಸಹ ಅಷ್ಟೇ ನಯನ ಮನೋಹರ. ದಸರಾ ಮೆರವಣಿಗೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಈ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸ್ತಬ್ಧಚಿತ್ರ ವಿಶಿಷ್ಟವಾಗಿದೆ.
ರೇಷ್ಮೆ - ಮಾವು ಬೆಳೆಗಳೇ ಏಕೆ ?
ಮಾವು ಉತ್ಪಾದನೆಯಲ್ಲಿ ಕೋಲಾರ ಪ್ರಥಮ ಸ್ಥಾನದಲ್ಲಿದ್ದರೆ, ರಾಮನಗರ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಈ ಎರಡು ಬೆಳೆಗಳಿಗೆ ಉತ್ತೇಜನ ನೀಡುವ ಸಂಬಂಧ ಮೈಸೂರು ದಸರಾದ ಜಂಬೂಸವಾರಿಗೆ ಇವುಗಳ ಮಾದರಿಯ ಸ್ತಬ್ಧ ಚಿತ್ರವನ್ನು ಕಳುಹಿಸಲಾಗಿದೆ.
ಮೈಸೂರು ದಸರಾದಲ್ಲಿ ಜಿಪಂ ವತಿಯಿಂದ ಸ್ತಬ್ಧಚಿತ್ರ ಹಾಗೂ ಮಳಿಗೆ ನಿರ್ಮಿಸಲಾಗುತ್ತಿದೆ. ಈ ಎರಡಕ್ಕೂ ಒಟ್ಟು 18 ಲಕ್ಷವನ್ನು ಜಿಪಂ ವೆಚ್ಚ ಮಾಡುತ್ತಿದ್ದು, ವಿವಿಧ ಇಲಾಖೆಗಳು ಇದರ ವೆಚ್ಚ ಬರಿಸಲಿವೆ. ಸ್ತಬ್ಧ ಚಿತ್ರಕ್ಕೆ 9 ಲಕ್ಷ ಹಾಗೂ ಮಳಿಗೆಗೆ 9 ಲಕ್ಷ ಖರ್ಚಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ರಾಮನಗರ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಸ್ತಬ್ಧಚಿತ್ರದಲ್ಲಿ ಮಾವು ಹಾಗೂ ರೇಷ್ಮೆದ ಜತೆಗೆ, ರಾಮದೇವರಬೆಟ್ಟದ ರಣಹದ್ದು, ಅಂಬೆಗಾಲು ಕಷ್ಣ, ರೇಷ್ಮೆಯ ಚಂದ್ರಿಕೆ, ಮಾವಿನ ಮರ, ಚನ್ನಪಟ್ಟಣದ ಆಟಿಕೆಗಳು, ರೇಷ್ಮೆ ನೂಲು ಕಾರ್ಖಾನೆ , ಸಾಲು ಮರದ ತಿಮ್ಮಕ್ಕ, ಕೆಂಗಲ್ ಹನುಂತಯ್ಯ, ಕವಿ ಸಿದ್ದಲಿಂಗಯ್ಯ, ಕೆಂಪೇಗೌಡ, ಶಿವಕುಮಾರಸ್ವಾಮಿ, ಬಾಲಗಂಗಾಧರ ಸ್ವಾಮಿಗಳ ಭಾವಚಿತ್ರ ಇರಲಿದೆ.
ಮೈಸೂರಿನಲ್ಲಿ ಮಳಿಗೆ ನಿರ್ಮಾಣ ಕಾಮಗಾರಿಯು ಈಗಾಗಲೇ ಮುಕ್ತಾಯವಾಗಿದ್ದು, ಸ್ಥಳೀಯ ನಿವಾಸಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನು ಸ್ತಬ್ಧಚಿತ್ರ ನಿರ್ಮಾಣ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. ಚಾಮರಾಜನಗರ ಜಿಲ್ಲೆಯ ಕಲಾವಿದರು ಜಿಲ್ಲಾ ಸ್ತಬ್ಧಚಿತ್ರ ಹಾಗೂ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ.
ಮಾವು ಹಾಗೂ ರೇಷ್ಮೆ ರಾಮನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು. ಇದನ್ನು ಉತ್ತೇಜಿಸುವ ಸಲುವಾಗಿ ಜಿಪಂ ವತಿಯಿಂದ ಈ ಬಾರಿ ಜಂಬೂಸವಾರಿಯಲ್ಲಿ ಆ ಬೆಳೆಯನ್ನು ಮಾದರಿಯನ್ನಾಗಿ ಕಳುಹಿಸಿಕೊಡಲಾಗಿದೆ. ಜಿಲ್ಲೆಯ ಮಳಿಗೆ ನಿರ್ಮಾಣ ಕಾರ್ಯವೂ ಮುಕ್ತವಾಗಿದೆ.
-ಚಿಕ್ಕಸುಬ್ಬಯ್ಯ, ಸಿಪಿಒ, ಜಿಪಂ, ರಾಮನಗರ