ಮಂಗಳೂರು: ನೀಟ್ ಪರೀಕ್ಷೆಯಲ್ಲಿನ ಅಕ್ರಮವನ್ನು ಪ್ರಶ್ನಿಸುವ ಹಕ್ಕು ವಿಪಕ್ಷಕ್ಕಿದೆ. ವಿದ್ಯಾರ್ಥಿಗಳ ಬೇಡಿಕೆ ವಿಪಕ್ಷದ ಬೇಡಿಕೆಯೂ ಆಗಿದ್ದು, ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಅಕ್ರಮ ಪ್ರಶ್ನಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಸಹಾನುಭೂತಿ ವ್ಯಕ್ತಪಡಿಸಿ ಧರಣಿ ಕೂತವರನ್ನು ಅಪಹಾಸ್ಯ ಮಾಡುವುದು, ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದು ಆಡಳಿತ ಪಕ್ಷಕ್ಕೆ ಶೋಭೆ ತರುವಂಥದ್ದು ಅಲ್ಲ ಎಂದರು.ಚಹಾ ಅಂಗಡಿಗಳಲ್ಲಿ ಚರ್ಚಿಸಿ!: ನೀಟ್ ಪರೀಕ್ಷೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡ 21 ವಿದ್ಯಾರ್ಥಿಗಳಲ್ಲಿ ಅಪಹಾಸ್ಯ ಮಾಡುತ್ತಿರುವವರ ಮಕ್ಕಳಿದ್ದರೆ ಏನು ಮಾಡುತ್ತಿದ್ದರು ಎಂಬುದನ್ನು ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿಗಳ ಜೊತೆ ಪ್ರಧಾನಿ ಚಾಯ್ ಪೇ ಚರ್ಚೆ, ಮನ್ ಕೀ ಬಾತ್ ಮಾತನಾಡುತ್ತಾರೆ. ನೀಟ್ ಹಗರಣ, ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಪ್ರತಿಯೊಬ್ಬ ನಾಗರಿಕರು ಚಹಾ ಅಂಗಡಿಗಳಲ್ಲೂ ಚರ್ಚೆ ಮಾಡಬೇಕು. ಈ ಸರ್ಕಾರ ಏನು ತಪ್ಪು ಮಾಡುತ್ತಿದೆ ಎಂಬುದನ್ನು ಪ್ರತಿಯೊಬ್ಬರು ವಿಮರ್ಶೆ ಮಾಡಬೇಕಾದ ಅಗತ್ಯ ಇದೆ ಎಂದವರು ಹೇಳಿದರು.ಬೋಫೋರ್ಸ್ ಪ್ರಕರಣದ ಆರೋಪ ಬಂದಾಗ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸರ್ಕಾರ ಜಂಟಿ ಸಂಸದೀಯ ಸಮಿತಿ ಮಾಡಿ ತನಿಖೆಗೆ ಕ್ರಮ ವಹಿಸಿತ್ತು. ಆದರೆ ಯುದ್ಧ ವಿಮಾನಗಳ ಹಗರಣ ಬಂದಾಗ ಪ್ರಸಕ್ತ ಸರ್ಕಾರ ಜಂಟಿ ಸಂಸದೀಯ ಸಮಿತಿಯನ್ನು ಒಪ್ಪಿಲ್ಲ. ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ ಎಂದು ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಸದಸ್ಯ ಆರ್.ಕೆ.ಪೃಥ್ವಿರಾಜ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷ ಇಬ್ರಾಹಿಂ ನವಾಜ್, ಶಾಹುಲ್ ಹಮೀದ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಕಾಸ್ ಶೆಟ್ಟಿ, ಶಬೀರ್ ಸಿದ್ಧಕಟ್ಟೆ ಮತ್ತಿತರು ಇದ್ದರು.