ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜಾಚಾರ್ಯರು ಯದುಗಿರಿಯ ಕಗ್ಗತ್ತಲ ಕಾಡಿನಲ್ಲಿ ಹುತ್ತದಲ್ಲಡಗಿದ್ದ ಚೆಲುವನಾರಾಯಣನನ್ನು ಹುತ್ತಕರಗಿಸಿ ದರ್ಶನ ಪಡೆದು ಜಗತ್ತಿಗೆ ಪ್ರಕಾಶ ಪಡಿಸಿದ್ದ ಪವಿತ್ರ ದಿನದ ಅಂಗವಾಗಿ ಪ್ರತಿ ವರ್ಷ ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ತೈ ಪುನರ್ವಸು ಉತ್ಸವ ನೆರವೇರುತ್ತಾ ಬಂದಿದೆ.
ರಾಮಾನುಜರ ಸನ್ನಿಧಿ ಅರ್ಚಕರಾದ ವಿದ್ವಾನ್ ಆನಂದಾಳ್ವಾರ್ ಮುಂದಾಳತ್ವದಲ್ಲಿ ನಡೆದ ಉತ್ಸವದ ಅಂಗವಾಗಿ ಬೆಳಗ್ಗೆ 5:00 ಗಂಟೆಗೆ ರಾಮಾನುಜಾಚಾರ್ಯರಿಗೆ ಅಭಿಷೇಕ, ನಂತರ ಕಲ್ಯಾಣಿಯಲ್ಲಿ ವಿಶೇಷ ಪಾರಾಯಣಗಳು ನಡೆದು ಶ್ವೇತ ವಸ್ತ್ರಧಾರಣೆಯೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ರಾಮಾನುಜರ ಉತ್ಸವ ವೈಭವದಿಂದ ನೆರವೇರಿತು. ದೇವಾಲಯದಲ್ಲಿ ಮಧ್ಯಾಹ್ನ ರಾಮಾನುಜರೆ ಸಾಕ್ಷಾತ್ ತಿರುನಾರಾಯಣನ ದರ್ಶನ ಮಾಡಿ ಅಂದು ಪಠಿಸಿದ ಪಹಲ್ ಕಂಡೆನ್ ನಾರಣನೆ ಕಂಡೆನ್ ಮಂತ್ರವನ್ನು ಪಾರಾಯಣಮಾಡಿ ಚೆಲುವನಾರಾಯಣಸ್ವಾಮಿಗೆ ಮೊದಲ ಮಹಾ ಮಹಾಮಂಗಳಾರತಿ ನೆರವೇರಿಸಲಾಯಿತು. ವಿಶೇಷ ನಾದಸ್ವರವಾದನ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆದ ರಾಮಾನುಜಾಚಾರ್ಯರ ತಿರುವೀದಿ ಉತ್ಸವ ಮೇಲುಕೋಟೆಯಲ್ಲಿ ದೈವೀಕ ವಾತಾವರಣ ಸೃಷ್ಟಿಮಾಡಿತ್ತು.ವಂಗಿಪುರಂ ನಂಬಿ ತಿರುಮಾಳಿಗೆಯಲ್ಲಿ ನೂರಾರಾರು ತಟ್ಟೆಗಳಲ್ಲಿ ಜೋಡಿಸಿದ್ದ ಹಣ್ಣು ಹಾಗೂ ಹೂವಿನ ತಟ್ಟೆಗಳನ್ನು ಇಳೆಯಾಳ್ವಾರ್, ಭಾ.ವಂ ರಾಮಪ್ರಿಯ, ಪಾರ್ಥಸಾರಥಿ, ಯಾಮುನಾಚಾರ್ಯರು ನೂರಾರು ಶಿಷ್ಯರೊಂದಿಗೆ ಸೇರಿ ಭವ್ಯ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕೊಂಡೊಯ್ದು ತಿರುನಾರಾಯಣ ಮತ್ತು ರಾಮಾನುಜರಿಗೆ ಸಮರ್ಪಿಸಿದರು.
ರಾತ್ರಿ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ಮರಳುವ ಮೂಲಕ ಪುನರ್ವಸು ಉತ್ಸವ ಸಂಪನ್ನವಾಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.