ಧಾರವಾಡ: ಖ್ಯಾತ ಜಾನಪದ ಗಾಯಕ ದಿ.ಬಸವಲಿಂಗಯ್ಯ ಹಿರೇಮಠ ಹೆಸರಲ್ಲಿ ಕೊಡಲ್ಪಡುವ ಪ್ರಸಕ್ತ ಸಾಲಿನ ಗಾನ-ಗಾರುಡಿಗ ರಾಜ್ಯ ಪ್ರಶಸ್ತಿಗೆ ಕಿತ್ತೂರು ತಾಲೂಕಿನ ಬೈಲೂರಿನ ದಿವ್ಯಾಂಗ ಜನಪದ ಕಲಾವಿದ ರಾಮಪ್ಪ ಸೋಮಪ್ಪ ಹಂಚಿನಮನಿ ಆಯ್ಕೆ ಆಗಿದ್ದಾರೆ.
ಜಾನಪದ ಸಂಶೋಧನಾ ಕೇಂದ್ರದ ಸಂಸ್ಥಾಪಕಿ ವಿಶ್ವೇಶ್ವರಿ ಹಿರೇಮಠ ಮಾತನಾಡಿ, ಬಸಲಿಂಗಯ್ಯ ಹಿರೇಮಠರ 66ನೇ ಜನ್ಮದಿನದ ಅಂಗವಾಗಿ ಕೊಡಲ್ಪಡುವ ಈ ಗಾನ-ಗಾರುಡಿಗ ಬಸಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ₹ 10 ಸಾವಿರ ನಗದು, ಸ್ಮರಣಿಕೆ, ಫಲಕ ಹಾಗೂ ಫಲಪುಷ್ಪ ಒಳಗೊಂಡಿದೆ. ಸಾನ್ನಿಧ್ಯವನ್ನು ಮುರಗೋಡದ ನೀಲಕಂಠ ಸ್ವಾಮೀಜಿ ವಹಿಸಲಿದ್ದಾರೆ. ಸಾಹಿತಿ ಬಿ.ಆರ್. ಪೊಲೀಸ್ ಪಾಟೀಲ ಅಭಿನಂದನಾ ಪರ ನುಡಿಗಳನ್ನಾಡಲಿದ್ದು, ಪ್ರೊ. ಎನ್.ಎಸ್.ಗಲಗಲಿ ಅಧ್ಯಕ್ಷತೆ ವಹಿಸುವುದಾಗಿ ಮಾಹಿತಿ ನೀಡಿದರು. ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ, ಹುಬ್ಬಳ್ಳಿ ಸಿಪಿಐ ಡಾ. ಜ್ಯೋತಿರ್ಲಿಂಗಪ್ಪ ಹೊನಕಟ್ಟಿ, ಗಜಾನನ ಚಿನಗುಡಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಾನಪದ ಸಂಶೋಧನಾ ಕೇಂದ್ರದ ನಿರ್ದೇಶಕಿ ಆಶಾ ಸೈಯದ್ ಇದ್ದರು.