ರಾಮಾಯಣದ ಸಂದೇಶ ಎಲ್ಲರಿಗೂ ಮಾದರಿ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Oct 18, 2024, 12:18 AM ISTUpdated : Oct 18, 2024, 12:19 AM IST
17ಎಚ್.ಎಲ್.ವೈ-1: ಹಳಿಯಾಳದ ತಾಲೂಕ ಆಡಳಿತ ಸೌಧದಲ್ಲಿ ಆಯೋಜಿಸಿದ ಶ್ರೀ ಮಹರ್ಷಿ  ವಾಲ್ಮೀಕಿ ಜಯಂತಿ ಆಚರಣೆಯ ಸಮಾರಂಭವನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮಾಯಣದ ಮೂಲಕ ಪ್ರತಿ ವ್ಯಕ್ತಿಗೂ ಬದುಕಿನ ಮೌಲ್ಯವನ್ನು, ಪ್ರೇಮ, ಸಹೋದರತ್ವ, ಸ್ವಾಮಿನಿಷ್ಠೆ, ಭಕ್ತಿನಿಷ್ಠೆ ಹಾಗೂ ಮಾನವೀಯ ಸಂಬಂಧಗಳನ್ನು ಮಹರ್ಷಿ ವಾಲ್ಮೀಕಿಯವರು ಸಾರಿದರು.

ಹಳಿಯಾಳ: ವ್ಯಕ್ತಿಯೋರ್ವ ಮನಸ್ಸು ಮಾಡಿದರೆ ಸ್ವಯಂ ಪರಿವರ್ತನೆಯಾಗಿ ಎಲ್ಲರಿಗೂ ಮಾದರಿಯಾಗಬಲ್ಲ ಎಂಬುದಕ್ಕೆ ವಾಲ್ಮೀಕಿಯವರು ನಿದರ್ಶನ. ರಾಮಾಯಣದಲ್ಲಿ ಅವರು ಸಾರಿದ ತತ್ವಗಳ ಅಡಿಯಲ್ಲಿ ನಮ್ಮ ಕುಟುಂಬ, ಸಮಾಜ, ನಾಡು ರಾಷ್ಟ್ರವನ್ನು ಕಟ್ಟೋಣ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀರಾಮರ ರಾಜ್ಯಾಭಿಷೇಕ ತ್ಯಾಗ, ಅವರ ಪಿತೃವಾಕ್ಯ ಪಾಲನೆ ಈಗಿನ ಪರಿಸ್ಥಿತಿಯಲ್ಲಿ ಕಲ್ಪನೆ ಮಾಡಲು ಅಸಾಧ್ಯವಾಗಿದೆ ಎಂದರು.

ರಾಮಾಯಣದ ಮೂಲಕ ಪ್ರತಿ ವ್ಯಕ್ತಿಗೂ ಬದುಕಿನ ಮೌಲ್ಯವನ್ನು, ಪ್ರೇಮ, ಸಹೋದರತ್ವ, ಸ್ವಾಮಿನಿಷ್ಠೆ, ಭಕ್ತಿನಿಷ್ಠೆ ಹಾಗೂ ಮಾನವೀಯ ಸಂಬಂಧಗಳನ್ನು ಮಹರ್ಷಿ ವಾಲ್ಮೀಕಿಯವರು ಸಾರಿದರು. ವಾಲ್ಮೀಕಿ ಜಯಂತಿ ಆಚರಣೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕೆಂದು ತಹಸೀಲ್ದಾರರಿಗೆ ದೇಶಪಾಂಡೆಯವರು ಸೂಚಿಸಿದರು.ಉಪನ್ಯಾಸ ನೀಡಿದ ಶಿಕ್ಷಕ ಕಾಳಿದಾಸ ಬಡಿಗೇರ ಅವರು, ಭಾರತದ ಸಂಸ್ಕೃತಿಯ ಗರಿಮೆಯನ್ನು ಮತ್ತು ಸಮಗ್ರತೆಯನ್ನು ಹೆಚ್ಚಿಸುವಲ್ಲಿ ವಾಲ್ಮೀಕಿಯವರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿಯವರು ಗುರುವಾಗಿ ಹಲವಾರು ಕವಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಒಂದೊಂದು ನುಡಿಮುತ್ತುಗಳು ಜೀವನ ಸಂದೇಶವನ್ನು ಸಾರುತ್ತವೆ ಎಂದರು.

ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ್ ಕೊರ್ವೆಕರ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ಇಟಗಿ, ಮಹಿಳಾ ಅಧ್ಯಕ್ಷೆ ಬಸಮ್ಮಾ ನಾಯಕ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಪ್ರಭಾರ ಇಒ ಸತೀಶ್ ಆರ್., ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ದರ್ಶನ ನಾಯಕ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ- ಸಂಸ್ಥೆಗಳ ಪ್ರಮುಖರು ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಹೊನ್ನಾವರದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಹೊನ್ನಾವರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆ ನಡೆಯಿತು.ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ ಭಟ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ ವಿವರಿಸಿ, 24 ಸಾವಿರ ಶ್ಲೋಕಗಳಿಂದ ಕೂಡಿದ ಮಹಾಕಾವ್ಯವನ್ನು ರಚಿಸಿ ವಾಲ್ಮೀಕಿ ಮಹರ್ಷಿ ಎಂದು ಲೋಕವಿಖ್ಯಾತರಾದರು. ಚೆನ್ನೈನ ಸಮೀಪದಲ್ಲಿ 1300 ವರ್ಷ ಹಳೆಯದಾದ ವಾಲ್ಮಿಕಿ ಮಹರ್ಷಿಯವರ ದೇವಸ್ಥಾನವಿದೆ ಎಂದರು.ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಪ್ರಶಾಂತ ಹೆಗಡೆ ಮೂಲನಮನೆ ಮಾತನಾಡಿ, ವಾಲ್ಮೀಕಿಯವರು ಶ್ರೀರಾಮನ ಜೀವನ ಶ್ರೇಷ್ಠ ರಾಮಾಯಣ ಗ್ರಂಥವನ್ನು ರಚಿಸಿ ಮನುಷ್ಯ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ ಎಂದರು.ತಹಸೀಲ್ದಾರ್ ರವಿರಾಜ ದೀಕ್ಷಿತ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಏಸು ಬೆಂಗಳೂರು, ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸದಸ್ಯರಾದ ಶ್ರೀಪಾದ ನಾಯ್ಕ, ತಾರಾ ನಾಯ್ಕ, ತಾಲೂಕು ಆಸ್ಪತ್ರೆಯ ಉಷಾ ಹಾಸ್ಯಗಾರ, ಕೃಷಿ ಇಲಾಖೆಯ ಪಾಂಡಪ್ಪ ಲಮಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ, ಸಮಾಜಕಲ್ಯಾಣ ಇಲಾಖೆಯ ಸುಮಂಗಲಾ ಭಟ್ಟ, ತಾಪಂ ಇಒ ಚೇತನ ಇದ್ದರು. ಎಸ್ಎಸ್ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಸುಮಂಗಲಾ ಭಟ್ ಸ್ವಾಗತಿಸಿದರು. ಸುದೀಶ ನಾಯ್ಕ ನಿರ್ವಹಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ