ಸೋಮರಡ್ಡಿ ಅಳವಂಡಿ
ಕೊಪ್ಪಳ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಿಂದ ಶ್ರೀರಾಮ ಜನ್ಮಭೂಮಿ ಅಯೋಧ್ಯೆವರೆಗೂ ರಾಮಭಕ್ತನೋರ್ವ ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ. ದಾರಿಯುದ್ದಕ್ಕೂ ಪ್ರತಿ ಗ್ರಾಮ, ನಗರ ಪಟ್ಟಣಗಳಲ್ಲಿ ಶ್ರೀರಾಮ ಮತ್ತು ಆಂಜನೇಯನ ಚಿತ್ರ ಬಿಡಿಸುತ್ತಾ ಸಾಗುತ್ತಿದ್ದಾನೆ.
ವಿಜಯಪುರ ಜಿಲ್ಲೆಯ ಬಿ.ಬಾಗೇವಾಡಿ ತಾಲೂಕಿನ ತಳೆವಾಡ ಗ್ರಾಮದ ಯುವಕ, ಚಿತ್ರಕಲಾ ವಿದ್ಯಾರ್ಥಿಯಾಗಿರುವ ಸುರೇಶ ಬಿ. ಕೋಟಗೊಂಡ ಎನ್ನುವ ಯುವಕನೇ ಈ ಸಾಹಸಕ್ಕೆ ಮುಂದಾಗಿದ್ದಾನೆ.ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯ ಕುರಿತು ಜಾಗೃತಿ ಮೂಡಿಸುವುದು ಮತ್ತು ಪ್ರತಿ ಗ್ರಾಮ, ಪಟ್ಟಣ ಹಾಗೂ ದಾರಿಯುದ್ದಕ್ಕೂ ಆಂಜನೇಯನ ಮತ್ತು ಶ್ರೀರಾಮನ ಪೇಂಟಿಂಗ್ ಮಾಡುತ್ತಾ ಸಾಗುತ್ತಾನೆ.
ಅಂಜನಾದ್ರಿಯಿಂದ ಅಯೋಧ್ಯೆಗೆ ಸುಮಾರು 1500 ಕಿ.ಮೀ. ದೂರವಿದೆ. ಅಷ್ಟು ದೂರವನ್ನು ಸೈಕಲ್‌ನಲ್ಲಿಯೇ ಪ್ರಯಾಣಿಸಿ, ತಲುಪುವ ಸಂಕಲ್ಪ ಮಾಡಿದ್ದಾನೆ.ಇಂಥದ್ದೇ ದಿನ ಮತ್ತು ನಿತ್ಯ ಇಷ್ಟು ಕಿ.ಮೀ. ಕ್ರಮಿಸಬೇಕು ಎನ್ನುವ ಲೆಕ್ಕಾಚಾರ ಈತನಿಗಿಲ್ಲ.
ದಿನವೂ ಒಂದಷ್ಟು ದೂರ ಸೈಕ್ಲಿಂಗ್ ಮಾಡುವುದು ಮತ್ತು ದಾರಿಯುದ್ದಕ್ಕೂ ಪ್ರಮುಖ ಸ್ಥಳಗಳಲ್ಲಿ ಶ್ರೀರಾಮನ ಮತ್ತು ಆಂಜನೇಯನ ಚಿತ್ರ ಬಿಡಿಸುತ್ತಾ ಸಾಗಬೇಕಾಗಿರುವುದರಿಂದ 30ರಿಂದ 45 ದಿನಗಳು ಆಗಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.ಈತನ ಸಾಹಸಕ್ಕೆ ಕೊಪ್ಪಳದ ನಮೋ ಬ್ರಿಗೇಡ್ ಸಾಥ್ ನೀಡಿದೆ.
ಆತನಿಗೆ ಸೈಕಲ್‌ನ್ನು ಉಡುಗೊರೆಯಾಗಿ ನೀಡಿದೆ. ದೂರದ ಪ್ರಯಾಣಕ್ಕಾಗಿ ಸೈಕಲ್‌ನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ಲಗೇಜ್ ಸೇರಿದಂತೆ ಇನ್ನಿತರ ಪರಿಕರಗಳು ಮತ್ತು ಪೇಂಟಿಂಗ್ ಡಬ್ಬಿಗಳನ್ನು ಇಟ್ಟುಕೊಳ್ಳಲು ವ್ಯವಸ್ಥೆ ಒಳಗೊಂಡಿದೆ.
ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡಿರುವ ಈತನಿಗೆ ವಿಶೇಷ ಸನ್ಮಾನ ಮಾಡಿ, ಬೀಳ್ಕೊಡಲಾಯಿತು. ಜಯಘೋಷ ಹಾಕುವ ಮೂಲಕ ಹಾರೈಸಿ ಕಳುಹಿಸಲಾಯಿತು.ಅಂಜನಾದ್ರಿಯಲ್ಲಿ ಸುರೇಶ ಬಿ. ತಾನೇ ಇಡೀ ದಿನ ಪೇಂಟಿಂಗ್ ಮಾಡಿದ್ದಾನೆ. ಜೈ ಶ್ರೀರಾಮ ಎಂದು ಬರೆದು, ಆಂಜನೇಯನ ಚಿತ್ರವನ್ನು ಬೆಟ್ಟದಲ್ಲಿ ಹಲವಾರು ಸ್ಥಳಗಳಲ್ಲಿ, ಮೆಟ್ಟಿಲು ಬಳಿ ಬಿಡಿಸಿದ್ದಾನೆ.
ಅಲ್ಲಿಂದ ಸಾಗಿ ದುರ್ಗಾದೇವಿ ಬೆಟ್ಟದಲ್ಲಿಯೂ ಚಿತ್ರ ಬಿಡಿಸಿ, ಭಕ್ತ ಮೆರೆದಿದ್ದಾನೆ.ಅಂಜನಾದ್ರಿಯ ಸುತ್ತ ಕಿಷ್ಕಿಂಧೆಯ ಭಾಗದಲ್ಲಿ ನಡೆದಾಡಿದ್ದಾನೆ. ಹೀಗಾಗಿ, ಆಂಜನೇಯನ ನಾಡಿನಿಂದ ಶ್ರೀರಾಮ ಜನ್ಮಸ್ಥಳ ಅಯೋಧ್ಯೆಗೆ ತೆರಳುವ ಬಯಕೆಯಿಂದ ಈ ಸಾಹಸ ಪ್ರಾರಂಭಿಸಿದ್ದಾನೆ.
ಇದೊಂದು ಮಹಾನ್ ಸಾಹಸ. ಇದಕ್ಕಾಗಿ ನಮೋ ಬ್ರಿಗೇಡ್ ಶುಭ ಕೋರಿದೆ. ಆತನ ಸಾಹಸ ಯುವಕರನ್ನು ನಿಜವಾಗಿಯೂ ಹೆಮ್ಮೆಪಡುವಂತೆ ಮಾಡಿದೆ ಎನ್ನುತ್ತಾರೆ ಕೊಪ್ಪಳ ನಮೋ ಬ್ರಿಗೇಡ್ ಸಂಚಾಲಕ ಮದನಕುಮಾರ. ಶ್ರೀರಾಮ ಮತ್ತು ಆಂಜನೇಯನ ಮೇಲಿನ ಭಕ್ತಿಯಿಂದ ಈ ಸಾಹಸಕ್ಕೆ ಕೈಹಾಕಿದ್ದೇನೆ.
ಅಯೋಧ್ಯೆ ತಲುಪಿದಾಗಲೇ ನನಗೆ ನಿಜವಾದ ಸಂತೋಷ ದೊರೆಯುತ್ತದೆ. ಅಲ್ಲಿಯವರೆಗೆ ದಾರಿಯುದ್ದಕ್ಕೂ ಆಂಜನೇಯನ ಚಿತ್ರ ಬಿಡಿಸುತ್ತಾ, ಜಪಿಸುತ್ತಾ ಸಾಗುತ್ತೇನೆ ಎನ್ನುತ್ತಾರೆ ರಾಮಭಕ್ತ ಸೈಕಲ್ ಸವಾರ.