ಅ.11ರಿಂದ ರಂಭಾಪುರಿ ಪೀಠದ ಶರನ್ನವರಾತ್ರಿ ಉತ್ಸವ

KannadaprabhaNewsNetwork |  
Published : Sep 03, 2026, 03:15 AM IST
ಜಮಖಂಡಿ ನಗರದ ಕಲ್ಯಾಣ ಮಠದಲ್ಲಿ ದಸರಾ ಉತ್ಸವದ ಅಂಗವಾಗಿ ಕರೆದಿದ್ದ ಪೂರ್ವ ಭಾವಿ ಸಭೆಯಲ್ಲಿ ಕರ ಪತ್ರಗಳನ್ನು ಅನಾವರಣ ಗೊಳಿಸಲಾಯಿತು. ವಿವಿಧ ಮಠಾಧೀಶರು, ಗಣ್ಯರು ಇದ್ದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ನಗರದಲ್ಲಿ ಅಕ್ಟೋಬರ್‌ 11ರಿಂದ 21ರ ವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಸಕ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ನಗರದಲ್ಲಿ ಅಕ್ಟೋಬರ್‌ 11ರಿಂದ 21ರ ವರೆಗೆ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಸಕ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ಬುಧವಾರ ಸಂಜೆ ನಗರದ ಕಲ್ಯಾಣ ಮಠದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸರ್ವಧರ್ಮದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಮೈಗೂರು ರಸ್ತೆಯ ಕಲೂತಿ ಕಲ್ಯಾಣ ಮಂಟಪದ ಆವರಣದಲ್ಲಿ ನಿರ್ಮಿಸುತ್ತಿರುವ ಮಾನವ ಧರ್ಮ ಮಂಟಪದಲ್ಲಿ ಸಮ್ಮೇಳನ ನಡೆಯಲಿದ್ದು, ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪೀಠಾಧ್ಯಕ್ಷ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮ ಸಮ್ಮೇಳನ ಜರುಗಲಿದೆ.

ನಾಡಿನ ವಿವಿಧ ಭಾಗಗಳ ಶಿವಾಚಾರ್ಯರು, ಧರ್ಮಗುರುಗಳು, ಸಾಹಿತಿಗಳು, ವಿದ್ವಾಂಸರು, ಸಮಾಜ ಚಿಂತಕರು, ಕವಿ-ಕಲಾವಿದರು ಹಾಗೂ ರಾಜಕೀಯ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನಗರದಲ್ಲಿ ನಡೆಯಲಿರುವ ಧರ್ಮ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಎಲ್ಲ ಸಮಾಜದವರ ಜವಾಬ್ದಾರಿಯಾಗಿದೆ. ಗುರುಹಿರಿಯರು, ಯುವಕರು, ಮಹಿಳೆಯರು ಹಾಗೂ ಧರ್ಮಾಭಿಮಾನಿಗಳು ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಮ್ಮೇಳನವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಹತ್ತು ದಿನಗಳ ಕಾಲ ನಡೆಯಲಿರುವ ಧರ್ಮ ಸಮ್ಮೇಳನವನ್ನು ವ್ಯವಸ್ಥಿತವಾಗಿ ನಡೆಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು. ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಿಂಗಡಿಸಿ ಪ್ರತ್ಯೇಕ ಉಪಸಮಿತಿಗಳನ್ನು ರಚಿಸಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ವಸತಿ, ಊಟ, ಉಪಹಾರ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಅತಿಥಿಗಳ ಸ್ವಾಗತ, ಶೋಭಾಯಾತ್ರೆ, ವೇದಿಕೆ ನಿರ್ವಹಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ತಮಗೆ ಯಾವುದೇ ಜವಾಬ್ದಾರಿ ನೀಡಿದರೂ ಪೂರ್ಣ ಸಮಯ ನೀಡಿ ನಿರ್ವಹಿಸಲು ಸಿದ್ಧನಿದ್ದೇನೆ ಎಂದರು.

ಮುತ್ತಿನಕಂಠಿ ಹಿರೇಮಠದ ಶಿವಲಿಂಗ ಪಂಡಿತ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಮ್ಮೇಳನಕ್ಕೆ ಪ್ರತಿ ಗ್ರಾಮಗಳಿಗೆ ತೆರಳಿ ಆಹ್ವಾನ ನೀಡುವ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು ಎಂದರು. ಧರ್ಮ ಸಮ್ಮೇಳನದ ಕರಪತ್ರ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಕಲ್ಯಾಣ ಮಠದ ಶ್ರೀಗಳು, ಹೀರೆಪಡಸಲಗಿ ಶ್ರೀಗಳು, ಬನಹಟ್ಟಿ ಹಿರೇಮಠದ ಶ್ರೀಗಳು, ಶ್ರೀಗಳು, ಸಿಂದಗಿ ಸಾರಂಗ ಮಠದ ಶ್ರೀಗಳು, ಕೊಣ್ಣೂರ ಹೊರಗಿನ ಮಠದ ಶ್ರೀಗಳು, ಮುತ್ತೂರಿನ ಶ್ರೀಗಳು, ತೇರದಾಳ ಹಿರೇಮಠದ ಶ್ರೀಗಳು, ಜಕನೂರು ಮಾಧುಲಿಂಗ ಶ್ರೀಗಳು, ಕುಂಚನೂರು ಸಿದ್ದಲಿಂಗ ದೇವರು, ಆಲಗೂರು ಲಕ್ಷ್ಮಣ ಮುತ್ಯಾ ಹಾಗೂ ಸಿದ್ದಮುತ್ಯಾ ಸೇರಿದಂತೆ ವಿವಿಧ ಮಠಗಳ ಶ್ರೀಗಳು, ಧರ್ಮಗುರುಗಳು ಹಾಗೂ ವಿವಿಧ ಸಮಾಜಗಳ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇತಿಹಾಸ ಪ್ರಸಿದ್ಧ ಚಿಕ್ಕಗಡಿಯಾರಕ್ಕೆ ನವೀಕರಣ ಭಾಗ್ಯ
ಶಿಸ್ತು, ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ