ಡಿಸಿಸಿ ಬ್ಯಾಂಕ ಅಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಛೆಯಿಂದ ರಮೇಶ ಕತ್ತಿ ರಾಜೀನಾಮೆ: ಬಾಲಚಂದ್ರ ಜಾರಕಿಹೊಳಿ

KannadaprabhaNewsNetwork |  
Published : Oct 05, 2024, 01:36 AM IST
ಬೆಮೂಲ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಬೆಳಗಾವಿಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ( ಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ( ಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಯಾರೂ ಒತ್ತಡ ಹೇರಿಲ್ಲ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಅವಧಿ ಇನ್ನೂ ಒಂದು ವರ್ಷ ಬಾಕಿಯಿದೆ. ಬ್ಯಾಂಕಿನ ನಿರ್ದೇಶಕರು ಪ್ರತ್ಯೇಕ ಸಭೆ ನಡೆಸಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ತೀರ್ಮಾನ ಮಾಡಿರಲಿಲ್ಲ. ಆದರೆ, ಬ್ಯಾಂಕಿನ ನಿರ್ದೇಶಕರು, ಹಿರಿಯರಿಗೆ ಗೌರವ ಕೊಟ್ಟು ಅವರೇ ಅಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಈ ತಿಂಗಳ ಮುಗಿಯುವುದರೊಳಗೆ ನೂತನ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುವುದು. ಹಿರಿಯರಾದ ಡಾ.ಪ್ರಭಾಕರ ಕೋರೆ, ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಮತ್ತು ರಮೇಶ ಕತ್ತಿ ಅವರ ನೇತೃತ್ವದಲ್ಲೇ ನೂತನ ಅಧ್ಯಕ್ಷರು ಯಾರಾಗಬೇಕು ಎಂಬುದರ ಕುರಿತು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ರಮೇಶ ಕತ್ತಿ ಅ‍ವರ ಅಧಿಕಾರಾವಧಿಯಲ್ಲಿ ಕಳೆದ ವರ್ಷ ರಾಜ್ಯದಲ್ಲೇ ಬೆಳಗಾವಿ ಡಿಸಿಸಿ ಬ್ಯಾಂಕ್‌ ನಂಬರ್‌ ಒನ್‌ ಸ್ಥಾನದಲ್ಲಿದ್ದು, ₹30 ಕೋಟಿ ನಿವ್ವಳ ಲಾಭ ಗಳಿಸಿದೆ. ಕತ್ತಿ ಅವರು ಉತ್ತಮ ಆಡಳಿತ ನೀಡಿದ್ದಾರೆ. 2025ರ ನವೆಂಬರ್‌ ತಿಂಗಳಲ್ಲಿ ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಯಲಿದೆ. ಬ್ಯಾಂಕ್‌ ನೌಕರರು, ಗ್ರಾಹಕರು, ರೈತರ ಹಿತದೃಷ್ಟಿಯಿಂದ ಬ್ಯಾಂಕಿನ 17 ನಿರ್ದೇಶಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ರಮೇಶ ಕತ್ತಿ ಕೂಡ ನಮ್ಮ ಜೊತೆಗಿದ್ದಾರೆ. ಗುರುವಾರ ನಡೆದ ನಿರ್ದೇಶಕರ ಸಭೆಗೂ ರಮೇಶ ಕತ್ತಿ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸದಸ್ಯತ್ವದ ಕುರಿತು ಗೊಂದಲ ಇದೆ. ಸಣ್ಣ ಪುಟ್ಟ ಅಸಮಾಧಾನವಿತ್ತು. ಬೇರೆಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಮನವಿ ಮೇರೆಗೆ ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ. 2015ರಿಂದ 2024ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಂದೆಯೂ ಅವರ ಮಾರ್ಗದರ್ಶನದಲ್ಲೇ ಆಡಳಿತ ಮಂಡಳಿ ನಡೆಯಲಿದೆ. ಆಡಳಿತ ಮಂಡಳಿಯ ಸಹಕಾರದೊಂದಿಗೆ ನೂತನ ಅಧ್ಯಕ್ಷರು ಕಡಿಮೆ ಅವಧಿಯಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸಹುದಾಗಿದೆ ಎಂದರು.

ಡಿಸಿಸಿ ಬ್ಯಾಂಕಿನ ವಿಚಾರದಲ್ಲಿ ಪಕ್ಷ, ಬಣ ರಾಜಕಾರಣ ಇಲ್ಲ. ಪಕ್ಷಾತೀತವಾಗಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಡಿಸಿಸಿ ಬ್ಯಾಂಕಿನ ಬಗ್ಗೆ ಗ್ರಾಹಕರು, ರೈತರಿಗೆ ಅಪಾರ ನಂಬಿಕೆಯಿದೆ. ಬ್ಯಾಂಕಿನ ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಸಹಕಾರಿ ಬ್ಯಾಂಕಿನ ಮೂಲಕ ಡಿಸಿಸಿ ಬ್ಯಾಂಕಿನಲ್ಲಿ ₹250 ಕೋಟಿ ಠೇವಣಿ ಇಟ್ಟಿದ್ದಾರೆ. ರಮೇಶ ಕತ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಬ್ಯಾಂಕಿನ ಠೇವಣಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಠೇವಣಿದಾರರು ತಮ್ಮ ಠೇವಣಿ ಹಣ ವಾಪಸ್‌ ಪಡೆಯುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಜಾರಕಿಹೊಳಿ ಕುಟುಂಬದ ಸದಸ್ಯರ್‍ಯಾರು ಕೂಡ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗುವುದಿಲ್ಲ ಎಂದು ಇದೇ ವೇಳೆ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕಿ ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ, ಶಿವಾನಂದ ಡೋಣಿ, ಮಹಾಂತೇಶ ದೊಡ್ಡಗೌಡ್ರ, ಸುಭಾಸ ಡವಳೇಶ್ವರ, ಅರವಿಂದ ಪಾಟೀಲ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ