ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ, ಬಳ್ಳಾರಿಯಲ್ಲಿ ಎನ್‌ಐಎ ತಂಡದ ಶೋಧ ಪೂರ್ಣ

KannadaprabhaNewsNetwork | Updated : Mar 10 2024, 03:00 PM IST

ಸಾರಾಂಶ

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹಾಗೂ ಹೊಸಪೇಟೆಯ ವಿವಿಧೆಡೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮೂರು ದಿನ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು ಶನಿವಾರ ಪೂರ್ಣಗೊಳಿಸಿ, ಕಲಬುರಗಿಗೆ ತೆರಳಿದರು.

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮೂರು ದಿನಗಳ ಕಾಲ ನೆಲೆಯೂರಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಶಂಕಿತ ಆರೋಪಿ ಪತ್ತೆಗೆ ಕೈಗೊಂಡಿದ್ದ ಶೋಧ ಕಾರ್ಯ ಪೂರ್ಣಗೊಳಿಸಿದ್ದು, ಶನಿವಾರ ಮಧ್ಯಾಹ್ನ ಕಲಬುರಗಿಗೆ ತೆರಳಿದರು.

ತುಮಕೂರಿನಿಂದ ಬಳ್ಳಾರಿಗೆ ಆಗಮಿಸಿದ್ದ 10ಕ್ಕೂ ಹೆಚ್ಚು ಜನರಿದ್ದ ಎನ್‌ಐಎ ಅಧಿಕಾರಿಗಳು ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣ, ಆಸುಪಾಸಿನ ಕಟ್ಟಡಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳ ವೀಡಿಯೋಗಳನ್ನು ಪಡೆದು ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಶಂಕಿತ ಆರೋಪಿ ಬಳ್ಳಾರಿಯಲ್ಲಿ ಓಡಾಡಿರುವುದು ದೃಢಪಟ್ಟಿತ್ತು. 

ಈ ಹಿನ್ನೆಲೆಯಲ್ಲಿ ನಗರದ ಕೌಲ್‌ಬಜಾರ್ ಹಾಗೂ ಮುಲ್ಲಾರ್‌ಪೇಟೆ, ವಿವಿಧೆಡೆ ಸಂಚರಿಸಿ ಶಂಕಿತ ಮಾಹಿತಿ ಕಲೆ ಹಾಕಿದ್ದರು. ಇದೇ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳು, ಆಟೋ ಚಾಲಕರು, ಸಾರ್ವಜನಿಕರನ್ನು ವಿಚಾರಿಸಿದ್ದರು. 

ಕಳೆದ ಡಿಸೆಂಬರ್‌ನಲ್ಲಿ ಉಗ್ರ ಸಂಘಟನೆಯ ಜತೆ ಗುರುತಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು, ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಶಂಕಿತ ಆರೋಪಿ, ಈ ಹಿಂದೆ ಶಂಕಿತ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡು ಬಂಧಿತರಾಗಿದ್ದವರ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದರು.

ಮೂರು ದಿನಗಳ ಕಾಲಾ ನಾನಾ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು, ಆರೋಪಿ ಬಳ್ಳಾರಿಯಿಂದ ಕಲಬುರಗಿಗೆ ತೆರಳಿರುವ ಗುಮಾನಿ ಹಿನ್ನೆಲೆಯಲ್ಲಿ ಕಲಬುರಗಿ ಕಡೆ ಪ್ರಯಾಣ ಬೆಳೆಸಿದರು.

ಹೊಸಪೇಟೆಯಲ್ಲಿ ಎಂಟು ದಿನಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ಕೊಂಡೊಯ್ದ ಪೊಲೀಸರು!:

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಐಎ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಪೊಲೀಸರು ನಗರದ ಬಸ್‌ ನಿಲ್ದಾಣದ ಎಂಟು ದಿನಗಳ ಸಿಸಿ ಕ್ಯಾಮೆರಾ ದೃಶ್ಯಾವಳಿ ತೆಗೆದುಕೊಂಡು ಹೋಗಿದ್ದು, ಇನ್ನಷ್ಟು ಪರಿಶೀಲನೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಉಗ್ರಗಾಮಿ ಬಳ್ಳಾರಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎನ್‌ಐಎ ಹೊಸಪೇಟೆಯಲ್ಲೂ ಪರಿಶೀಲನೆ ನಡೆಸಲು ಸೂಚಿಸಿತ್ತು. ಉಗ್ರಗಾಮಿ ಬಸ್‌ ಮೂಲಕ ಭಟ್ಕಳಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಹೊಸಪೇಟೆ, ಮರಿಯಮ್ಮನಹಳ್ಳಿ, ಕೂಡ್ಲಿಗಿ ಬಸ್‌ ನಿಲ್ದಾಣಗಳಲ್ಲೂ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಫೆ. 27ರಿಂದ ಮಾ. 3ರ ವರೆಗಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಎಂಟು ದಿನಗಳ ದೃಶ್ಯಾವಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this article