ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಸೋಮವಾರ ಅಕಾಡೆಮಿ ಆಫ್ ಕಂಪ್ಯಾರೀಟಿವ್ ಫಿಲಾಸಫಿ ಅಂಡ್ ರಿಲಿಜನ್ ಆಯೋಜಿಸಿದ್ದ ಶತಮಾನೋತ್ಸವ ಸಮಾರೋಪ ಹಾಗೂ ಗುರುದೇವ ರಾನಡೆ ಅವರ ಸಮಗ್ರ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾನಡೆ ಅವರ ಸಮಗ್ರ ಕೃತಿಗಳ ಪ್ರಕಟಣೆ ಸಾಮಾನ್ಯ ಗ್ರಂಥ ಬಿಡುಗಡೆ ಕಾರ್ಯಕ್ರಮವಲ್ಲ. ಭಾರತದ ಸಾವಿರಾರು ವರ್ಷಗಳ ಜ್ಞಾನ ಪರಂಪರೆ, ಉಪನಿಷತ್ತುಗಳ ಚಿಂತನೆ, ಅನುಭವ ದರ್ಶನ ಮತ್ತು ಆಧ್ಯಾತ್ಮಿಕ ಸಾಧನೆಯ ಅಮೃತ ತತ್ವವನ್ನು ಮತ್ತೊಮ್ಮೆ ವಿಶ್ವದ ಮುಂದೆ ಪ್ರತಿಷ್ಠಾಪಿಸುವ ಐತಿಹಾಸಿಕ ಕಾರ್ಯ ಎಂದು ಶ್ಲಾಘಿಸಿದರು.ಭಾರತೀಯ ಉಪನಿಷತ್ತುಗಳನ್ನು ಮಾತ್ರ ನಂಬಬೇಡಿ, ಅರಿತುಕೊಳ್ಳಿ ಎಂಬ ಸಂದೇಶ ನೀಡುತ್ತವೆ. ಇದೇ ಸಂದೇಶ ಗುರುದೇವ ರಾನಡೆ ಅವರ ವಾಂಗ್ಮಯ ದಲ್ಲಿಯೂ ಅಡಕವಾಗಿದೆ. ಮನುಷ್ಯನನ್ನು ದೇವರ ಸನ್ನಿಧಿಯತ್ತ ಕರೆದೊಯ್ಯುವ ಜ್ಞಾನವೇ ಪರಿಪೂರ್ಣ ಜ್ಞಾನ ಎಂಬುದು ಅವರ ಚಿಂತನೆಯ ಸಾರ. ಭಾರತವು ಇಂದು ಸಾಂಸ್ಕೃತಿಕ ಪುನರ್ಜಾಗರಣದ ಹಾದಿಯಲ್ಲಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗುರುದೇವ ರಾನಡೆ ಅವರ ಸಮಗ್ರ ಕೃತಿಗಳ ಪ್ರಕಟಣೆ ಮತ್ತು ಡಿಜಿಟಲೀಕರಣವು ಭಾರತದ ಜ್ಞಾನ ಪರಂಪರೆಯನ್ನು ವಿಶ್ವದ ಮೂಲೆಮೂಲೆಗಳಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಅಕಾಡೆಮಿ ಶತಮಾನಪೂರ್ತಿ ಗುರುದೇವರ ಚಿಂತನೆಗಳನ್ನು ಜೀವಂತವಾಗಿಟ್ಟಿದೆ. ಈ ಸಮಗ್ರ ಕೃತಿಗಳ ಪ್ರಕಟಣೆ ಭಾರತ ಸಂಸ್ಕೃತಿ ಸಚಿವಾಲಯಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಞಾನ ಪರಂಪರೆ ವೇದಗಳಿಂದ ಆರಂಭವಾಗಿ ಉಪನಿಷತ್ತುಗಳು, ಭಗವದ್ಗೀತೆ, ಗೌತಮ ಬುದ್ಧ, ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ವಸಿಷ್ಠರು, ಜ್ಞಾನೇಶ್ವರರು, ಕಬೀರರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಹಾಗೂ ಗುರುದೇವ ರಾನಡೆ ಅವರವರೆಗೆ ನಿರಂತರವಾಗಿ ಹರಿದು ಬಂದಿದೆ. ಈ ಪರಂಪರೆಯನ್ನು ಅಸಂಖ್ಯಾತ ಋಷಿಗಳು, ಮುನಿಗಳು ಹಾಗೂ ತತ್ವಜ್ಞಾನಿಗಳು ತಮ್ಮ ಅನುಭವ ಮತ್ತು ಪ್ರಜ್ಞೆಯ ಮೂಲಕ ಪೋಷಿಸಿದ್ದಾರೆ ಎಂದು ಹೇಳಿದರು.ಈ ನಿರಂತರ ಜ್ಞಾನಧಾರೆಯೇ ಭಾರತೀಯ ನಾಗರಿಕತೆಯನ್ನು ಜೀವಂತವಾಗಿರಿಸಿದೆ. ನಮ್ಮ ಸಂಸ್ಕೃತಿಗೆ ನಿರಂತರತೆ, ಚೈತನ್ಯ ಮತ್ತು ಅನುಭವಸಂಪತ್ತನ್ನು ನೀಡಿದೆ. ಏಳಿ, ಎಚ್ಚರಗೊಳ್ಳಿ, ಗುರಿ ಸಾಧಿಸುವವರೆಗೆ ನಿರಂತರವಾಗಿ ಮುನ್ನಡೆಯಿರಿ ಎಂಬ ಸಂದೇಶ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ ಎಂದರು.
ಗುರುದೇವ ರಾನಡೆ ಅವರು ಭಾರತೀಯ ತತ್ವಜ್ಞಾನ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಚಿಂತಕರಾಗಿದ್ದು, ಆತ್ಮವಿಸ್ಮೃತಿ ಮತ್ತು ಕೀಳರಿಮೆಯಿಂದ ಬಳಲುತ್ತಿದ್ದ ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಲು ಅಪಾರ ಕೊಡುಗೆ ನೀಡಿದ್ದಾರೆ. ವ್ಯಕ್ತಿಯ ಅಂತರಂಗದಲ್ಲಿ ಪರಿವರ್ತನೆ ಸಂಭವಿಸಿದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂಬುದು ರಾನಡೆ ಅವರ ಸಂದೇಶವಾಗಿದೆ. ಯಶಸ್ಸಿನ ಜೊತೆಗೆ ಮೌಲ್ಯಗಳು, ತಂತ್ರಜ್ಞಾನದ ಜೊತೆಗೆ ಆತ್ಮಜ್ಞಾನವೂ ಅಗತ್ಯ ಎಂಬ ಅವರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ರಾನಡೆಯವರ ತತ್ವಗಳನ್ನು ಕೇವಲ ಓದುವುದಷ್ಟೇ ಅಲ್ಲದೇ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಕನಸು ಸಾಕಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.