ಶಿವಕುಮಾರ ಕುಷ್ಟಗಿ
ಹೋಳಿ ಹುಣ್ಣಿಮೆಯ ಐದನೇ ದಿನವಾದ ಶನಿವಾರ ಮುಂಜಾನೆಯಿಂದಲೇ ರಂಗಪಂಚಮಿ ಹಬ್ಬದ ಕಳೆಗಟ್ಟಿತ್ತು. ನಗರದ ಪ್ರಮುಖ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಾಮ-ರತಿಯರ ಮೂರ್ತಿಗಳ ಮೆರವಣಿಗೆ ಮತ್ತು ದಹನದ ಆನಂತರ ಬಣ್ಣದಾಟ ಆರಂಭವಾಯಿತು.
ರೇನ್ ಡ್ಯಾನ್ಸ್ ಹವಾ: ತೋಂಟದಾರ್ಯ ಮಠದ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ರೇನ್ ಡ್ಯಾನ್ಸ್ ಯುವಪಡೆಯನ್ನು ಆಕರ್ಷಿಸಿತು. ಡಿಜೆ ಹಾಡುಗಳ ಅಬ್ಬರಕ್ಕೆ ಸಾವಿರಾರು ಯುವಕ-ಯುವತಿಯರು ಹೆಜ್ಜೆ ಹಾಕುತ್ತಾ, ಕೃತಕ ಮಳೆಯಲ್ಲಿ ನೆನೆಯುತ್ತಾ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯುವಕರು ಮುಖವಾಡಗಳನ್ನು ಧರಿಸಿ, ಕಿರುಚುತ್ತಾ ಓಡಾಡುತ್ತಿದ್ದುದು ಹಬ್ಬಕ್ಕೆ ವಿಶೇಷ ಕಳೆ ನೀಡಿತ್ತು. ಯುವಕರು, ಹಿರಿಯರು ಸಾಂಪ್ರದಾಯಿಕ ಹಲಗೆ ಬಾರಿಸುತ್ತಾ ಮೆರವಣಿಗೆ ನಡೆಸುವ ಮೂಲಕ ಹಬ್ಬದ ಗತ್ತನ್ನು ಹೆಚ್ಚಿಸಿದರು. ರಂಗಪಂಚಮಿ ಹಿನ್ನೆಲೆಯಲ್ಲಿ ಅವಳಿ ನಗರದ ವಾಣಿಜ್ಯ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಬಸ್ ಸಂಚಾರ ವಿರಳವಾಗಿದ್ದರಿಂದ ಗ್ರಾಮೀಣ ಭಾಗದಿಂದ ಬಂದ ಪ್ರಯಾಣಿಕರು ಹಾಗೂ ಕೆಲಸ ನಿಮಿತ್ತ ಹೊರಟವರು ಪರದಾಡುವಂತಾಯಿತು. ಹಬ್ಬದ ಅಬ್ಬರ ಎಷ್ಟಿತ್ತೆಂದರೆ, ರಸ್ತೆ ಬದಿಯಲ್ಲೇ ಜನರು ಮಲಗಿದ್ದ ದೃಶ್ಯಗಳು ಕಂಡುಬಂದವು. ಇದು ಗುಂಡಿನ ಗಮ್ಮತ್ತು ಕೂಡ ಜೋರಾಗಿದ್ದಕ್ಕೆ ಸಾಕ್ಷಿಯಂತಿತ್ತು.ಡಿಸಿ ಕಚೇರಿ ಖಾಲಿ ಖಾಲಿ: ಒಂದೆಡೆ ನಗರದಲ್ಲಿ ಹಬ್ಬದ ಸಡಗರವಿದ್ದರೆ, ಇನ್ನೊಂದೆಡೆ ಜಿಲ್ಲಾಡಳಿತದ ಕಚೇರಿಗಳಲ್ಲಿ ಜನರಿಲ್ಲದೆ ನೀರವ ಮೌನ ಆವರಿಸಿತ್ತು. ಶನಿವಾರ ಸರ್ಕಾರಿ ರಜೆ ಇಲ್ಲದಿದ್ದರೂ, ಗದಗ ಜಿಲ್ಲಾಧಿಕಾರಿ ಕಚೇರಿ, ಜಿಪಂ ಮತ್ತು ಎಸಿ ಕಚೇರಿಗಳ ಸಿಬ್ಬಂದಿ ರಂಗಪಂಚಮಿ ನೆಪದಲ್ಲಿ ಕಚೇರಿಗೆ ಗೈರಾಗಿದ್ದರು.
ಪೊಲೀಸ್ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರಿಂದ ರಂಗಪಂಚಮಿ ಶಾಂತಿಯುತವಾಗಿ ಜರುಗಿತು.
ಒಟ್ಟಾರೆಯಾಗಿ, ಗದಗ-ಬೆಟಗೇರಿ ಅವಳಿ ನಗರವು ಬಣ್ಣದ ಹಬ್ಬದ ಗುಂಗಿನಲ್ಲಿ ಮಿಂದೆದ್ದರೆ, ಸರ್ಕಾರಿ ಕಚೇರಿಗಳು ಮಾತ್ರ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.