ರಂಗೇರಿದ ಸರ್ಕಾರಿ ನೌಕರರ ಸಂಘದ ಚುನಾವಣೆ

KannadaprabhaNewsNetwork |  
Published : Oct 27, 2024, 02:27 AM IST
ಸರ್ಕಾರಿ ನೌಕರರ ಚುನಾವಣೆಯ ಪ್ರಚಾರ ಸಭೆ ಸೇರಿದ ಶಿಕ್ಷಕರು. | Kannada Prabha

ಸಾರಾಂಶ

ಅಥಣಿ ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಲವು ವರ್ಷಗಳಿಂದ ಅವಿರೋಧ ಆಯ್ಕೆಯಾಗುತ್ತಿದ್ದ ಶಿಕ್ಷಣ ಇಲಾಖೆಯಲ್ಲಿ ಈ ಬಾರಿ ಪೈಪೋಟಿ ಏರ್ಪಟ್ಟಿದೆ.

ವಿಶೇಷ ವರದಿ

ಕನ್ನಡಪ್ರಭವಾರ್ತೆ ಅಥಣಿ

ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಲವು ವರ್ಷಗಳಿಂದ ಅವಿರೋಧ ಆಯ್ಕೆಯಾಗುತ್ತಿದ್ದ ಶಿಕ್ಷಣ ಇಲಾಖೆಯಲ್ಲಿ ಈ ಬಾರಿ ಪೈಪೋಟಿ ಏರ್ಪಟ್ಟಿದೆ.

ಸರ್ಕಾರಿ ಇಲಾಖೆಗಳ 26 ಸ್ಥಾನಗಳಿಗೆ ಅ.28ಕ್ಕೆ ಚುನಾವಣೆ ನಡೆಯಲಿದ್ದು, ಇವುಗಳ ಪೈಕಿ ಐದು ಇಲಾಖೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಇಲಾಖೆಗಳಲ್ಲಿ ಅವಿರೋಧ ಆಯ್ಕೆ ಸಾಧ್ಯವಾಗಿದೆ. ಆದರೆ, ಶಿಕ್ಷಣ ಇಲಾಖೆಯ 3 ಸ್ಥಾನಗಳು, ಆರೋಗ್ಯ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿಯಾಗಿ ಒಂದು ಸ್ಥಾನಕ್ಕೆ ಒಮ್ಮತ ಸಾಧ್ಯವಾಗದೇ ಚುನಾವಣೆಗೆ ಕಣ ಸಿದ್ಧವಾಗಿದೆ.

ಸರ್ಕಾರಿ ನೌಕರರಲ್ಲಿ ಹಿರಿಯರನ್ನೊಳಗೊಂಡ ಒಂದು ಸಮಿತಿ ಇದೆ. ಅದು ಮನಸ್ಸು ಮಾಡಿದರೆ ಈ ಇಲಾಖೆಗಳಲ್ಲೂ ಅವಿರೋಧ ಆಯ್ಕೆ ಮಾಡಬಹುದಾದ ಸಾಧ್ಯತೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಶಿಕ್ಷಣ ಇಲಾಖೆಯ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 1174 ಮತಗಳಿದ್ದು, ಮೂರು ಜನ ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಆದರೆ 6 ಜನ ಚುನಾವಣೆ ಕಣದಲ್ಲಿದ್ದಾರೆ. ಮಾಧ್ಯಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಎರಡು ಸ್ಥಾನಗಳಿದ್ದು, ನಾಲ್ವರು ಕಣದಲ್ಲಿದ್ದಾರೆ. 330 ಮತದಾರರಿದ್ದಾರೆ. ಪಪೂ ಕಾಲೇಜು ವಿಭಾಗದಿಂದ ಒಂದು ಸ್ಥಾನಕ್ಕೆ ಇಬ್ಬರು ಕಣದಲ್ಲಿದ್ದು, ಒಟ್ಟು 80 ಮತದಾರರಿದ್ದಾರೆ.

ಆರೋಗ್ಯ ಇಲಾಖೆಯಿಂದ ಒಂದು ಸ್ಥಾನಕ್ಕೆ 4 ಜನ ಕಣದಲ್ಲಿದ್ದಾರೆ. ಮತಗಳ ಸಂಖ್ಯೆ 165 ಇದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಜಂಟಿಯಾಗಿ ಎರಡು ಸದಸ್ಯ ಸ್ಥಾನಗಳಿಗೆ ನಾಲ್ವರು ಕಣದಲ್ಲಿದ್ದಾರೆ. 65 ಮತದಾರರಿದ್ದಾರೆ.

ರಂಗೇರಿದ ಪ್ರಚಾರ: ಶಿಕ್ಷಣ ಇಲಾಖೆ ಶಿಕ್ಷಕರ ವಿಭಾಗದ ಚುನಾವಣೆ ತುರಿಸಿನಿಂದ ಕೂಡಿದ್ದು, ವಿಭಿನ್ನ ರೀತಿಯ ಪ್ರಚಾರ ತಂತ್ರಗಳಲ್ಲಿ ತೊಡಗಿದ್ದಾರೆ. ಮದುವೆ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಚುನಾವಣೆಯದೇ ಚರ್ಚೆ ನಡೆಯುತ್ತಿದೆ. ಕೆಲವರು ದಿನಾಲೂ ಸಂಜೆ ಶಾಲಾ ಸಮಯ ಮಗಿದ ನಂತರ ಪ್ರಚಾರ ಮಾಡುತ್ತಿದ್ದಾರೆ.

ಪುಸ್ತಕದಲ್ಲಿ ಮಾತ್ರ ಹಾಜರಾತಿ: ಕೆಲವು ಶಿಕ್ಷಕರು ತಮ್ಮ ದಿನದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಚುನಾವಣೆ ಪ್ರಚಾರದಲ್ಲಿ ತೊಡಗಿದರೆ, ಇನ್ನೂ ಕೆಲವರು ಚುನಾವಣೆ ಮುಗಿಯುವರಿಗೆ ರಜೆ ಹಾಕಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.

ಶಿಕ್ಷಣ ಕ್ಷೇತ್ರದ ಅಭ್ಯರ್ಥಿಗಳು ಸುಮಾರು 10-15 ಕಾರು ತೆಗೆದುಕೊಂಡು ಪ್ರಚಾರಕ್ಕೆ ಹೊರಟಿರುವುದು ನೌಕರರ ವರ್ಗವನ್ನು ಕಣ್ಣು ಕುಕ್ಕಿಸುವಂತೆ ಮಾಡಿದೆ. ವಿಭಾಗ ಮಟ್ಟದಲ್ಲಿ ಶಾಲೆಗಳ ಉಸ್ತುವಾರಿ ಅಧಿಕಾರಿಗಳಿಗೆ ಕೆಲವು ಶಿಕ್ಷಕರು ಚುನಾವಣೆ ಮುಗಿಯುವವರೆಗೆ ಶಾಲಾ ತಪಾಸಣೆಗೆ ಬರಬೇಡಿ ಎಂಬ ಮೌಖಿಕವಾಗಿ ಹೇಳಿದ್ದಾರೆ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.ಕರ್ತವ್ಯದ ಶಿಕ್ಷಕರು ವೇಳೆ ಪ್ರಚಾರಕ್ಕೆ ಹೋಗುವುದು ತಪ್ಪು. ಶಾಲಾ ವೇಳೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ಇಲ್ಲದಿದ್ದರೆ ಅಂತಹ ತಕ್ಷಣ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

- ಸಿತಾರಾಮು, ಡಿಡಿಪಿಐ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ