ರಂಗೇರಿದ ನೈಋತ್ಯ ಪದವೀಧರ ಚುನಾವಣೆ ಕಣ

KannadaprabhaNewsNetwork | Published : May 13, 2024 12:05 AM

ಸಾರಾಂಶ

ನೈಋತ್ಯ ಪದವೀಧರ ಚುನಾವಣೆಗೆ ಟಿಕೆಟ್‌ ಫೈಟ್‌ ಮುಗಿದಿದ್ದು, ಕಾಂಗ್ರೆಸ್‌ನಿಂದ ಆಯನೂರು ಮಂಜುನಾಥ್‌ ಸ್ಪರ್ಧಿಸಿದರೆ, ಬಿಜೆಪಿ ಈ ಬಾರಿ ಡಾ.ಧನಂಜಯ ಸರ್ಜಿರನ್ನು ಕಣಕ್ಕಿಳಿಸಿದೆ. ನೈಋತ್ಯ ಪದವೀಧರ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸೋಲನ್ನೇ ಕಾಣದ ಬಿಜೆಪಿ ಈ ಬಾರಿಯೂ ಅದೇ ವಿಶ್ವಾಸದಲ್ಲಿದ್ದು, ಕಳೆದ ಬಾರಿ ಬಿಜೆಪಿಯಿಂದ ಇದೇ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಗೆಲುವು ಕಂಡು ಬಳಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದಿದ್ದ ಆಯನೂರು ಮಂಜುನಾಥ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದಿರುವ ಬೆನ್ನಲ್ಲೆ ಮತ್ತೊಂದು ಮಹತ್ವದ ಜನಮತ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ನೈಋತ್ಯ ಪದವೀಧರ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಘೋಷಿಸಿದ್ದು, ಚುನಾವಣೆ ಕಣ ರಂಗೇರಿದೆ.

ನೈಋತ್ಯ ಪದವೀಧರ ಚುನಾವಣೆಗೆ ಟಿಕೆಟ್‌ ಫೈಟ್‌ ಮುಗಿದಿದ್ದು, ಕಾಂಗ್ರೆಸ್‌ನಿಂದ ಆಯನೂರು ಮಂಜುನಾಥ್‌ ಸ್ಪರ್ಧಿಸಿದರೆ, ಬಿಜೆಪಿ ಈ ಬಾರಿ ಡಾ.ಧನಂಜಯ ಸರ್ಜಿರನ್ನು ಕಣಕ್ಕಿಳಿಸಿದೆ. ನೈಋತ್ಯ ಪದವೀಧರ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸೋಲನ್ನೇ ಕಾಣದ ಬಿಜೆಪಿ ಈ ಬಾರಿಯೂ ಅದೇ ವಿಶ್ವಾಸದಲ್ಲಿದ್ದು, ಕಳೆದ ಬಾರಿ ಬಿಜೆಪಿಯಿಂದ ಇದೇ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಗೆಲುವು ಕಂಡು ಬಳಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದಿದ್ದ ಆಯನೂರು ಮಂಜುನಾಥ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಆಯನೂರು ಮಂಜುನಾಥ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. 1994ರಲ್ಲಿ ಹೊಸನಗರ ಕ್ಷೇತ್ರದಿಂದ ವಿಧಾನಸಭೆಗೆ, 1998ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್, 2010ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2018ರಿಂದ ನೈಋತ್ಯ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಇನ್ನೂ ಬಿಜೆಪಿಯಿಂದ ಸ್ಪರ್ಧೆಗಿಳಿದಿರುವ ಡಾ.ಧನಂಜಯ್‌ ಸರ್ಜಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್‌ ಕೈ ತಪ್ಪಿತು. ಮೂಲತಃ ಚನ್ನಗಿರಿ ತಾಲೂಕು ಗೊಪ್ಪೇನಹಳ್ಳಿಯವರಾದ ಧನಂಜಯ್‌ ಸರ್ಜಿ ಮಕ್ಕಳ ತಜ್ಞರಾಗಿ ಹೆಸರುವಾಸಿಯಾಗಿದ್ದಾರೆ. ಸರ್ಜಿ ಸಮೂಹ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ್‌ ಸರ್ಜಿ ಸಮಾಜ ಸೇವೆಯಿಂದ ಜನಪ್ರಿಯರಾಗಿದ್ದಾರೆ.

ಪಕ್ಷ ನಿಷ್ಠೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿ

ನೈಋತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದ್ದು, ಅಲ್ಲದೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದರಿಂದ ಕಳೆದ 10 ತಿಂಗಳಿನಿಂದ ತಯಾರಿ ನಡೆಸಿದ್ದೇನೆ. ಆದರೆ ಟಿಕೆಟ್‌ ಸಿಗದೇ ಇರುವುದರಿಂದ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಎಸ್‌.ಪಿ.ದಿನೇಶ್ ಈಗಾಗಲೇ ಸ್ಪರ್ಧೆ ಖಚಿತಪಡಿಸಿದ್ದಾರೆ.

ಈ ಕ್ಷೇತ್ರದಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಠೇವಣಿ ಕಳೆದುಕೊಂಡಿತ್ತು. ನಾನು ಎರಡು ಬಾರಿ ನಿಂತಾಗಲೂ ಅಲ್ಪ ಮತಗಳ ಅಂತರದಿಂದ ಸೋತಿದ್ದೇನೆ. ನನ್ನ ಕ್ಷೇತ್ರದಲ್ಲಿ ಈ ಬಾರಿ 15 ಕಾಂಗ್ರೆಸ್ ಶಾಸಕರಿದ್ದಾರೆ. ಅವರಲ್ಲಿ 13 ಶಾಸಕರು ಮತ್ತು ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ನನಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನನಗೆ ಟಿಕೆಟ್‌ ಕೊಡಬೇಕು ಎಂದು ಹಠ ಹಿಡಿದಿರುವ ಎಸ್‌.ಪಿ.ದಿನೇಶ್‌ ಇನ್ನೂ ಅಭ್ಯರ್ಥಿ ಬದಲಾವಣೆಗೆ ಅವಕಾಶವಿದೆ. ಬದಲಾವಣೆ ಪ್ರಯತ್ನಕ್ಕೆ ಈಗಲೂ ನಾನು ಸುತ್ತುತ್ತಿದ್ದೇನೆ. ಒಂದು ವೇಳೆ ಅಧಿಕೃತ ಅಭ್ಯರ್ಥಿ ಬದಲಾಯಿಸಿ ಪಕ್ಷ ನಿಷ್ಠೆ ಇರುವವರೆಗೆ ಬೇರೆ ಯಾರಿಗಾದರೂ ಕೊಟ್ಟಲ್ಲಿ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲೂ ಅಸಮಾಧಾನದ ಮಾತು:

ಬಿಜೆಪಿ ಮೇಲ್ಮನೆ ಚುನಾವಣೆಗೆ ಅರ್ಹತೆ, ಆರ್ಥಿಕ ಸಬಲತೆ ಎಲ್ಲಾ ಇರುವ ಧನಂಜಯ ಸರ್ಜಿಯರನ್ನು ಆಯ್ಕೆ ಮಾಡಿದೆ. ಆದರೆ, ಇಬ್ಬರು ಲಿಂಗಾಯತ ಶಾಸಕರು, ಸಂಸದರು, ಮೇಲ್ಮನೆ ಸದಸ್ಯರು ಇದ್ದರೂ ನೈಋತ್ಯ ಪದವೀಧರ ಕ್ಷೇತ್ರಕ್ಕೂ ಲಿಂಗಾಯತ ಸಮುದಾಯದವರಿಗೇ ಪ್ರಾತಿನಿಧ್ಯ ನೀಡಿರುವುದು ಪಕ್ಷದೊಳಗೆ ಒಂದು ಸಣ್ಣ ಅಸಮಾಧಾನ ಎದ್ದಿದೆ. ಧನಂಜಯ ಸರ್ಜಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅನೇಕರನ್ನು ನಿರಾಸೆಗೊಳಿಸಲಾಗಿದೆ. ಐದು ಜಿಲ್ಲೆ ವ್ಯಾಪ್ತಿ ಹೊಂದಿರುವ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಶಿವಮೊಗ್ಗದವರಿಗೆ ಮಾನ್ಯತೆ ನೀಡಲಾಗಿದೆ. ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಅವರು ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದರು. ಅದೇ ರೀತಿ ಗಿರೀಶ್ ಪಟೇಲ್, ಡಾ.ಧನಂಜಯ ಸರ್ಜಿ, ಎಸ್.ದತ್ತಾತ್ರಿ, ಎಸ್. ಜ್ಞಾನೇಶ್ವರ್, ಸಂತೋಷ್ ಬಳ್ಳೇಕೆರೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಇದರ ಜೊತೆಗೆ ಶಿವಮೊಗ್ಗ, ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿರುವ ಈಡಿಗ ಸಮುದಾಯಕ್ಕೆ ಪದವೀಧರ ಕ್ಷೇತ್ರಕ್ಕೆ ಆದ್ಯತೆ ನೀಡಬೇಕೆಂಬ ಬೇಡಿಕೆ ಇತ್ತು. ಆದರೆ, ಕೊನೆಗೆ ಲಿಂಗಾಯತರಿಗೆ ಮಾನ್ಯತೆ ನೀಡಿ ಪ್ರಮುಖ ಜಾತಿಗಳನ್ನು ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ. ಕಾಂಗ್ರೆಸ್‌ಗೆ ಬಂಡಾಯದ ಬಿಸಿ:

ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದ್ದು, ಆಯನೂರು ಮಂಜುನಾಥ್‌ ರಿಗೆ ಟಿಕೆಟ್‌ ಕೊಟ್ಟಿರುವ ಕಾರಣ ಮೂಲ ಕಾಂಗ್ರೆಸ್ಸಿಗ ಎಸ್.ಪಿ. ದಿನೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರಿಗೆ ಬಿಟ್ಟು ನನಗೆ ಇಲ್ಲ ಬೇರೆ ಯಾರಿಗಾದರೂ ಟಿಕೆಟ್‌ ಕೊಡಿ ಎಂದು ಪಟ್ಟು ಹಿಡಿದಿದ್ದ ಎಸ್‌.ಪಿ.ದಿನೇಶ್ ಈಗ ಬಂಡಾಯ ಘೋಷಣೆ ಮಾಡಿದ್ದಾರೆ.

Share this article