ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ: ಗಾಯತ್ರಿ ಗೌಡರ

KannadaprabhaNewsNetwork |  
Published : Apr 23, 2025, 02:03 AM IST
22ಡಿಡಬ್ಲೂಡಿ1ಸಂಸ್ಕಾರ ಭಾರತಿ ಹಾಗೂ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ  ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು.  | Kannada Prabha

ಸಾರಾಂಶ

ನಾವಿಂದು ನಮ್ಮ ಇತಿಹಾಸ ತಿಳಿದುಕೊಳ್ಳುವ ಕೆಲಸವಾಗಬೇಕಿದೆ. ರಂಗೋಲಿ ಕಲೆಯು ಆಧ್ಯಾತ್ಮಿಕವಾಗಿ ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ದೇವತೆಗಳನ್ನು ಆಹ್ವಾನಿಸುವ ಸಂಪ್ರದಾಯ ರೂಢಿಯಲ್ಲಿದೆ.

ಧಾರವಾಡ: ರಂಗೋಲಿ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಇದರಲ್ಲಿ ವಿಜ್ಞಾನವಿದೆ, ಆಧ್ಯಾತ್ಮಿಕ ಭಾವನೆಗಳು ಅಡಗಿವೆ ಎಂದು ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಗಾಯತ್ರಿ ಗೌಡರ ಹೇಳಿದರು.

ಅ‍ವರು ಸಂಸ್ಕಾರ ಭಾರತಿ ಹಾಗೂ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಿಂದ ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ‘ವಿಶ್ವ ಭೂ ಅಲಂಕರಣ ದಿನ’ದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಲಿಯಂ ದಲ್‌ರೆಂಪಲ್ ಎಂಬ ಬ್ರಿಟಿಷ್ ಲೇಖಕ ತನ್ನ ‘ದಿ. ಗೋಲ್ಡನ್ ರೋಡ್’ಕೃತಿಯಲ್ಲಿ ಭಾರತವು ಎಷ್ಟೊಂದು ಜ್ಞಾನದಿಂದ ಸಂಪದ್ಭರಿತವಾಗಿತ್ತು. ಅದನ್ನು ಪಾಶ್ಚಾತ್ಯ ದೇಶಗಳು ಹೇಗೆ ಎರವಲು ಪಡೆದುಕೊಂಡಿವೆ ಎಂಬುದನ್ನು ಉಲ್ಲೇಖಿಸಿದ್ದಾನೆ. ನಾವಿಂದು ನಮ್ಮ ಇತಿಹಾಸ ತಿಳಿದುಕೊಳ್ಳುವ ಕೆಲಸವಾಗಬೇಕಿದೆ. ರಂಗೋಲಿ ಕಲೆಯು ಆಧ್ಯಾತ್ಮಿಕವಾಗಿ ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ದೇವತೆಗಳನ್ನು ಆಹ್ವಾನಿಸುವ ಸಂಪ್ರದಾಯ ರೂಢಿಯಲ್ಲಿದೆ ಎಂದರು.

ರಂಗೋಲಿಯಿಂದ ಭೂಮಿ ಅಲಂಕರಣ ಮಾಡುತ್ತ ಪೂಜೆ ಮಾಡುವುದು ನಮ್ಮ ಮೂಲ ಸಂಪ್ರದಾಯ. ಜಾಗತೀಕರಣದಿಂದಾಗಿ ಇಂತಹ ಸಂಪ್ರದಾಯಗಳು ಕಡಿಮೆಯಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಸಂಸ್ಕಾರ ಭಾರತಿ ಉತ್ತರ ಪ್ರಾಂತ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಮಾತನಾಡಿ, ಕಲೆಯಿಂದಲೇ ಮುಕ್ತಿಯನ್ನು ಗಳಿಸಿಕೊಳ್ಳುವ ಮನೋಭಾವ ಭಾರತಿಯರದ್ದು. ಅದು ಚಿತ್ರಕಲೆ, ನೃತ್ಯ, ಸಂಗೀತವಾಗಿರಬಹುದು. ಕಲೆಯ ಮೂಲಕ ದೇವರನ್ನು ಸಾಕ್ಷಾತ್ಕರಿಸಿಕೊಂಡು, ಆ ಮೂಲಕ ಮುಕ್ತಿಯನ್ನು ಹೊಂದುವ ಮಾರ್ಗ ಮಾಡಿಕೊಂಡಿದ್ದು ಭಾರತೀಯ ಪರಂಪರೆ. ಭೂ ದಿನ ಅಂದರೆ ಭೂಮಿಯನ್ನು ಅಲಂಕರಿಸುವಂತದ್ದು ಅನ್ನುವ ಪರಿಕಲ್ಪನೆಯಾಗಿದೆ. ಇಡೀ ವಿಶ್ವದಲ್ಲೇ ರಂಗೋಲಿಯನ್ನು ಹಾಕುವ ಪರಂಪರೆ ಭಾರತದಲ್ಲಿ ಮಾತ್ರ ಇದೆ ಎಂದರು.

ಹಿರಿಯ ಕಲಾವಿದ ಬಿ. ಮಾರುತಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ರಂಗೋಲಿ ಕಲಾವಿದ ಸಂತೋಷ ಪೂಜಾರಿ ಮಾತನಾಡಿದರು. ಚುಕ್ಕೆ ರಂಗೋಲಿಯಲ್ಲಿ ದ್ರಾಕ್ಷಾಯಿಣಿ ಹಿರೇಮಠ ಪ್ರಥಮ, ಮಂಜುಳಾ ರವಿಕುಮಾರ ದ್ವಿತೀಯ, ಶ್ರಾವಣಿ ಜೋಶಿ ತೃತೀಯ ಸ್ಥಾನ ಪಡೆದರೆ ಫ್ರೀ ಹ್ಯಾಂಡ್ ರಂಗೋಲಿ ವಿಭಾಗದಲ್ಲಿ ಸ್ವಾತಿ ಕುರಾಡೆ-ಪ್ರಥಮ, ಶೃತಿ ಅಮರಶೆಟ್ಟಿ ದ್ವಿತೀಯ ಹಾಗೂ ಪ್ರೀತಿ ಬಡಿಗೇರ-ತೃತೀಯ ಸ್ಥಾನ ಪಡೆದರು.

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖಸ್ಥ ಡಾ. ಬಸವರಾಜ ಕುರಿಯವರ, ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಇದ್ದರು. ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ. ಪತ್ತಾರ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ವೈಶಾಲಿ ರಸಾಳಕರ ಧ್ಯೇಯಗೀತೆ ಪ್ರಸ್ತುತ ಪಡಿಸಿದರು. ವೀರಣ್ಣ ಪತ್ತಾರ, ಡಾ. ಶ್ರೀಧರ ಕುಲಕರ್ಣಿ ಪ್ರಾರ್ಥಿಸಿದರು. ಶಿಲ್ಪಾ ಪಾಂಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ