ಕನ್ನಡಪ್ರಭ ವಾರ್ತೆ ಮೈಸೂರುಕ್ರೈಸ್ತ ಧರ್ಮವೂ ಬುದ್ಧ ಧಮ್ಮನಿಂದಲೇ ಪ್ರಭಾವವಾಗಿದೆ. ಹೀಗಾಗಿ ಬುದ್ಧ ಧಮ್ಮದಿಂದ ವಿಶ್ವದ ಬಹುತೇಕ ಧರ್ಮಗಳು ಪ್ರಭಾವಿತವಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಬಿ.ಎನ್. ಸುಮಿತ್ರಾ ಬಾಯಿ ಅಭಿಪ್ರಾಯಪಟ್ಟರು.ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಎಡ್ವಿನ್ ಆರ್ನಾಲ್ಡ್ ಅವರ ದಿ ಲೈಟ್ ಆಫ್ ಏಷಿಯಾ ಕೃತಿಯ ಕನ್ನಡಕ್ಕೆ ಅನುವಾದಿಸಿರುವ ಡಾ.ಕೆ. ಮಹದೇವ್ ಅವರ ಏಷ್ಯಾದ ಬೆಳಕು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಬುದ್ಧ ಧಮ್ಮದಿಂದ ವಿಶ್ವದ ಬಹುತೇಕ ಎಲ್ಲ ಧರ್ಮಗಳು ಪ್ರಭಾವಿತವಾಗಿವೆ. 12ನೇ ಶತಮಾನದಲ್ಲಿ ಶರಣರು ಕಾಯಕವೇ ಕೈಲಾಸ ಎನ್ನಲು ಬುದ್ಧರ ಪ್ರೇರಣೆ ಇದೆ. ಕ್ರೈಸ್ತ ಧರ್ಮವೂ ಬುದ್ಧ ಧಮ್ಮನಿಂದಲೇ ಪ್ರಭಾವವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದಲ್ಲಿ ಶೋಷಿತರ ವಿಮೋಚನೆಗೆ ಬುದ್ಧ ಧಮ್ಮವನ್ನು ಚಿಕಿತ್ಸೆ ಮಾರ್ಗವಾಗಿ ಅನುಸರಿಸಿದರು. ಹೀಗಾಗಿ ಬುದ್ಧ ಧಮ್ಮವೂ ಡಾ.ಬಿ.ಆರ್.ಅಂಬೇಡ್ಕರ್ ಕಾಲದಲ್ಲಿ ಪ್ರಜ್ವಲಿತವಾಗಲು ಆರಂಭವಾಯಿತು. ಧಮ್ಮ ಸ್ವೀಕರಿಸಿದ ಅವರು ಬೌದ್ಧ ಧಮ್ಮ ಪುನುರುತ್ಥಾನಗೊಳಿಸಿದಾಗಿ ಅವರು ಹೇಳಿದರು.ಅರ್ನಾಡ್ ಅವರು ಅಧ್ಯಾತ್ಮಿಕತೆಯಿಂದ ಬರೆದಿರುವ ಮಾದರಿಯಲ್ಲಿಯೇ ಅಷ್ಟೇ ಬೌದ್ಧಿಕ ಮಟ್ಟದಲ್ಲಿ ಕನ್ನಡಕ್ಕೆ ಡಾ. ಮಹದೇವ ಅನುವಾದಿಸಿದ್ದಾರೆ. ಕೃತಿಯಲ್ಲಿ ಕನ್ನಡದ ಔನ್ನತ್ಯ ಉದ್ದಕ್ಕೂ ಅನಾವರಣಗೊಂಡಿದೆ. ಇದೊಂದು ಸಣ್ಣ- ಪುಟ್ಟ ಕೆಲಸವಲ್ಲ. ಕೃತಿಯ ಉದ್ದಕೂ ಶಾಂತವಾಗಿ ಅನುಭವಾತ್ಮಕ ಓದಾಗಲಿದೆ. ಪ್ರತಿ ಪುಟದಲ್ಲಿಯೂ ಕಣ್ಣಿಗೆ ಕಟ್ಟಿದ ಸಚಿತ್ರ ವಿವರಣೆ ಸುಂದರವಾಗಿವೆ ಎಂದು ಅವರು ತಿಳಿಸಿದರು.ಹಿರಿಯ ಲೇಖಕ ಪ್ರೊ.ಸಿ. ನಾಗಣ್ಣ ಮಾತನಾಡಿ, ಕನ್ನಡ ಮತ್ತು ಕರ್ನಾಟಕಕ್ಕೆ ಈ ಹೊತ್ತು ಅನುವಾದದ ಸುಗ್ಗಿ ಕಾಲ. ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಫ್ಯೂದೋರ್ ದಾಸ್ತೋವ್ಸಕಿಯ ಅಪರಾಧ ಮತ್ತು ಶಿಕ್ಷೆ, ವನಮಾಲ ವಿಶ್ವನಾಥ್ ಅವರ ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು, ಡಿವಿಜಿ ಮೊಮ್ಮಗ ನಟರಾಜನ್ ಕಗ್ಗ, ಅವರ ಪತ್ನಿ ಬಿಜಿಎಲ್ ಸ್ವಾಮಿ ಅವರ ಹಸಿರು ಹೊನ್ನು, ಪ್ರೊ.ಡಿ.ಎ. ಶಂಕರ್ ಅವರು ಮ್ಯಾಕ್ಸ್ ಮುಲ್ಲರ್ ಧಮ್ಮಪದವನ್ನು ಅನುವಾದಿಸಿದ್ದಾರೆ ಎಂದರು.ಜಗತ್ತಿನ ಹಲವೆಡೆ ಕೋಪ ತಾಪಗಳಿಂದ 3ನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಿದೆ. ಇದರ ಪರಿಣಾಮ ಘೋರ. ಬುದ್ಧ ಗುರುವಿನ ಕೃಪೆಯಿಂದ ಯುದ್ಧ ಸನ್ನದ್ಧತೆ ದೂರಾಗಲಿ ಎಂದು ಹೇಳಿದರು.2024ರ ಕೊನೆಗೆ ಪ್ರಪಂಚದ ಹಲವು ಕಡೆ ಯುದ್ಧ ಸನ್ನದ್ಧ ಸ್ಥಿತಿ ನಿರ್ಮಾಣವಾಗುತ್ತದೆ. ಗಾಜಾ, ಲೆಬನಾನ್, ಉಕ್ರೇನ್ ಸೂಡಾನ್ ಮುಂತಾದ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿದೆ. ದಕ್ಷಿಣ ಕೊರಿಯಾ ಕ್ಷಿಪ್ರಕ್ರಾಂತಿಯಿಂದ ತಪ್ಪಿಸಿಕೊಂಡಿದೆ. ಸಿರಿಯಾದಲ್ಲಿ ಕ್ಷಿಪ್ರಕ್ರಾಂತಿಗೆ ಒಳಗಾಯಿತು. ಜಗತ್ತಿನ ಯಾವ ಭಾಗದಲ್ಲಿ ಯುದ್ಧ ನಡೆದರೂ ಅದರ ಪರಿಣಾಮವನ್ನು ನಾವೆಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.ಲೇಖಕ ಡಾ. ಮಹದೇವ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರ್ನಾಲ್ಡ್ ಅವರ ಕೃತಿಯೂ ಯುರೋಪಿನ ಅನೇಕ ಭಾಷೆ, ದಕ್ಷಿಣ ಭಾರತದ ಭಾಷೆಗಳಿಗೆ ಅನುವಾದಗೊಂಡಿದೆ. ಅನುವಾದಕ್ಕೆ 7 ವರ್ಷಗಳ ಕಾಲ ವ್ಯಯಿಸಿದ್ದೇನೆ. ನನ್ನ ಕನಸು ಪೂರ್ಣಗೊಂಡಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನುರಿತ ಪ್ರಾಧ್ಯಾಪಕರಿಲ್ಲ. ಈಗ ಯು.ಆರ್. ಅನಂತಮೂರ್ತಿ, ಸಿ.ಡಿ. ನರಸಿಂಹಯ್ಯ ಮುಂತಾದವರು ಮಾನಸಗಂಗೋತ್ರಿ ಆವರಣದಲ್ಲಿ ಗ್ರೀಕ್ ನಾಟಕಗಳ ಭೂತಗಳಂತೆ ಓಡಾಡುತ್ತ ಪರಿತಪಿಸುತ್ತಿದ್ದಾರೆ ಎನಿಸುತ್ತದೆ. ಸರ್ಕಾರ ಶೀಘ್ರ ನುರಿತ ಪ್ರಾಧ್ಯಾಪಕರನ್ನು ನಿಯೋಜಿಸಲಿ ಎಂದು ಅವರು ತಿಳಿಸಿದರು.ಎಡ್ವಿನ್ ಆರ್ನಾಲ್ಡ್ ಮೊಮ್ಮಗ ಮೊಹಮ್ಮದ್ ಮೈಕಲ್ ಅರ್ನಾಲ್ಡ್ ಕೃತಿ ಬಿಡುಗಡೆಗೊಳಿಸಿದರು. ಹಿರಿಯ ಲೇಖಕ ಪ್ರೊ.ಡಿ.ಎ. ಶಂಕರ್ ಅಧ್ಯಕ್ಷತೆ ವಹಿಸಿದ್ದರು.