ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಹಿರಿಯ ರಂಗಕರ್ಮಿ ಎಲ್.ಬಿ.ಶೇಖಮಾಸ್ತರ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಶಿವಶರಣ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆಯಿಂದ ಸಂಘದ ಕಚೇರಿಯಲ್ಲಿ ಸನ್ಮಾನಿಸಿ, ನೀಲಿಮಿಂಚು ಹಾಗೂ ಕಲ್ಲು ಮನಸ್ಸು ಕೃತಿ ನೀಡುವ ಮೂಲಕ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಸಾಹಿತಿ ಪರಶುರಾಮ, ಇಂತಹ ಪುರಾತನ ಜಿಲ್ಲೆಯಲ್ಲಿ ನಾಟ್ಯ ಮಂದಿರ ಇಲ್ಲದಿರುವುದು ನೋವಿನ ಸಂಗತಿ. ಕೂಡಲೇ ಕಲಾವಿದರ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಸುಸಜ್ಜಿತ ರಂಗಮಂದಿರ ನಿರ್ಮಿಸಿ ನಾಟಕ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಹಿರಿಯ ರಂಗಕರ್ಮಿ ಎಲ್.ಬಿ.ಶೇಖ ಮಾಸ್ತರ ಮಾತನಾಡಿ, ವಿಜಯಪುರ ನಗರದಲ್ಲಿ ವೃತ್ತಿ ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ವೀರರಾಣಿ ಕಿತ್ತೂರು ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ರಾಣಿ ಚನ್ನಮ್ಮ ನಾಟ್ಯ ಮಂದಿರದ ಕಟ್ಟಡ ಕಾಮಗಾರಿ ಕೂಡಲೇ ಪ್ರಾರಂಭಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು. ಆ ಮೂಲಕ ಸಂಕಷ್ಟದಲ್ಲಿರುವ ಕಲಾವಿದರನ್ನು ಕಾಪಾಡಲು ಸರ್ಕಾರ ಮುಂದಾಗಬೇಕೆಂದು ಹೇಳಿದರು.ರಾಣಿ ಚನ್ನಮ್ಮ ನಾಟ್ಯಮಂದಿರ ಹೋರಾಟ ಸಮಿತಿ ಸದಸ್ಯ ಹಾಗೂ ಸಾಹಿತಿ ಲಾಯಪ್ಪ ಇಂಗಳೆ ಮಾತನಾಡಿ, ಜಿಲ್ಲೆಯಲ್ಲಿ ಸ್ವಾತಂತ್ರ್ಯಪೂರ್ವದ ಇತಿಹಾಸ ಹೊಂದಿರುವ ಐತಿಹಾಸಿಕ ರಾಣಿ ಚನ್ನಮ್ಮ ನಾಟ್ಯಮಂದಿರ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಈ ಹಿಂದೆಯೇ ನಮ್ಮ ಹೋರಾಟ ಸಮಿತಿಯಿಂದ ಹಲವಾರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕಾಮಗಾರಿ ಪ್ರಾರಂಭಿಸದಿದ್ದರೆ ಮುಂದಿನ ದಿನಗಳಲ್ಲಿಯೂ ಕೂಡ ನಮ್ಮ ಸಮಿತಿ ಕಲಾವಿದರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದರು.
ಶಿವಶರಣ ಶೈಕ್ಷಣಿಕ, ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ಅಧ್ಯಕ್ಷ ಕಲ್ಲಪ್ಪ ಶಿವಶರಣ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್.ಬಿ.ಶೇಖ ಮಾಸ್ತರ್ ಕರ್ನಾಟಕದ ಹೆಸರಾಂತ ನಾಟಕಕಾರರಾಗಿದ್ದು ವೃತ್ತಿ ರಂಗಭೂಮಿ ಕ್ಷೇತ್ರಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ತನ್ನನ್ನು ತಾನು ಗೌರವಿಸಿಕೊಂಡಿದೆ ಎಂದರು. ಪತ್ರಕರ್ತರಾದ ಉಮೇಶ ಶಿವಶರಣ, ಭೀಮರಾಯ ಕುಂಟೋಜಿ, ಬಸವರಾಜ ಕುಬಕಡ್ಡಿ, ರವಿ ಮುರಗೋಡ, ಬಸವರಾಜ ಮಲಘಾಣ, ಗುರುರಾಜ ಹಂದ್ರಾಳ ಇದ್ದರು.