ನಗರಸಭೆ ವಾರ್ಡ್ 22ರ ಚುನಾವಣೆ: ಶೇ.56.79 ಮತದಾನ

KannadaprabhaNewsNetwork | Updated : Dec 28 2023, 01:47 AM IST

ಸಾರಾಂಶ

ಸ್ಥಳೀಯ ನಗರಸಭೆ ವಾರ್ಡ್ 22ಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಶಾಂತಿಯುತ ಮತದಾನ ಜರುಗಿತು. ನಗರದ ವಿವೇಕಾನಂದ ಶಾಲೆಯ ಎರಡು ಮತಗಟ್ಟೆಗಳಲ್ಲಿ ಬೆಳಗ್ಗೆ ಮಂದಗತಿಯಿಂದ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿದ್ದು ಒಟ್ಟು ಶೇ.56.79 ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸ್ಥಳೀಯ ನಗರಸಭೆ ವಾರ್ಡ್ 22ಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಶಾಂತಿಯುತ ಮತದಾನ ಜರುಗಿತು. ನಗರದ ವಿವೇಕಾನಂದ ಶಾಲೆಯ ಎರಡು ಮತಗಟ್ಟೆಗಳಲ್ಲಿ ಬೆಳಗ್ಗೆ ಮಂದಗತಿಯಿಂದ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿದ್ದು ಒಟ್ಟು ಶೇ.56.79 ಮತದಾನವಾಗಿದೆ.

2754ರಲ್ಲಿ 1564 ಜನರು ಮತ ಚಲಾಯಿಸಿದ್ದಾರೆ. ಇದರಲ್ಲಿ 800 ಪುರುಷ, 764 ಮಹಿಳೆಯರಿದ್ದಾರೆ.

ಕೊನೆ ಕ್ಷಣದ ಓಲೈಕೆ:

ಮತಗಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಇಬ್ಬರು ಪಕ್ಷೇತರರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕೊನೆ ಕ್ಷಣದಲ್ಲಿ ಮತದಾರರ ಓಲೈಕೆಯಲ್ಲಿ ತೊಡಗಿದ್ದರು. ಮತದಾರರ ಓಲೈಕೆ ಮಾಡುತ್ತಿರುವಾಗ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.

ಗುರುತಿನ ಚೀಟಿ ತಾಪತ್ರಯ:

ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ ಮಾಡಿದ್ದರೂ ಕೆಲವು ಮತದಾರರು ಅದನ್ನು ಮರೆತು ಮತಗಟ್ಟೆಗೆ ಆಗಮಿಸಿ ತೊಂದರೆ ಅನುಭವಿಸುತ್ತಿರುವುದು ಕಂಡು ಬಂತು. ಒಬ್ಬ ಸುಶಿಕ್ಷಿತ ಮತದಾರ ಜೆರಾಕ್ಸ್ ಮಾಡಿದ ಗುರುತಿನ ಪತ್ರದೊಂದಿಗೆ ಮತ ಚಲಾಯಿಸಲು ಆಗಮಿಸಿದ್ದರು. ಆದರೆ ಅದಕ್ಕೆ ಚುನಾವಣಾ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಹೀಗಾಗಿ ಮತಗಟ್ಟೆಯಿಂದ ಪುನಃ ಮನೆಗೆ ತೆರಳಿ ಗುರುತಿನ ಮೂಲ ಪ್ರತಿ ತೋರಿಸಿ ಮತ ಚಲಾಯಿಸಿದರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಚುನಾವಣಾಧಿಕಾರಿಗಳು ಮತದಾನಕ್ಕೂ ಮೊದಲು ಸಾರ್ವಜನಿಕರಿಗೆ ಗುರುತಿನ ಚೀಟಿ ಮೂಲ ಪ್ರತಿ ಕಡ್ಡಾಯ ಮಾಡಿರುವ ಕುರಿತು ಜಾಗೃತಿ ಮೂಡಿಬೇಕಾಗಿತ್ತು ಎಂದರು.

ಕುರುಡು ಕಾಂಚಾಣ:

ಈ ಚುನಾವಣೆಗೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ನೇತೃತ್ವದಲ್ಲಿ ಸಭೆ ನಗರದಲ್ಲಿ ಸಭೆ ನಡೆದಿತ್ತು. ಪಾರದರ್ಶಕ ಚುನಾವಣೆ ನಡೆಸುವ ಕುರಿತು ಚರ್ಚೆಯಾಗಿತ್ತು. ಇದಕ್ಕೆ ಸರ್ವಪಕ್ಷಗಳ ಮುಖಂಡರು ಒಪ್ಪಿದ್ದರು. ಆದರೆ ಈ ಚುನಾವಣೆಯಲ್ಲಿ ಹಣ ಹಂಚಿಕೆಯಾಗಿದೆ. ಮತದಾನ ಕೇಂದ್ರದ 100 ಮೀಟರ್‌ ವ್ಯಾಪ್ತಿಯ ಹೊರಗಡೆ ಚುನಾವಣೆಗೆ ಸ್ಪರ್ಧಿಸಿದ್ದ ಬಹುತೇಕ ಎಲ್ಲ ಅಭ್ಯರ್ಥಿಗಳ ಬೆಂಬಲಿಗರು ಹಣ ಹಂಚಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿಯೂ ಕುರುಡು ಕಾಂಚಾಣ ಸದ್ದು ಮಾಡಿದೆ ಎನ್ನಲಾಗುತ್ತಿದೆ.

ಅಂಗವಿಕಲರು ಹಾಗೂ ವೃದ್ಧರಿಗೆ ವಿಶೇಷ ವ್ಯವಸ್ಥೆ:

ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸುವ ಅಂಗವಿಕಲರು ಹಾಗೂ ವಯೋವೃದ್ಧರಿಗಾಗಿ ಮತಕೇಂದ್ರದಲ್ಲಿ ಎರಡು ವ್ಹಿಲ್ ಚೇರ್ ಹಾಗೂ ನಗರಸಭೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತಹಸೀಲ್ದಾರ ಕಚೇರಿಯ ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಇಡಲಾಗಿದ್ದು, ಡಿಸೆಂಬರ್‌ 30ರಂದು ಮತಎಣಿಕೆ ನಡೆಯಲಿದೆ.

Share this article