ಪೂಜಾ ಬಳಕೆಗೆ ಪ್ರಾಣಿಗಳ ವಸ್ತು ಇರಿಸಲು ಅವಕಾಶ ಕಲ್ಪಿಸಲು ರಂಜನ್‌ ಮನವಿ

KannadaprabhaNewsNetwork |  
Published : Feb 03, 2024, 01:47 AM IST
ಚಿತ್ರ : ಅಪ್ಪಚ್ಚು ರಂಜನ್ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್‌, ಕೊಡಗು ಜಿಲ್ಲೆಯಲ್ಲಿನ ಸಂಸ್ಕೃತಿ ಉಳಿಸುವ ದೃಷ್ಟಿಯಿಂದ ಪೂರ್ವಜರು ಉಳಿಸಿ ಪೂಜೆಗೆ ಬಳಸುವ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯ ಜನರು ಪ್ರಮುಖವಾಗಿ ರೈತರು ಮತ್ತು ಬೆಳೆಗಾರರು ಕಾಯಿದೆಯ ಅಸ್ತಿತ್ವಕ್ಕೆ ಮುಂಚೆಯೇ ಕಾಡುಪ್ರಾಣಿಗಳ ವಸ್ತುಗಳನ್ನು ತಮ್ಮಲ್ಲಿ ಸಂರಕ್ಷಿಸಿ ಇಟ್ಟುಕೊಂಡಿದ್ದಾರೆ ಮತ್ತು ಪೀಳಿಗೆಗೆ ರವಾನಿಸಿದ್ದಾರೆ ಎಂದು ವಿವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲೆಯಲ್ಲಿನ ಸಂಸ್ಕೃತಿ ಉಳಿಸುವ ದೃಷ್ಟಿಯಿಂದ ಪೂರ್ವಜರು ಉಳಿಸಿ ಪೂಜೆಗೆ ಬಳಸುವ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವಂತೆ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್‌ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಜಿಲ್ಲೆಯ ಜನರು ಪ್ರಮುಖವಾಗಿ ರೈತರು ಮತ್ತು ಬೆಳೆಗಾರರು ಕಾಯಿದೆಯ ಅಸ್ತಿತ್ವಕ್ಕೆ ಮುಂಚೆಯೇ ಕಾಡುಪ್ರಾಣಿಗಳ ವಸ್ತುಗಳನ್ನು ತಮ್ಮಲ್ಲಿ ಸಂರಕ್ಷಿಸಿ ಇಟ್ಟುಕೊಂಡಿದ್ದಾರೆ ಮತ್ತು ಪೀಳಿಗೆಗೆ ರವಾನಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಸ್ವಾತಂತ್ರ್ಯ ಪೂರ್ವದಲ್ಲಿ ಸಂಗ್ರಹಿಸಿದವು ಎಂದು ವಿವರಿಸಿದ್ದಾರೆ.

ಆಗಿನ ಕಾಲದಲ್ಲಿ ಕಾಡು ಪ್ರಾಣಿಗಳಿಂದ ತಮ್ಮನ್ನು ಸಂರಕ್ಷಿಸಿಕೊಳ್ಳಲು ಬೇಟೆಯಾಡುವ ಅನಿವಾರ್ಯತೆ ಇತ್ತು. ಅಲ್ಲದೆ ಆಗಿನ ಬ್ರಿಟಿಷ್ ಬೆಳಗಾರರಿಗೆ ಬೇಟೆಯಾಡುವುದು ಒಂದು ಹವ್ಯಾಸವಾಗಿತ್ತು. ಹಾಗಾಗಿ ಈ ವನ್ಯಜೀವಿಗಳ ವಸ್ತುಗಳನ್ನು ಪರಂಪರೆಯ ಗುರುತಾಗಿ ಇರಿಸಲಾಗಿದೆ. ಮತ್ತು ಪಿತ್ರಾರ್ಜಿತವಾಗಿ ಪೀಳಿಗೆಗೆ ರವಾನಿಸಲಾಗಿದೆ. ಪ್ರಸ್ತುತ ಪೀಳಿಗೆಯು ಅದರ ಮೇಲೆ ಭಾವನಾತ್ಮಕ ಬಾಂಧವ್ಯವನ್ನು ಹೊಂದಿದೆ ಮತ್ತು ಇದನ್ನು ಕುಟುಂಬದ ಚರಾಸ್ತಿ ಎಂದು ಪರಿಗಣಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಪೂಜೆ, ಕುಣಿಯುವ ಪದ್ಧತಿ:

ಜಿಲ್ಲೆಯಲ್ಲಿ ಜಿಂಕೆಯ ಕೊಂಬುಗಳನ್ನು ಹಾಗೂ ಕೆಲವು ಕಾಡು ಪ್ರಾಣಿಯ ವಸ್ತುಗಳನ್ನು ದೇವರ ಪೂಜೆಗೆ ಬಳಸಿ, ನಂತರ ಅದನ್ನು ಹೊತ್ತು ಕುಣಿಯುವ ಪದ್ಧತಿ (ಜಿಂಕೆಯ ಕೊಂಬುಗಳನ್ನು) ತಲತಲಾಂತರಗಳಿಂದ ನಡೆದು ಬಂದಿದೆ. ಇದು ಒಂದು ನಮ್ಮ ಸಂಸ್ಕೃತೀಯ ಸಂಕೇತವಾಗಿದ್ದು, ಈ ಉದ್ದೇಶದಿಂದ ನಮ್ಮ ಹಿರಿಯರು ಇಂತಹ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು, ಅದನ್ನು ಮುಂದಿನ ಪೀಳಿಗೆಯವರು ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಅವರ ಆಚಾರ ವಿಚಾರದಂತೆ ದೈವಿಸ್ವರೂಪದಲ್ಲಿ ಈ ವಸ್ತುಗಳನ್ನು ಪೂಜಿಸಿಕೊಂಡು ತಮ್ಮ ಸಂಸ್ಕೃತಿಯ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.

ಕಾಡು ಪ್ರಾಣಿಗಳ ಹತ್ಯೆ ವಿರುದ್ಧ ಅರಣ್ಯ ಇಲಾಖೆಯು ವನ್ಯಜೀವಿ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಜನರು ಬಹಳ ಹಿಂದೆಯೇ ಕಾಡುಪ್ರಾಣಿಗಳ ವಸ್ತುಗಳನ್ನು ಸಂಗ್ರಹಿಸುವುದನ್ನು ಸಹ ನಿಲ್ಲಿಸಿದ್ದಾರೆ. ಅವರ ವಶದಲ್ಲಿ ಉಳಿದಿರುವ ವಸ್ತುಗಳು ಪಿತ್ರಾರ್ಜಿತ ಚರಾಸ್ತಿಗಳಾಗಿ, ದೈವಿ ಸ್ವರೂಪವಾಗಿ ಕಾಣುತ್ತಿರುವ ಈ ವಸ್ತುಗಳನ್ನು ನಮಗೆ ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ, ನಾವು ಪ್ರಕೃತಿಯೇ ದೇವರೆಂದು ಪೂಜಿಸುವ ಕೊಡಗು ಜಿಲ್ಲೆಯ ಸಂಸ್ಕೃತಿ ಆಚಾರ ವಿಚಾರ ಉಳಿಸುವ ದೃಷ್ಟಿಯಿಂದ ಅವಕಾಶ ಕಲ್ಪಿಸಬೇಕು.

ನಮ್ಮ ಹಿರಿಯರು ಉಳಿಸಿಕೊಟ್ಟಿದ್ದ, ಕಾಡುಪ್ರಾಣಿಗಳ ವಸ್ತುಗಳನ್ನು ಹಾಗೆಯೇ ಮುಂದುವರೆಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಮೂಲಕ ಕೊಡಗು ಜಿಲ್ಲೆಯ ಜನರ ಭಾವನೆಗಳಿಗೆ ಯಾವುದೇ ದಕ್ಕೆಯಾಗದಂತೆ, ಇಲ್ಲಿನ ಸಂಸ್ಕೃತಿ ಉಳಿಸಿ ಬೆಳೆಸುವ ದೃಷ್ಟಿಯಿಂದ ತಾವುಗಳು ಪೂರ್ವಜರು ಸಂಗ್ರಹಿಸಿದ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...