2030ಕ್ಕೆ ಗದಗ ನಗರದಲ್ಲಿ ರಣಜಿ ಪಂದ್ಯ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Apr 13, 2026, 02:00 AM IST
ಕಾರ್ಯಕ್ರಮವನ್ನು ಟ್ರೋಫಿ ಬಿಡುಗಡೆಯ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ನಗರದಲ್ಲಿ ರಣಜಿ ಪಂದ್ಯಗಳು ನಡೆಯುವಂಥ ಗುಣಮಟ್ಟದ ಮೈದಾನ ನಿರ್ಮಾಣಕ್ಕಾಗಿ ಈಗಾಗಲೇ ಕೆಎಸ್ಸಿಎ ಸಂಸ್ಥೆಗೆ ಹೆದ್ದಾರಿಗೆ ಹೊಂದಿಕೊಂಡೇ ಇರುವ 12 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅದಕ್ಕೆ ಬೇಕಾಗುವ ಬೋರ್ ವೆಲ್ ಮತ್ತು ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ.

ಗದಗ: 2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಿ, ಅಲ್ಲಿ ರಣಜಿ ಪಂದ್ಯವನ್ನು ಆಯೋಜಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಭಾನುವಾರ ರಾತ್ರಿ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಸನ್-2 ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದಲ್ಲಿ ರಣಜಿ ಪಂದ್ಯಗಳು ನಡೆಯುವಂಥ ಗುಣಮಟ್ಟದ ಮೈದಾನ ನಿರ್ಮಾಣಕ್ಕಾಗಿ ಈಗಾಗಲೇ ಕೆಎಸ್ಸಿಎ ಸಂಸ್ಥೆಗೆ ಹೆದ್ದಾರಿಗೆ ಹೊಂದಿಕೊಂಡೇ ಇರುವ 12 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅದಕ್ಕೆ ಬೇಕಾಗುವ ಬೋರ್ ವೆಲ್ ಮತ್ತು ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಅದಕ್ಕಾಗಿ ರಾಜ್ಯ ಕಿಕ್ರೆಟ್ ಸಂಸ್ಥೆ ಕೂಡಲೇ ಗಮನ ಹರಿಸಬೇಕು. ಧಾರವಾಡ ಝೋನ್ ನ ವೀರಣ್ಣ ಸವಡಿ ವಿಶೇಷ ಗಮನ ನೀಡಬೇಕು ಎಂದರು.

ಈ ಬಾರಿಯ ಆರ್‌ಸಿಬಿಯನ್ನು ಖರೀದಿಸಿದ ಮೊತ್ತವನ್ನು ಕೇಳಿದರೆ ಸಾಕು, ಕ್ರಿಕೆಟ್ ಎಷ್ಟು ಶ್ರೀಮಂತ ಕ್ರೀಡೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಗದಗ ಭಾಗದಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗುವಂತಾಗಬೇಕು. ಅದಕ್ಕಾಗಿ ಉತ್ತಮ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟ್ ಸಂಸ್ಥೆ ವಿಶೇಷ ಗಮನ ನೀಡಬೇಕು ಎಂದರು.

ನಗರದಲ್ಲಿಯೂ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ, ಸಾಧನೆ ಮಾಡುವುದರಲ್ಲಿ ಇಲ್ಲಿನ ಯುವಕರು ಎತ್ತಿದ ಕೈ. ಆದರೆ ಮೂಲ ಸೌಲಭ್ಯಕ್ಕೆ ಕೊರತೆ ಇತ್ತು. ಈಗ ಅದೆಲ್ಲಾ ಸರಿ ಹೋಗಿದೆ. ನಮ್ಮ ಹುಡುಗರು ಒಂದೊಮ್ಮೆ ಸಾಧನೆ ಮಾಡಲು ಪ್ರಾರಂಭ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವ ಸಾಮರ್ಥ್ಯ ಹೊಂದಿದ್ದಾರೆ. ಈ ಪಂದ್ಯಾವಳಿಗಳು ಎಲ್ಲರಿಗೂ ಪ್ರೇರಣೆಯಾಗಲಿ. ಹೆಚ್ಚಿನ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಆ ಮೂಲಕ ನಾಡಿಗೆ ಹೊಸ ಪ್ರತಿಭೆಗಳನ್ನು ಈ ಕ್ರೀಡಾಕೂಟ ಕೊಡುವಂತಾಗಲಿ ಎಂದರು.

ಕೆಎಸ್‌ಸಿಎ ಧಾರವಾಡ ಜೋನ್ ಸಂಚಾಲಕ ವೀರಣ್ಣ ಸವಡಿ ಮಾತನಾಡಿ, ಹಿರಿಯರಾದ ಎಚ್.ಕೆ. ಪಾಟೀಲರ ಸದಾಯಶದಂತೆ 2030ರಲ್ಲಿ ಗದಗ ನಗರದಲ್ಲಿ ರಣಜಿ ಪಂದ್ಯಗಳನ್ನು ನಡೆಸಲು ಬೇಕಾದ ಮೈದಾನ ನಿರ್ಮಾಣಕ್ಕೆ ವಿಶೇಷ ಗಮನ ನೀಡಲಾಗುವುದು. ಇದಕ್ಕೆ ವಿಶೇಷ ಆದ್ಯತೆ ಮೇರೆಗೆ ಶ್ರಮಿಸೋಣ ಎಂದರು.

ಅಂತಾರಾಷ್ಟ್ರೀಯ ಕ್ರಿಕೆಟಿಗ ಸುನೀಲ್ ಜೋಶಿ ಮಾತನಾಡಿ, ಗದಗ ಭಾಗದಲ್ಲಿ ಅತ್ಯುತ್ತಮ ಕ್ರಿಕೆಟ್ ಪಟುಗಳಿದ್ದು, ಅವರಿಗೆ ಸೂಕ್ತ ವೇದಿಕೆ ಸಿಗಬೇಕಿದೆ. ಇಲ್ಲಿ ಕೂಡಾ ಸಾಕಷ್ಟು ಜನ ಐಪಿಎಲ್ ಆಡುವಂತಾ ಸಾರ್ಮಥ್ಯವನ್ನು ಹೊಂದಿದ್ದಾರೆ. ಆದರೆ ಅವರಿಗೆ ಉತ್ತಮವಾದ ಕ್ರೀಡಾಂಗಣದ ಅವಶ್ಯಕತೆ ಇದೆ. ಗದಗ ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಾನು ಕೂಡಾ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಮಿಥುನ್ ಪಾಟೀಲ, ವೆಂಕಟೇಶಗೌಡ ಪಾಟೀಲ, ಬಸವರಾಜ ಕಡೇಮನಿ, ವಿದ್ಯಾಧರ ದೊಡ್ಡಮನಿ, ಡಾ. ಎಸ್.ಆರ್. ನಾಗನೂರ, ಡಾ. ವೇಮನ ಸಾಹುಕಾರ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ ಶೇಖ ಮುಂತಾದವರು ಇದ್ದರು. ಬಾಹುಬಲಿ ಜೈನರ ನಿರೂಪಿಸಿದರು. ಪಂದ್ಯಾವಳಿಯ ಆಯೋಜಕ ಕೃಷ್ಣಗೌಡ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಕಿಯು ನಾಶ ಸೂಚಿಸಿದರೆ ಮಳೆಯು ಸೃಷ್ಟಿ ಸೂಚಿಸುತ್ತದೆ: ಡಾ. ಬಿ.ಎಂ. ಪುಟ್ಟಯ್ಯ
ಯೋಗ, ಪ್ರಾಣಾಯಾಮದಿಂದ ಮಾನಸಿಕ ಸದೃಢತೆ: ಎಸ್‌ಪಿ ಜಾಹ್ನವಿ