ಅತ್ಯಾಚಾರ ಬೆದರಿಕೆ: ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ ಯತ್ನ

KannadaprabhaNewsNetwork |  
Published : Oct 26, 2024, 12:57 AM IST
11 | Kannada Prabha

ಸಾರಾಂಶ

ಆರೋಪಿ ಯುವತಿಯ ಸಹೋದರಿನಿಗೆ ನಿರಂತರ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಗುರುವಾರ ರಾತ್ರಿ ಡೆತ್​ನೋಟ್​ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕನ್ನಡಪ್ರಭ ವಾರ್ತೆ ಮಂಗಳೂರು

‘ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ’ ಎಂದು ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುರತ್ಕಲ್‌ನಲ್ಲಿ ಸಂಭವಿಸಿದೆ.

‘ಇಡ್ಯಾ ನಿವಾಸಿ, ಮುಸ್ಲಿಂ ಸಮುದಾಯದ ಯುವಕ ಕಿರುಕುಳ ನೀಡುತ್ತಿದ್ದಾನೆ. ಪೊಲೀಸರಿಂದಲೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನೂ ಬಿಡಬಾರದು’ ಎಂದು ಯುವತಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕಳೆದ ಕೆಲವು ದಿನಗಳ ಹಿಂದೆ ಯುವತಿಯ ಅಣ್ಣನಿಗೆ ಯುವಕ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ ಹಾಕುತ್ತಿದ್ದನು. ‘ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ’ ಎಂದು ಯುವತಿಯ ಸಹೋದರನಿಗೆ ಮುಸ್ಲಿಂ ಯುವಕ ಬೆದರಿಕೆ ಸಂದೇಶ ಕಳುಹಿಸಿದ್ದನು.

ನನಗೆ ಮುಸ್ಲಿಂ ಸಮಾಜದ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಈ ಘಟನೆ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುರತ್ಕಲ್ ಪೊಲೀಸರು ಸದಾಶಿವ ನಗರದ ಶಾರಿಕ್‌ ನೂರ್ಜಹಾನ್‌ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ.ಈ ಬಳಿಕವೂ ಆರೋಪಿ ಯುವತಿಯ ಸಹೋದರಿನಿಗೆ ನಿರಂತರ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಗುರುವಾರ ರಾತ್ರಿ ಡೆತ್​ನೋಟ್​ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಯುವತಿಗೆ ಕಿರುಕುಳ ಇತ್ತು ಎಂದ ಸ್ನೇಹಿತೆ: ಆತ್ಮಹತ್ಯೆಗೆ ಯತ್ನಿಸಿದ ಯುವತಿಗೆ ಮುಸ್ಲಿಂ ಯುವಕ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆಯ ಸ್ನೇಹಿತೆ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆ ಯುವತಿ ಮಾರ್ಚ್‌ನಲ್ಲಿ ಇಡ್ಯಾದ ವಾಣಿಜ್ಯ ಸಂಕೀರ್ಣದಲ್ಲಿ ಜನರಲ್ ಸ್ಟೋರ್ ತೆರೆದಿದ್ದಳು. ಅದರ ಮುಂದೆಯೇ ಮುಸ್ಲಿಂ ಯುವಕನ ಮನೆ ಇದೆ. ಆ ಮನೆಯವರು ಈಕೆಯ ಅಂಗಡಿಗೆ ಗ್ರಾಹಕರಾಗಿ ಬರುತ್ತಿದ್ದರು. ಹೀಗಾಗಿ ಯುವಕನ ತಾಯಿ ನೂರ್ ಜಹಾನ್ ಹಾಗೂ ಯುವತಿಯ ತಾಯಿ ತುಂಬಾ ಹತ್ತಿರವಾಗಿದ್ದರು. ಆಗ ಅಂಗಡಿಯ ಗೂಗಲ್ ಪೇ ನಂಬರ್ ಪಡೆದುಕೊಂಡು ಅದರಿಂದ ಯುವತಿಗೆ ಮೆಸೇಜ್ ಕಳುಹಿಸುತ್ತಿದ್ದನು. ಗೂಗಲ್ ಪೇ ನಲ್ಲಿ‌ ಯುವಕನ ನಂಬರ್‌ನ್ನು ಯುವತಿ ಬ್ಲಾಕ್ ಮಾಡಿದ್ದಳು. ಬಳಿಕ ಇನ್‌ಸ್ಟಾಗ್ರಾಂನಲ್ಲಿ ರಿಕ್ವೆಸ್ಟ್‌ ಕಳುಹಿಸುತ್ತಿದ್ದನು. ಇದರಿಂದಾಗಿ ತನ್ನ ಮೊಬೈಲ್‌ ನಂಬರು ಹಾಗೂ ಗೂಗಲ್‌ ಪೇ ಖಾತೆಯನ್ನು ಬದಲಾಯಿಸುತ್ತೇನೆ ಎಂದು ಯುವತಿ ಹೇಳಿದ್ದಳು.

ಒಂದು ದಿನ ಯುವಕನ ತಂಗಿ ಬಂದು ಇವಳ ಮೊಬೈಲ್‌ನ್ನು ಅವರ ಮನೆಗೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ಏನು ಪಾಸ್ ವರ್ಡ್ ಚೇಂಜ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ಯುವಕ ಮತ್ತೆ ಫೇಸ್‌ಬುಕ್‌ ಖಾತೆ ತೆರೆದಿದ್ದಾನೆ. ಯುವತಿಯ ಸಹೋದರ ಹಾಗೂ ಸ್ನೇಹಿತರಿಗೆ ಮೆಸೇಜ್ ಹಾಕಿದ್ದಾನೆ ಎಂದಿದ್ದಾರೆ. ಗುರುವಾರ ರಾತ್ರಿ ಮತ್ತೆ ಯುವತಿಯ ಅಣ್ಣನಿಗೆ ಮೆಸೇಜ್ ಮಾಡಿದ್ದಾನೆ. ಇದರಿಂದ ಕಂಗೆಟ್ಟ ಯುವತಿ ಡೆತ್‌ನೋಟ್‌ ಬರೆದಿಟ್ಟು ನಿದ್ರೆ ಮಾತ್ರೆ ನುಂಗಿದ್ದಾಳೆ.

ಪೊಲೀಸರು ಅವನನ್ನು ವಿಚಾರಣೆ ಮಾಡಿ ಹೊರಗೆ ಬಿಟ್ಟಿರುವುದು ಅವಳಿಗೆ ಟೆನ್ಶನ್ ಆಗಿದೆ. ಆತ ಪೊಲೀಸ್‌ ವಿಚಾರಣೆಯಿಂದ ಹೊರಗೆ ಬಂದ ಬಳಿಕ ಯುವಕನ ತಾಯಿ ಇವಳನ್ನು ನೋಡಿ ಜೋರು ನಗುತ್ತಿದ್ದಳು. ಹೀಗಾಗಿ ರಾತ್ರಿ ಬಂದ ಮೆಸೇಜ್‌ ಆತನದ್ದೇ ಎಂದು ಖಚಿತವಾಗಿದೆ ಎಂದು ಹೇಳಿದ್ದಾಳೆ. ಶುಕ್ರವಾರ ನಸುಕಿನ 3 ಗಂಟೆಗೆ ನಿದ್ರೆ ಮಾತ್ರೆ ತೆಗೆದುಕೊಂಡಿದ್ದು, ಈಗ ವಾಂತಿ ಮಾಡುತ್ತಿದ್ದಾಳೆ ಎಂದು ಸ್ನೇಹಿತೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಹಿಂದು ಸಂಘಟನೆಗಳ ಭೇಟಿ: ಈ ಘಟನೆಗೆ ಸಂಬಂಧಿಸಿ ಹಿಂದು ಸಂಘಟನೆಗಳು ಯುವತಿ ದಾಖಲಾಗಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಈ ಕುರಿತು ಬಜರಂಗದಳ ವಿಭಾಗ ಸಂಚಾಲಕ ಪುನೀತ್ ಅತ್ತಾವರ ಮಾತನಾಡಿ, ಮುಸ್ಲಿಂ ಯುವಕರಿಂದ ಹಿಂದೂ ಹುಡುಗಿಯರ ಮೇಲೆ ದೌರ್ಜನ್ಯ ಆಗುತ್ತಿದೆ. ಲವ್ ಜಿಹಾದ್ ಇದೆ ಎಂದು ನಾವು ಹೇಳಿದರೂ ಯಾರು ನಂಬಿರಲಿಲ್ಲ. ಬಜರಂಗದಳ ಕಾರ್ಯಕರ್ತರು ಇದನ್ನು ತಡೆದರೆ ನೈತಿಕ ಪೊಲೀಸ್ ಗಿರಿ ಎಂದು ಹೇಳುತ್ತಾರೆ. ಯುವತಿಯ ಸ್ಥಿತಿ ಸ್ವಲ್ಪ ಚಿಂತಾಜನಕವಾಗಿದೆ, ಪೊಲೀಸರು ಮೊದಲೇ ಕ್ರಮ ಕೈಗೊಂಡಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದಿದ್ದಾರೆ.

ವ್ಯವಹಾರದ ಕಾರಣಕ್ಕೆ ಯುವತಿಗೆ ಬೆದರಿಕೆ?

ಹಿಂದೂ ಯುವತಿ ಆತ್ಮಹತ್ಯೆ ಯತ್ನ ಪ್ರಕರಣದ ಹಿಂದೆ ವ್ಯವಹಾರಿಕ ಕಾರಣವೇ ಎಂಬ ಪ್ರಶ್ನೆ ಪೊಲೀಸರನ್ನು ಕಾಡತೊಡಗಿದೆ. ಮುಸ್ಲಿಂ ವ್ಯಕ್ತಿಗೆ ಸೇರಿದ ಕಟ್ಟಡದಲ್ಲಿ ಆಕೆ ಜನರಲ್ ಸ್ಟೋರ್‌ ನಡೆಸುತ್ತಿದ್ದಳು. ಅದು ಸುರತ್ಕಲ್ ಇಡ್ಯಾದ ಸದಾಶಿವ ನಗರದ ಫಯಾಜ್ ಎಂಬವರಿಗೆ ಸೇರಿದ ಕಟ್ಟಡ. ಶ್ರೀ ಕಟೀಲ್ ಜನರಲ್ ಸ್ಟೋರ್‌ ಹೆಸರಿನ ಅಂಗಡಿ ನಡೆಸುತ್ತಿದ್ದರು. ಅದೇ ಕಟ್ಟಡದಲ್ಲಿ ಮತ್ತೊಂದು ಕೊಠಡಿಯನ್ನೂ ಹೊಟೇಲ್ ಉದ್ದೇಶಕ್ಕೆ ಯುವತಿ ಮೀಸಲಿರಿಸಿದ್ದಳು. ಹೊಟೇಲ್ ನಡೆಸಲು ಕಟ್ಟಡದ ಮಾಲೀಕರಿಗೆ ತಿಳಿಸಿ ಕೊಠಡಿ ಮೀಸಲಿಟ್ಟಿದ್ದಳು.

ಅದರೆ ಸ್ಥಳೀಯ ಕೆಲವರು ಆ ಕೊಠಡಿ ಬಿಟ್ಟು ಕೊಡುವಂತೆ ಕೇಳಿದ್ದರು. ಆದರೆ ಯುವತಿ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ದ್ವೇಷ ಇತ್ತು ಎಂದು ಯುವತಿಯ ಗೆಳತಿ ಈ ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಭರತ್ ಶೆಟ್ಟಿ

ಬೆದರಿಕೆ ಹಾಕಿದ ಯುವಕನ ವಿರುದ್ಧ ಕ್ಷಿಪ್ರ ಕ್ರಮವನ್ನು ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುನ್ನ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ