ಬೆಂಗಳೂರು : ಅಪರೂಪದ ಮತ್ತು ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸುವ ಗಂಧದ ಬಣ್ಣದ (ತಿಳಿ ಕೇಸರಿ) ಚಿರತೆ ರಾಜ್ಯದ ವಿಜಯನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈ ರೀತಿಯ ಚಿರತೆ ಭಾರತದಲ್ಲಿ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ.
ಹೊಳೆಮತ್ತಿ ನೇಚರ್ ಫೌಂಡೇಷನ್‌ನ ವನ್ಯಜೀವಿ ತಜ್ಞ ಡಾ। ಸಂಜಯ್ ಗುಬ್ಬಿ ಮತ್ತವರ ತಂಡ ಚಿರತೆ ಕುರಿತು ರಾಜ್ಯಾದ್ಯಂತ ಸಂಶೋಧನೆ ನಡೆಸುತ್ತಿದ್ದು, ಅದರ ಭಾಗವಾಗಿ ಹಾಕಲಾಗಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಗಂಧದ ಬಣ್ಣದ ಚಿರತೆ ಸೆರೆಸಿಕ್ಕಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ತಿಳಿ ಕೇಸರಿ ಬಣ್ಣದ ಚಿರತೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಚಿರತೆಗಳು ಕಪ್ಪು ಚುಕ್ಕೆಗಳಿರುವ ಹಳದಿ ಮತ್ತು ಕಂದು ಮಿಶ್ರಿತ ಚರ್ಮದ ಬಣ್ಣ ಹೊಂದಿರುತ್ತದೆ. ಆದರೆ, ವಿಜಯನಗರ ಜಿಲ್ಲೆಯಲ್ಲಿ ಪತ್ತೆಯಾಗಿರುವ ಅಪರೂಪದ ಚಿರತೆ ಗಂಧದ ಬಣ್ಣ ಹೋಲುವ ಮಬ್ಬಾದ ಕೇಸರಿ ಬಣ್ಣ ಮಿಶ್ರಿತ ಚರ್ಮ ಮತ್ತು ಚುಕ್ಕೆಗಳನ್ನು ಹೊಂದಿದೆ.
ಚರ್ಮದಲ್ಲಿ ಅತಿಯಾದ ಕೆಂಪು ಬಣ್ಣದ ಉತ್ಪಾದನೆ ಮತ್ತು ಗಾಢ ಬಣ್ಣದ ಕೊರತೆಯಿಂದಾಗಿ ಅಪರೂಪದ ಬಣ್ಣವನ್ನು ಚಿರತೆ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ರೀತಿ ಬಣ್ಣದ ಚಿರತೆಗಳು ದಕ್ಷಿಣ ಅಫ್ರಿಕಾ, ತಾಂಜಾನಿಯಾ ದೇಶಗಳಲ್ಲಿ ಕಾಣಸಿಗುತ್ತದೆ. ಜಾಗತಿಕವಾಗಿ ಈ ಬಣ್ಣದ ಚಿರತೆಯನ್ನು ಸ್ಟ್ರಾಬೆರಿ ಚಿರತೆ ಎಂದು ಕರೆಯಲಾಗುತ್ತದೆ. ಇದೀಗ ರಾಜ್ಯದಲ್ಲಿ ಕಾಣಿಸಿಕೊಂಡಿರುವ ವಿಶೇಷ ಬಣ್ಣದ ಚಿರತೆಗೆ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ಅವರು ‘ಚಂದನ ಚಿರತೆ’ ಎಂದು ಹೆಸರನ್ನಿಟ್ಟಿದ್ದಾರೆ.
ಈ ರೀತಿ ವಿಶೇಷ ಬಣ್ಣದ ಚಿರತೆ ಭಾರತದಲ್ಲಿ ಅತ್ಯಂತ ವಿರಳ. ಈ ಹಿಂದೆ 2021ರ ನವೆಂಬರ್‌ನಲ್ಲಿ ರಾಜಸ್ಥಾನದ ರಣಕಪುರ ಪ್ರದೇಶದಲ್ಲಿ ವಿಶೇಷ ಬಣ್ಣದ ಚಿರತೆ ಕಾಣಿಸಿಕೊಂಡಿತ್ತು. ಇದೀಗ ವಿಜಯನಗರ ಜಿಲ್ಲೆಯಲ್ಲಿ ಆ ರೀತಿಯ ಚಿರತೆ ಕಾಣಿಸಿಕೊಂಡಿದೆ. ವಿಶ್ವದಲ್ಲಿ ಈವರೆಗೂ ಏಳು ಚಂದನ ಬಣ್ಣದ ಚಿರತೆಗಳು ದಾಖಲಾಗಿವೆ. ವಿಜಯನಗರದಲ್ಲಿ ಕಾಣಿಸಿಕೊಂಡಿರುವ ಚಿರತೆಯು 6ರಿಂದ 7 ವರ್ಷದ ಹೆಣ್ಣು ಚಿರತೆಯಾಗಿದೆ.