ಅಪರೂಪದ ಗಡ್ಡೆ ಗೆಣಸು, ಭರ್ಜರಿ ಮಾರಾಟ

KannadaprabhaNewsNetwork |  
Published : Jan 04, 2024, 01:45 AM IST
4 | Kannada Prabha

ಸಾರಾಂಶ

ಬುಡಕಟ್ಟು ಸಮಾಜಕ್ಕೆ ಸೇರಿದ ಕುಣಬಿ ಮಹಿಳೆಯರು ತಾವು ಬೆಳೆದ ಗಡ್ಡೆ ಗೆಣಸುಗಳನ್ನು ಜೋಪಾನವಾಗಿ ತಂದು ಭರ್ಜರಿ ಮಾರಾಟವನ್ನೂ ಮಾಡಿದರು. ಜೋಯಿಡಾದ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಗಡ್ಡೆ ಗೆಣಸು ಬೆಳೆಯುತ್ತಾರೆ.

ಕಾರವಾರ:

ಕೆಸುವಿನ ಗಡ್ಡೆ, ಸುವರ್ಣ ಗಡ್ಡೆ, ನಾಗರ ಹಾವಿನ ಆಕಾರದ ಗಡ್ಡೆ, ಗೆಣಸು...ಹಲವರು ಕಂಡು ಕೇಳರಿಯದ ಗಡ್ಡೆ ಗೆಣಸುಗಳು ಜೋಯಿಡಾ ಕುಣಬಿ ಸಮುದಾಯ ಭವನದ ಆವರಣದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಬಂದಿದ್ದವು. ಬುಧವಾರ ನಡೆದ 10ನೇ ವರ್ಷದ ಗಡ್ಡೆ ಗೆಣಸು ಮೇಳ ಯಶಸ್ಸು ಕಂಡಿತು.

ಬುಡಕಟ್ಟು ಸಮಾಜಕ್ಕೆ ಸೇರಿದ ಕುಣಬಿ ಮಹಿಳೆಯರು ತಾವು ಬೆಳೆದ ಗಡ್ಡೆ ಗೆಣಸುಗಳನ್ನು ಜೋಪಾನವಾಗಿ ತಂದು ಭರ್ಜರಿ ಮಾರಾಟವನ್ನೂ ಮಾಡಿದರು. ಜೋಯಿಡಾದ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಗಡ್ಡೆ ಗೆಣಸು ಬೆಳೆಯುತ್ತಾರೆ. ವಿಶೇಷವಾಗಿ ಕುಣಬಿ ಸಮುದಾಯದವರೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಜೋಯಿಡಾ ಆಡು ಭಾಷೆಯಾದ ಮರಾಠಿ ಮಿಶ್ರಿತ ಕೊಂಕಣಿಯಲ್ಲಿ ಗಡ್ಡೆಗೆ ಕೋನ್ ಎನ್ನುತ್ತಾರೆ. ಅಳೆಕೋನ್, ಧಯೆಕೋನ್, ನಾಗರಕೋನ್, ದುಕರ್ ಕೋನ್....ಮತ್ತಿತರ ಗಡ್ಡೆಗಳು ಬಂದರೆ, ಕೆಸುವಿಗೆ ಮುಡ್ಲಿ ಎನ್ನುತ್ತಾರೆ. ಪುಲಾ ಮುಡ್ಲಿ, ಕುಣಬಿ ಮುಡ್ಲಿ, ದಾವಾ ಮುಡ್ಲಿ ಹೀಗೆ ಬಗೆ ಬಗೆಯ ಗೆಣಸುಗಳು ಅಲ್ಲಿ ಗ್ರಾಹಕರನ್ನು ಆಕರ್ಷಿಸಿತು.

ಗೋವಾ, ಬೆಳಗಾವಿ, ಹುಬ್ಬಳ್ಳಿ, ಕಾರವಾರ, ದಾಂಡೇಲಿ ಮತ್ತಿತರ ಕಡೆಗಳಿಂದಲೂ ಜನರು ಗಡ್ಡೆ ಗೆಣಸು ಮೇಳ ವೀಕ್ಷಣೆಗೆ ಆಗಮಿಸಿ, ಬಗೆಬಗೆಯ ಗಡ್ಡೆ ಗೆಣಸುಗಳನ್ನು ಖರೀದಿಸಿದರು.

ಈ ಬಾರಿ 200ಕ್ಕೂ ಹೆಚ್ಚು ಜನರು ಗಡ್ಡೆ ಗೆಣಸು ಮಾರಾಟಕ್ಕೆ ತಂದಿದ್ದರು. ಗೋವಾದ ಸ್ಪೀಕರ್ ರಮೇಶ ತಾವಡಕರ ಮೇಳದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಜೋಯಿಡಾದ ಜಯಾನಂದ ಡೇರೇಕರ ಮತ್ತಿತರರು ವ್ಯವಸ್ಥಿತವಾಗಿ ಸಂಘಟಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಯಿತು.

ವರ್ಷದಿಂದ ವರ್ಷಕ್ಕೆ ಗಡ್ಡೆ ಗೆಣಸು ಮೇಳ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಕುಣಬಿ ಸಮಾಜದವರು ಬೆಳೆಯುತ್ತಿರುವ ಗಡ್ಡೆ ಗೆಣಸುಗಳಿಗೆ ಈ ಮೇಳ ಮಾರುಕಟ್ಟೆಯನ್ನೂ ಒದಗಿಸುತ್ತಿದೆ. ಗಡ್ಡೆ ಗೆಣಸುಗಳಿಂದಲೆ ತಯಾರಿಸಿದ ಸ್ವಾದಿಷ್ಟಕರ ಭಕ್ಷ್ಯ, ಭೋಜನ ಗಡ್ಡೆ ಗೆಣಸು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. ಗಡ್ಡೆ ಗೆಣಸಿನ ಚಿಪ್ಸ್, ಚಟ್ನಿ, ಬಜ್ಜಿ, ಚಿರಕೆ ಚಿಲ್ಲಿ, ಸುವರ್ಣಗಡ್ಡೆ ಉಪ್ಪಿನಕಾಯಿ, ದೋಸೆ, ಮುಡ್ಲಿ ಬಜ್ಜಿ, ಹಪ್ಪಳ, ಸಂಡಿಗೆ, ರೊಟ್ಟಿ, ಸಾಂಬಾರ್, ಭಾಜಿ ಎಲ್ಲವನ್ನೂ ಗಡ್ಡೆ ಗೆಣಸುಗಳಿಂದ ತಯಾರಿಸಲಾಗಿತ್ತು. ನೂರಾರು ಜನರು ಅಪರೂಪದ ಊಟ ಸವಿದು ಸಂತಸಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!