ಮಾ. 8ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಲೋಕ ಅದಾಲತ್: ಮಹಾಂತೇಶ್ ಎಸ್. ದರಗದ

KannadaprabhaNewsNetwork | Published : Jan 26, 2025 1:30 AM

ಸಾರಾಂಶ

ಮಾ. 8ರಂದು ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ಕೊಪ್ಪಳ: ಮಾ. 8ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 8ರಂದು ನಡೆಯುವ ಲೋಕ ಅದಾಲತ್ ಕುರಿತು ಮಾಹಿತಿ ನೀಡಿದರು.

ಈ ಲೋಕ ಅದಾಲತನಲ್ಲಿ ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇದರಿಂದ ಸಮಯ, ಹಣ ಉಳಿತಾಯದ ಜತೆಗೆ ಸರಿಯಾಗಿ ಜೀವನ ನಡೆಸುವಂತಾಗುತ್ತದೆ. ಕಳೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ವಿಶೇಷ ಮುತುವರ್ಜಿಯಿಂದ 5340 ಪ್ರಕರಣಗಳನ್ನು ಜಿಲ್ಲೆಯಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಾದ್ಯಂತ 32 ಸಾವಿರಕ್ಕಿಂತಲೂ ಹೆಚ್ಚು ಕೇಸ್‌ಗಳು ಬಾಕಿ ಇವೆ. ಈ ಲೋಕ ಅದಾಲತ್‌ನಲ್ಲಿ ಈ ಬಾರಿ 6ರಿಂದ 7 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಸುಳ್ಳು ಪ್ರಕರಣಗಳನ್ನು ಹೊರತುಪಡಿಸಿ ಬ್ಯಾಂಕ್ ಸಾಲ, ಪಾರ್ಟಿಷನ್ ಸೂಟ್‌, ಪ್ರಿ ಲಿಟಿಗೇಶನ್ ಕೇಸ್‌, ಕೌಟುಂಬಿಕ ಕಲಹ ಇತರ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.

ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಇಬ್ಬರ ನಡುವಿನ ಸಂಬಂಧ ಚೆನ್ನಾಗಿ ಇರುತ್ತದೆ. ಇಲ್ಲವಾದರೆ ಅದು ಮುಂದೆ ಅವರ ಸಂಬಂಧ ಹಳಸಲು ಕಾರಣವಾಗುತ್ತದೆ. ಅಂತಹ ಕೆಟ್ಟ ವಾತಾವರಣ ನಿರ್ಮಾಣ ಆಗಬಾರದು ಎಂಬ ಉದ್ದೇಶದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಲೋಕ ಅದಾಲತ್‌ ನಡೆಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ ಜಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಂ.ಡಿ. ಹನೀಫ್, ಶಿಲ್ಪಾ, ಎಂ.ಡಿ. ಇಸ್ಮಾಯಿಲ್ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

Share this article