ಆಂಜನೇಯನದ್ದು ಶೀಲದಿಂದ ಕೂಡಿದ ಶೌರ್ಯ: ಸು. ರಾಮಣ್ಣ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಪುತ್ತೂರಿನಲ್ಲಿ ಹಿಂದೂ ಶೌರ್ಯ ಸಂಗಮ
ಕನ್ನಡಪ್ರಭವಾರ್ತೆ ಪುತ್ತೂರು ಆಂಜನೇಯನದ್ದು ಶೀಲದಿಂದ ಕೂಡಿದ ಶೌರ್ಯವಾಗಿದೆ. ಶೀಲವಿಲ್ಲದ ಶೌರ್ಯ ವಿನಾಶಕಾರಿಯಾಗಿದೆ. ಶ್ರೀರಾಮನ ಕಾರ್ಯವೆಂದರೆ ವ್ಯಕ್ತಿ ಪೂಜೆಯಲ್ಲ ಅದೊಂದು ರಾಷ್ಟ್ರೀಯ ರಾಜಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ಕಳೆದ 60 ವರ್ಷಗಳಿಂದ ದೇಶದ ತರುಣರನ್ನು ಶೀಲದಿಂದ ಕೂಡಿದ ಶೌರ್ಯವಂತರನ್ನಾಗಿ ರೂಪಿಸಲು ಜಾಂಬವಂತನಂತೆ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ್ ಸು.ರಾಮಣ್ಣ ಹೇಳಿದರು. ಅವರು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಶನಿವಾರ ಸಂಜೆ ನಡೆದ `ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. 60ನೇ ವರ್ಷಕ್ಕೆ ಅರುಳು ಮರುಳು ಎನ್ನುತ್ತಾರೆ. ಆದರೆ ವಿಶ್ವ ಹಿಂದೂ ಪರಿಷತ್ ತನ್ನ 60ನೇ ವರ್ಷಕ್ಕೆ ಮರಳಿ ಅರಳುತ್ತಿದೆ. 100 ವರ್ಷವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವಹಿಂದೂ ಪರಿಷತ್ ನಿರಂತರ ಮರಳಿ ಅರಳುತ್ತಿದೆ. ನಮ್ಮ ವಿಶ್ವಾಸ, ನಂಬಿಕೆ ಮತ್ತು ಮನಸ್ಸಿಗೆ ಎಂದೂ ಮುಪ್ಪು ಬರಬಾರದು ಎಂದರು. ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು .ಪೂವಪ್ಪ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ. ಹಿಂದೂ ಶೌರ್ಯ ಸಂಗಮದ ಅಧ್ಯಕ್ಷ ಕಿಶೋರ್ ಬೊಟ್ಯಾಡಿ ಮಾತನಾಡಿದರು. ವಿಶಾಕ್ ಶಶಿಹಿತ್ಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು. ನಗರದಲ್ಲಿ ಶೌರ್ಯ ಜಾಗರಣಾ ರಥ ಯಾತ್ರೆ: ಶೌರ್ಯ ಜಾಗರಣಾ ರಥ ಯಾತ್ರೆ ಶನಿವಾರ ಸಂಜೆ 5 ಗಂಟೆಯ ವೇಳೆಗೆ ಪುತ್ತೂರು ನಗರದ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಗೆ ತಲುಪಿತು. ಅಲ್ಲಿ ರಥಯಾತ್ರೆಗೆ ಮಹಿಳೆಯರು ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಅಲ್ಲಿಂದ ಪಾದಯಾತ್ರೆಯ ಮೂಲಕ ಪುತ್ತೂರಿನ ಕಿಲ್ಲೆ ಮೈದಾನ ತನಕ ರಥಯಾತ್ರೆ ನಡೆಯಿತು. ರಥಯಾತ್ರೆಯಲ್ಲಿ ಚೆಂಡೆಮೇಳ,ಶಂಖನಾದ,ವೀರ ಪರಾಕ್ರಮಿಗಳ ಫೋಟೋ ಕಟೌಟ್‌ಗಳನ್ನು ಹೊತ್ತ ಸಾಗಿದ ವಾಹನಗಳು, ರಾರಾಜಿಸುತ್ತಿದ್ದ ಭಗವಧ್ವಜಗಳು ಶೌರ್ಯ ಜಾಗರಣಾ ರಥಯಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು. ರಥಯಾತ್ರೆಯಲ್ಲಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಸಂಜೀವ ಮಠಂದೂರು, ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತ ಸಮಿತಿಯ ಅಧ್ಯಕ್ಷ ಕಿಶೋರ್ ಬೊಟ್ಯಾಡಿ, ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಸಂಚಾಲಕ ಕೃಷ್ಣಪ್ರಸಾದ್ ಬೆಟ್ಟ, ಸಹಸಂಚಾಲಕ ಶ್ರೀಧರ್ ತೆಂಕಿಲ, ಬಜರಂಗದಳದ ಪುನೀತ್ ಅತ್ತಾವರ, ರವೀಶ್ ಪಡುಮಲೆ ಮತ್ತಿತರರು ಉಪಸ್ಥಿತರಿದ್ದರು.

Share this article