ರಾಯರ ಮಠದಿಂದ ರಕ್ಷಣಾ ನಿಧಿಗೆ ₹25 ಲಕ್ಷ ಘೋಷಣೆ

KannadaprabhaNewsNetwork | Published : May 13, 2025 1:15 AM
Follow Us

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ 13 ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಶ್ರೀಗಳಿಗೆ ಶಿಷ್ಯರು ಹಾಗೂ ಭಕ್ತರು ತುಲಾಭಾರ ಸೇವೆಗೈದು ಗುರುವಂದನೆಯನ್ನು ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರುಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಭಾರತ ದೇಶದ ರಕ್ಷಣಾ ನಿಧಿಗೆ 25 ಲಕ್ಷ ರು. ನೀಡುವುದಾಗಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಘೋಷಣೆ ಮಾಡಿದರು.ಸುಕ್ಷೇತ್ರದ ಶ್ರೀಮಠದ ಪ್ರಾಂಗಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ತಮ್ಮ 13 ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ಶಿಷ್ಯವೃಂದ ಗುರುವಂದನೆ ಹಾಗೂ ತುಲಾಭಾರ ಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ದೇಶದಲ್ಲಿ ಅಶಾಂತಿ ಉಂಟಾಗಿದೆ, ಯುದ್ಧದ ಸನ್ನಿವೇಶವನ್ನು ಎದುರಿಸುತ್ತಿದೆ. ತಾತ್ಕಾಲಿಕವಾಗಿ ವಿರಾಮ ದೊರಕಿದೆ. ಇಂತಹ ಸಮಯದಲ್ಲಿ ಸಂಭ್ರಮದಿಂದ ಪಟ್ಟಾಭಿಷೇಕ ಮಹೋತ್ಸವವನ್ನು ವೈಭವವಾಗಿ ಆಚರಿಸಿಕೊಳ್ಳುವುದು ಸರಿಯಲ್ಲ, ಭಕ್ತರಿಗೆ ನಿರಾಸೆಯಾಗಬಾರದು ಎನ್ನುವುದಕ್ಕಾಗಿಯೇ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳಂತೆ ಸರಳವಾಗಿ ಆಚರಿಸಿಕೊಳ್ಳಲಾಗಿದೆ.ರಾತ್ರಿ ಹಗಲು, ಮಳೆ-ಬಿಸಿಲು, ಪ್ರಾಣವನ್ನು ಲೆಕ್ಕಿಸದೇ ದೇಶದ ರಕ್ಷಣೆಗಾಗಿ ನಮ್ಮೆಲ್ಲ ಯೋಧರು ಶ್ರಮಿಸುತ್ತಿದ್ದಾರೆ. ದಾಳಿಯಲ್ಲಿ ಹಲವಾರು ವೀರಯೋದರು ಪ್ರಾಣ ಕಳೆದುಕೊಂಡಿದ್ದಾರೆ. ಪೆಹಲ್ಗಾಂ ದಾಳಿಯಲ್ಲಿ ಸಾವನಪ್ಪಿದ್ದಾರೆ ಅವರೆಲ್ಲರಿಗೂ ಸದ್ಗತಿ ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ದೇಶದ ರಕ್ಷಣೆ, ಸುಭದ್ರತೆಗೋಸ್ಕರವಾಗಿ ನಮ್ಮ ಭಾರತ ಸರ್ಕಾರ, ಪ್ರಧಾನ ನರೇಂದ್ರ ಮೋದಿ, ರಕ್ಷಣಾ ಇಲಾಖೆ ಹಾಗೂ ಇತರೆ ಮಂತ್ರಿಗಳು ಎಲ್ಲರೂ ಜಾಗೃತರಾಗಿ ಮತ್ತು ವಿವೇಚನಾ ಪೂರ್ವಕವಾಗಿ ದೇಶದ ಸಮಗ್ರತೆಗೆ, ರಕ್ಷಣೆ ಹಾಗೂ ಭದ್ರತೆಗೆ ಏನೆಲ್ಲಾ ಕಾರ್ಯಚರಣೆಗಳನ್ನು ಮಾಡುತ್ತಿದ್ದಾರೆ ಅವರೆಲ್ಲರನ್ನು ಅಭಿನಂದಿಸುವುದಾಗಿ ಸ್ವಾಮಿಗಳು ತಿಳಿಸಿದರು.

--

ಸೈನಿಕರ, ಪ್ರಜೆಗಳ ಯೋಗಕ್ಷೇಮಕ್ಕೆ ಮಂತ್ರಾಲಯದಲ್ಲಿ ಪೂಜೆ, ಹೋಮಕನ್ನಡಪ್ರಭ ವಾರ್ತೆ ರಾಯಚೂರು

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ 13ನೇ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವವು ಹಲವು ಸಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿವಿಧಾನಗಳಿಂದ ಹೆಚ್ಚಿನ ಆಡಂಭರವಿಲ್ಲದೇ ಸೋಮವಾರ ನೆರವೇರಿಸಲಾಯಿತು.ರಾಷ್ಟ್ರದಲ್ಲಿ ನಿರ್ಮಾಣಗೊಂಡಿರುವ ಯುದ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಾಭಿಷೇಕ ಮಹೋತ್ಸವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಮಹೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮಠ ದಲ್ಲಿ ಬ್ರಹ್ಮಕರಾಚಿತ ಶ್ರೀಮೂಲ ರಾಮದೇವರಿಗೆ ತದನಂತರ ಶ್ರೀಷಡೋಶಬಾಹು ನರಸಿಂಹ ದೇವರರಿಗೆ ಭಕ್ತಿಯಿಂದ ವಿಶೇಷ ಪೂಜೆಯನ್ನು ನೆರವೇರಿಸಿದರು.ಇದೇ ವೇಳೆ ದೇಶದಲ್ಲಿ ಉಂಟಾಗಿರುವ ಸಮರ ಸನ್ನಿವೇಶ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರು ಹಾಗೂ ಪ್ರಜೆಗಳ ರಕ್ಷಣೆ ಮತ್ತು ಯೋಗ ಕ್ಷೇಮ ಹಾಗೂ ಆಶೀರ್ವಾದ ಕೋರಿ ಶ್ರೀಮಠದಲ್ಲಿ ವಿಶೇಷ ಪೂಜೆ, ವಿವಿಧ ಹೋಮ ಹವನಗಳನ್ನು ಆಚರಿಸಲಾಯಿತು. ಶ್ರೀಮಠದ ಆವರಣದಲ್ಲಿರುವ ಯಜ್ಞ ಶಾಲಾ ಮಂಟಪದಲ್ಲಿ ಶ್ರೀಗಳ ನೇತೃತ್ವದಲ್ಲಿ ಮೃತ್ಯುಂಜಯ, ಆಯುಷ್ಯ, ಮಾರ್ಕಂಡೇಯ ಮತ್ತು ಇತರ ವಿಶೇಷ ಹೋಮ ಪೂರ್ಣಾಹುತಿಗಳನ್ನು ನಡೆಸಲಾಯಿತು.

ಇದೇ ವೇಳೆ ಶ್ರೀಮಠಕ್ಕೆ ಭೇಟಿ ನೀಡಿದ್ದ ಚಿತ್ರನಟ ಮತ್ತು ನಿರ್ದೇಶಕ ಉಪೇಂದ್ರ, ನಟಿ ತಾರಾ ಅವರ ಕುಟುಂಬಸ್ಥರು ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದ ದರ್ಶನ ಪಡೆದರು. ನಂತರ ಅವರನ್ನು ಶ್ರೀಗಳು ಸನ್ಮಾನಿಸಿ ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.