ಪ್ರಾಧಿಕಾರ ರಚನೆಗೆ ರಜಾಕ್‌ ಉಸ್ತಾದ ಒತ್ತಾಯ

KannadaprabhaNewsNetwork | Published : Jul 5, 2024 12:48 AM

ಸಾರಾಂಶ

ಶಿಕ್ಷಣ, ಅಭಿವೃದ್ಧಿ ಮತ್ತು ಉದ್ಯೋಗ ಮೀಸಲಾತಿಗೆ ನಡೆಯುತ್ತಿರುವ ಷಡ್ಯಂತ್ರಗಳನ್ನು ತಡೆಯಲು ನಮಗೆ ಹೋರಾಟಕ್ಕಿಳಿಯಲು ಈಗ ಕಾಲಪಕ್ವಗೊಂಡಿದೆ

ಕನ್ನಡಪ್ರಭ ವಾರ್ತೆ ಕಾರಟಗಿ

ಬಿಸಿಲು ಮತ್ತು ಬರ ಎದುರಿಸಿದ ಹೈ-ಕ ಭಾಗಕ್ಕೆ ಹೋರಾಟಗಳೇನೂ ಹೊಸದಲ್ಲ, ಶಿಕ್ಷಣ, ಅಭಿವೃದ್ಧಿ ಮತ್ತು ಉದ್ಯೋಗ ಮೀಸಲಾತಿಗೆ ನಡೆಯುತ್ತಿರುವ ಷಡ್ಯಂತ್ರಗಳನ್ನು ತಡೆಯಲು ನಮಗೆ ಹೋರಾಟಕ್ಕಿಳಿಯಲು ಈಗ ಕಾಲಪಕ್ವಗೊಂಡಿದೆ ಎಂದು ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ೩೭೧ಜೆ ಸಮರ್ಪಕ ಅನುಷ್ಠಾನಕ್ಕಾಗಿ ಒತ್ತಾಯಿಸಿ ಕರೆ ನೀಡಿದ್ದ ಕಾರಟಗಿ ಬಂದ್ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

೩೭೧ಜೆ ಜಾರಿಯಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದರೆ, ಸಮರ್ಪಕವಾಗಿ ಅನುಷ್ಠಾನವಾಗದೆ ಸಮಸ್ಯೆ ಉಂಟಾಗುತ್ತಿವೆ. ಹೀಗಾಗಿ ಪ್ರಾಧಿಕಾರ ಅಥವಾ ಸಮಿತಿ ರಚನೆಯಾದಾಗ ಮಾತ್ರ ನಮಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.

೩೭೧ಜೆ ಕಲಂ ಸೌಲಭ್ಯವಿದ್ದರೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಕೂಡಲೇ ಸರ್ಕಾರ ೩೭೧ಜೆ ಕಲಂಗೆ ಪ್ರಾಧಿಕಾರ ಅಥವಾ ಸಮಿತಿ ರಚನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕ-ಕ ಹೋರಾಟ ಸಮಿತಿ ಸಂಚಾಲಕ ಈ. ಧನ್‌ರಾಜ ಹಾಗೂ ಪ್ರೊ. ಸಿದ್ದು ಯಾಪಲಪರ್ವಿ ಮಾತನಾಡಿದರು.

ಕ-ಕರ್ನಾಟಕ ಭಾಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಹಸಿರು ಪ್ರತಿಷ್ಠಾನ ಸಂಘಟನೆ ನಿಷೇಧಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಕಾರಟಗಿ

ಕ-ಕ ಭಾಗದ ೩೭೧(ಜೆ)ಯ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದು, ಪ್ರತಿಭಟನೆ ಮಾಡುತ್ತ ಈ ಭಾಗದ ಅಭಿವೃದ್ಧಿಗೆ ವಿರುದ್ಧವಾಗಿರುವ ಬೆಂಗಳೂರಿನ ಹಸಿರು ಪ್ರತಿಷ್ಠಾನವನ್ನು ನಿಷೇಧಿಸಬೇಕೆಂದು ಸ್ಥಳೀಯ ಹೋರಾಟಗಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ೩೭೧(ಜೆ) ಅಡಿಯಲ್ಲಿ ಸಿಗುವ ಅವಕಾಶ ತಪ್ಪಿಸಲು ಯತ್ನ ಮಾಡುತ್ತಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರ ಮತ್ತು ವಿಜಯನಗರ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಮತ್ತು ನ್ಯಾಯಾಲಯಗಳಲ್ಲಿ ವಿನಾಕಾರಣ ಅರ್ಜಿ ಸಲ್ಲಿಸಿ ನಮಗೆ ಸಿಗುವ ಹಕ್ಕಿನಿಂದ ವಂಚಿತರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದು, ಇದು ನಮ್ಮ ಭಾಗದ ಜನರಿಗೆ ಮಾರಕವಾಗುತ್ತಿದೆ.

ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನ ಅನುಚ್ಛೇದ ೩೭೧(ಜೆ) ಅನ್ವಯ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಅನಾವಶ್ಯಕ ತೊಂದರೆ ಮತ್ತು ಗೊಂದಲವನ್ನುಂಟು ಮಾಡಲಾಗುತ್ತಿದೆ. ಈ ಗೊಂದಲ ನಿವಾರಿಸಲು ಕೂಡಲೇ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಯಿತು.ಬೇಡಿಕೆಗಳು1. ೩೭೧(ಜೆ) ಅನುಷ್ಠಾನಕ್ಕಾಗಿ ಸ್ವತಂತ್ರವಾಗಿ ಒಂದು ಸಮಿತಿ ರಚಿಸಿ, ಸೂಕ್ತ ಅಧಿಕಾರ ನೀಡಬೇಕು.

2. ಪ್ರತ್ಯೇಕ ಆಡಳಿತಾತ್ಮಕ ನ್ಯಾಯ ಮಂಡಳಿ ರಚಿಸಿ ಕಲಬುರಗಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಬೇಕು.3. ಈ ಭಾಗಕ್ಕೆ ಶೇ.೨೦ ಮೀಸಲಾತಿ ನೀಡುವುದು ನ್ಯಾಯಬದ್ಧವಾಗಿದೆ.

4. ಈ ಭಾಗದ ಅಸಮತೋಲನ ನಿವಾರಣೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ೩೭೧ಜೆ ಯು ಸಹ ಮೀಸಲಾತಿಯೆಂದು ರಾಜ್ಯ ಸರ್ಕಾರ ಎಲ್ಲ ನೇಮಕಾತಿಗಳಲ್ಲಿ ಪರಿಗಣಿಸಬೇಕು.5. ೩೭೧ಜೆ ಆರ್ಹತಾ ಪ್ರಮಾಣ ಪತ್ರ ನೀಡುವಲ್ಲಿ ಸಾಕಷ್ಟು ದುರುಪಯೋಗ ಕಂಡುಬರುತ್ತಿದ್ದು, ಕ.ಕ. ಪ್ರದೇಶವಲ್ಲದ ಅಭ್ಯರ್ಥಿಗಳು ಪ್ರಮಾಣ ಪತ್ರ ಪಡೆಯುತ್ತಿದ್ದು, ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಿಯಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

6. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳನ್ನು ನೇಮಕ ಮಾಡಬೇಕು.7. ಕಲ್ಯಾಣ ಕರ್ನಾಟಕದ ಭಾಗಕ್ಕೆ ಸರಕಾರದಿಂದ ಬೋರ್ಡನ ಅಡಿಯಲ್ಲಿ ಲೀಗಲ್ ಸೆಲ್ ಸ್ಥಾಪನೆಯಾಗಬೇಕು.

8. ಸಾರ್ವಜನಿಕರಲ್ಲಿ ೩೭೧ಜೆ ಕುರಿತು ತಪ್ಪು ಮಾಹಿತಿ ಪ್ರಚಾರ ಮಾಡಿ ಗೊಂದಲ ಉಂಟು ಮಾಡುತ್ತಿರುವ ಸಂವಿಧಾನ ವಿರೋಧಿ ಹಸಿರು ಪ್ರತಿಷ್ಠಾನ ಸಂಘಟನೆಯನ್ನು ನಿಷೇಧಿಸಬೇಕು.

Share this article