ಆರ್‌ಸಿಬಿ ಚಾಂಪಿಯನ್‌: ಹೊಸಪೇಟೆಯಲ್ಲಿ ಸಂಭ್ರಮಾಚರಣೆ

KannadaprabhaNewsNetwork |  
Published : Jun 05, 2025, 01:06 AM IST
4ಎಚ್‌ಪಿಟಿ1-ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್‌ ತಂಡ ಐಪಿಎಲ್‌ ಪಂದ್ಯಾವಳಿ ಫೈನಲ್ ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಂದ್ಯ ಮುಗಿಯುತ್ತಿದ್ದಂತೆಯೇ ಮಂಗಳವಾರ ತಡರಾತ್ರಿ ನಗರದ ಡಾ. ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಜಮಾಯಿಸಿದ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದರು. | Kannada Prabha

ಸಾರಾಂಶ

ನಗರದ ಡಾ. ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಜಮಾಯಿಸಿದ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ವಿರಾಟ್‌ ಕೊಹ್ಲಿ ಪರ ಮೊಳಗಿದ ಜಯಘೋಷ/ ಪಟಾಕಿ ಸಿಡಿಸಿ ಸಂಭ್ರಮಿಸಿದ ಕ್ರಿಕೆಟ್‌ ಅಭಿಮಾನಿಗಳುಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್‌ ಪಂದ್ಯಾವಳಿ ಫೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ಪಂದ್ಯ ಮುಗಿಯುತ್ತಿದ್ದಂತೆಯೇ ಮಂಗಳವಾರ ತಡರಾತ್ರಿ ನಗರದ ಡಾ. ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಜಮಾಯಿಸಿದ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಎಲ್ಲೆಡೆ ಸಂಭ್ರಮ:

ಆರ್‌ಸಿಬಿ ತಂಡ ಗೆಲುವು ಪಡೆದ ಹಿನ್ನೆಲೆ ವಿಜಯನಗರ ಜಿಲ್ಲೆಯಾದ್ಯಂತ ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸಿದರು. ನಗರ ಸೇರಿದಂತೆ ಜಿಲ್ಲೆಯ ನಗರಗಳು, ಪಟ್ಟಣ, ಹೋಬಳಿ, ತಾಂಡಾ, ಕ್ಯಾಂಪ್‌ಗಳಲ್ಲೂ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ಗಲ್ಲಿ, ಗಲ್ಲಿಗಳಲ್ಲಿ ಆರ್‌ಸಿಬಿ ತಂಡದ ಪೋಸ್ಟರ್‌ಗಳನ್ನು ಅಂಟಿಸಿ ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸಿದರು.

ನಗರದ ಸವೆನ್‌ ಕ್ರಿಕೆಟ್‌ ಅಕಾಡೆಮಿಯ ಹುಡುಗರು ಹಾಗು ಕೋಚ್‌ ಗಳು ಮತ್ತು ಈ ಅಕಾಡೆಮಿ ಮಾಲೀಕರು ಕೂಡ ಈ ಬಾರಿ ಆರ್‌ಸಿಬಿ ತಂಡ ಜಯಶಾಲಿ ಆಗಲಿ ಎಂದು ಬಯಸಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೇರಿದ ಬೆನ್ನಲೇ ತಂಡ ಮಾಜಿ ಆಟಗಾರ ಎಡಿಬಿ ವಿಲಿಯರ್ಸ್‌ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ಪಂದ್ಯ ವೀಕ್ಷಣೆ ಮಾಡಿದರು. ಅವರು ಪಂದ್ಯ ವೀಕ್ಷಣೆಗೆ ಆಗಮಿಸಿದ್ದು, ಆರ್‌ಸಿಬಿ ಪಾಳಯಕ್ಕೆ ಬೂಸ್ಟ್‌ ನೀಡಿತು. ವಿರಾಟ್‌ ಕೊಹ್ಲಿ ನೆಚ್ಚಿನ ಗೆಳೆಯ ಎಡಿಬಿ ಬಂದಿರುವ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಮನೋಬಲ ಹೆಚ್ಚಿಸಿತು. ಇದನ್ನು ಸ್ವತಃ ಅವರು ಫೀಲ್ಡಿಂಗ್‌ ಮಾಡುತ್ತಿದ್ದಾಗ ನಾನು, ಎಡಿಬಿ ವಿಲಿಯರ್ಸ್‌ ಭಾವನೆಗಳನ್ನು ಗಮನಿಸಿದೆ. ನನ್ನ ಮುಖದ ಭಾವವನ್ನು ಅವರು ಅವಲೋಕಿಸಿದರು ಎಂದು ಪಂದ್ಯದ ಬಳಿಕ ಹೇಳಿಕೆ ನೀಡಿದರು. 18 ವರ್ಷದ ಜರ್ನಿಯ ಶ್ರಮವನ್ನು ತಡೆಯಲು ಆಗದೇ ಭಾವುಕನಾದೇ ಎಂದು ವಿರಾಟ್‌ ಕೊಹ್ಲಿ ಹೇಳಿದ್ದರಲ್ಲಿ ತಪ್ಪಿಲ್ಲ, 19 ವರ್ಷದೊಳಗಿನ ಕ್ರಿಕೆಟ್‌ ತಂಡದ ನಾಯಕರಾಗಿ ಕಪ್‌ ಗೆಲ್ಲಿಸಿದ್ದ ವಿರಾಟ್‌ ಕೊಹ್ಲಿ ಅವರನ್ನು ಆರ್‌ಸಿಬಿ ತಂಡ ಸೇರ್ಪಡೆ ಮಾಡಿಕೊಂಡಿತ್ತು. ಹುಡುಗನಾಗಿದ್ದ ಕೊಹ್ಲಿ, ವಿರಾಟ್‌ ದರ್ಶನ ತೋರಿಸಿ, ಆರ್‌ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಅವರ ಮುಡಿಗೆ ಕ್ರಿಕೆಟ್‌ನ ಎಲ್ಲಾ ಮಾದರಿಯ ಟ್ರೋಫಿಗಳು ಸೇರಿವೆ. ವಿರಾಟ್‌ ಕೊಹ್ಲಿಯೇ ಹೇಳಿದಂತೆ ಈಗ "ನಾನು ಮಗುವಿನಂತೇ ನಿದ್ದೆಗೆ ಜಾರುವೆ ". ಇದರರ್ಥ ಅವರು ಈಗ ಒತ್ತಡದ ಭಾರದಿಂದ ಮುಕ್ತರಾಗಿದ್ದಾರೆ. ಅವರಲ್ಲಿ ಇನ್ನಷ್ಟು ಕ್ರಿಕೆಟ್‌ ಆಡುವ ಕಸುವು ಇದೆ. ಅದನ್ನು ಬಿಸಿಸಿಐ ಬಳಸಿಕೊಂಡು ಅವರಿಗೆ ಗೌರವ ಸಮ್ಮಾನದೊಂದಿಗೆ ನಡೆಸಿಕೊಳ್ಳಲಿ ಎಂದು ಕ್ರಿಕೆಟ್‌ ಅಭಿಮಾನಿಗಳು ಕೂಡ ಕೋರಿದರು. ಕೊಹ್ಲಿ, ಕೊಹ್ಲಿ ಎಂಬ ಜಯಘೋಷ ಎಲ್ಲೆಡೆ ಮೊಳಗಿತು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್‌ ಕೊಹ್ಲಿ ಆರ್‌ಸಿಬಿ ಜೊತೆಗೆ ಇರಲಿ ಎಂಬ ಆಶಯವನ್ನೂ ಕ್ರಿಕೆಟ್‌ ಅಭಿಮಾನಿಗಳು ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ