ಸಿಎಟಿ ಅಭಿಪ್ರಾಯ ವಿರುದ್ಧ ಆರ್‌ಸಿಬಿ ಹೈಕೋರ್ಟ್‌ಗೆ

KannadaprabhaNewsNetwork |  
Published : Jul 09, 2025, 12:18 AM ISTUpdated : Jul 09, 2025, 10:34 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಪರ ನೀಡಿದ ತೀರ್ಪಿನಲ್ಲಿ ತನ್ನ ವಿರುದ್ಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪ್ರಶ್ನಿಸಿ ರಾಯಲ್‌ ಚಾಂಲೆರ್ಸ್‌ ಬೆಂಗಳೂರು (ಆರ್‌ಸಿಬಿ) ಹೈಕೋರ್ಟ್‌ ಮೆಟ್ಟಿಲೇರಿದೆ.

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣ ಮುಂದೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ಪರ ನೀಡಿದ ತೀರ್ಪಿನಲ್ಲಿ ತನ್ನ ವಿರುದ್ಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪ್ರಶ್ನಿಸಿ ರಾಯಲ್‌ ಚಾಂಲೆರ್ಸ್‌ ಬೆಂಗಳೂರು (ಆರ್‌ಸಿಬಿ) ಹೈಕೋರ್ಟ್‌ ಮೆಟ್ಟಿಲೇರಿದೆ.

ಈ ಕುರಿತು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿರುವ ಆರ್‌ಸಿಬಿ, ‘ಅಮಾನತು ಆದೇಶ ಪ್ರಶ್ನಿಸಿ ವಿಕಾಸ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯಲ್ಲಿ ಆರ್‌ಸಿಬಿ ಪ್ರತಿವಾದಿಯಾಗಿರಲಿಲ್ಲ. ಹೀಗಿದ್ದರೂ ವಾದ ಆಲಿಸದೆ ಸಂಸ್ಥೆ ವಿರುದ್ಧ ಸಿಎಟಿ ಏಕಪಕ್ಷೀಯ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ಸಹಜ ನ್ಯಾಯದ ಉಲ್ಲಂಘನೆ. ಆದ್ದರಿಂದ ತೀರ್ಪಿನಲ್ಲಿ ಸಂಸ್ಥೆ ವಿರುದ್ಧ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ತೆರವುಗೊಳಿಸಲು ಸಿಎಟಿಗೆ ನಿರ್ದೇಶಿಸಬೇಕು’ ಎಂದು ಕೋರಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಮೇಲೆ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರನ್ನು ಸೇವೆಯಿಂದ ಅಮಾನತುಪಡಿಸಿ ಜೂ.5ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಕಾಸ್‌ ಕುಮಾರ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಆದೇಶ ರದ್ದುಪಡಿಸಿದ್ದ ಸಿಎಟಿ, ಪೊಲೀಸರ ಅನುಮತಿಯಿಲ್ಲದೆ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆಗೆ ಆಹ್ವಾನಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು. ಇದು ದೊಡ್ಡ ಸಂಖ್ಯೆಯಲ್ಲಿ ಜನ ಸೇರಲು ಕಾರಣವಾಯಿತು ಮತ್ತು ಪೊಲೀಸರಿಗೆ ಭದ್ರತಾ ಕ್ರಮ ಏರ್ಪಾಟು ಮಾಡಲು ಸಿದ್ಧತೆ ನಡೆಸುವುದಕ್ಕೆ ಸಾಕಷ್ಟು ಸಮಯ ದೊರೆಯಲಿಲ್ಲ. ಹಾಗಾಗಿ, ಘಟನೆ ಸಂಭವಿಸಲು ಆರ್‌ಸಿಬಿಯೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕಪ್‌ ತುಳಿತ: ಹೈಕೋರ್ಟ್‌ ಅನುಮತಿ ಇಲ್ಲದೆ ಅಂತಿಮ ವರದಿ ಸಲ್ಲಿಕೆ ಬೇಡ

ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣ ಕುರಿತು ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ತನಿಖೆಯ ಅಂತಿಮ ವರದಿ ತನ್ನ ಪೂರ್ವಾನುಮತಿ ಪಡೆಯದೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಎಫ್‌ಐಆರ್‌ಗಳ ರದ್ದತಿಗೆ ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ಪೀಠ ಈ ಸೂಚನೆ ನೀಡಿದೆ.

ಇದಕ್ಕೂ ಮುನ್ನ ಅರ್ಜಿದಾರ ಸಂಸ್ಥೆಗಳ ಪರ ವಕೀಲರು, ಸರ್ಕಾರ ತನಿಖೆ ಮುಂದುವರಿಸಬಹುದು. ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ಆದೇಶಿಸಬೇಕು ಎಂದು ಕೋರಿದರು. ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ಯಾವುದೇ ಆದೇಶ ಮಾಡಬಾರದು ಎಂದು ಕೋರಿದರು.ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಅರ್ಜಿಗಳ ಸಂಬಂಧ ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ. ವಿಚಾರಣಾ ಅಂತಿಮ ವರದಿ ಸಲ್ಲಿಸಿರುವುದರಿಂದ ಅರ್ಜಿದಾರರ ಪ್ರಕರಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ತನ್ನ ಅನುಮತಿ ಪಡೆಯದೇ ಪ್ರಕರಣ ಕುರಿತ ತನಿಖೆಯ ಅಂತಿಮ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಬಾರದು ಎಂದು ನಿರ್ದೇಶಿಸಿ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿತು.

ಇದೇ ವೇಳೆ, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಸ್ಥಿತಿಗತಿ ವರದಿಯನ್ನು ನಾಲ್ಕು ದಿನಗಳಲ್ಲಿ ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ಘಟನೆಗೆ ಸಂಬಂಧಿಸಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಜು.16ಕ್ಕೆ ಮುಂದೂಡಿತು.

PREV
Read more Articles on