ಭಟ್ಕಳ: ಪಟ್ಟಣದ ಮಣ್ಕುಳಿಯಲ್ಲಿ ವಾಸ್ತುಶಾಸ್ತ್ರದ ಪ್ರಕಾರ ದ್ರಾವಿಡ ಶೈಲಿಯಂತೆ ಶಿಲ್ಪಕಲೆ ಹೋಲುವ ಶ್ರೀಹನುಮಂತ ಹಾಗೂ ಶ್ರೀಲಕ್ಷ್ಮೀ ನಾರಾಯಣ ದೇವರ ನೂತನ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಮೇ. ೭ರಿಂದ ಮೇ ೧೧ರ ವರೆಗೆ ವಿಜೃಂಭಣೆಯಿಂದ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ ಎಂ.ಶೆಟ್ಟಿ ಹೇಳಿದರು.
ಪುನರ್‌ಪ್ರತಿಷ್ಠಾ ಕಾರ್ಯಕ್ರಮ ಹಾಗೂ ಬ್ರಹ್ಮ ಕಲಶೋತ್ಸವ:
ಮೇ.೭ ಮತ್ತು ೮ ರಂದು ವೇದಮೂರ್ತಿ ಸಾಂಬ ಹಿರೇಗಂಗೆ ಶ್ರೀಕ್ಷೇತ್ರ ಗೋಕರ್ಣ ಇವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಕುಶಲಕರ್ಮಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಮೇ. ೯ರಂದು ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜೀಯ ದಿವ್ಯ ಸಾನ್ನಿಧ್ಯದಲ್ಲಿ ಮಣಕುಳಿ ಕುಬೇರ ಸದೃಶ ಶ್ರೀಹನುಮಂತ ದೇವರ ಹಾಗೂ ಶ್ರೀಲಕ್ಷ್ಮೀ ನಾರಾಯಣ ದೇವರ ಹಾಗೂ ಪರಿವಾರ ದೇವರುಗಳ ಪ್ರಾಣಪ್ರತಿಷ್ಠೆ ನಡೆಯಲಿದೆ. ಬೆಳಗ್ಗೆ ೧೦.೩೦ಕ್ಕೆ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ೨.೩೦ಕ್ಕೆ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಆಗಮನ, ಧೂಳೀ ಪೂಜೆ, ೩ ಗಂಟೆಗೆ ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ದೊರೆಯಲಿದೆ. ಮೇ. ೧೦ರಂದು ಬೆಳಗ್ಗೆ ೧೦.೩೦ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವರು.ಮೇ. ೧೧ರಂದು ಬ್ರಹ್ಮ ಕಲೋಶತ್ಸವ ಕಾರ್ಯಕ್ರಮ ಅಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅಮೃತ ಹಸ್ತದಿಂದ ನಡೆಯಲಿದ್ದು, ಗ್ರಾಮದವರು, ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ದೇವಸ್ಥಾನಗಳ ಆಡಳಿತ ಕಮಿಟಿ ಅಧ್ಯಕ್ಷ ನಾರಾಯಣ ಎಂ.ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಉದಯ ಶೆಟ್ಟಿ, ಸದಸ್ಯರಾದ ಶಂಕರ ಶೆಟ್ಟಿ, ಎಂ.ಆರ್. ಮುರ್ಡೇಶ್ವರ, ಪ್ರಕಾಶ ಶಿರಾಲಿ, ಗಜಾನನ ಶೆಟ್ಟಿ, ಗಜಾನನ ವಿ. ಶೆಟ್ಟಿ ತೆರ್ನಮಕ್ಕಿ, ರಾಮದಾಸ ಶೆಟ್ಟಿ, ಮಂಜುನಾಥ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಮನೋರಮಾ ಮುರ್ಡೇಶ್ವರ, ಕೃಷ್ಣಮೂರ್ತಿ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ರಾಜೇಶ ಶೆಟ್ಟಿ, ಸುದರ್ಶನ ಶೆಟ್ಟಿ,ಜಯರಾಮ ಶೆಟ್ಟಿ ಮುಂತಾದವರಿದ್ದರು.