ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಮಾಜವಾದ ಸೇರಿದಂತೆ ಯಾವುದೇ ಸಿದ್ಧಾಂತ ಅಥವಾ ನಂಬಿಕೆ ಆಯಾ ಕಾಲಘಟ್ಟದಲ್ಲಿ ಪುನರ್ ನಿಷ್ಕರ್ಷೆಗೆ ಒಳಪಡಬೇಕಾದ ಅಗತ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಹಯೋಗದೊಂದಿಗೆ ಮನುಜಮತ ಸಿನಿಯಾನ ಆಯೋಜಿಸಿದ್ದ ಎರಡು ದಿನಗಳ ಕಾಲದ ಸಮಾಜವಾದ ಕೇಂದ್ರಿತ ಶಿವಮೊಗ್ಗ ಸಿನಿಹಬ್ಬ ಕಾರ್ಯಕ್ರಮ ಸಮಾರೋಪದಲ್ಲಿ ಅವರು ಮಾತನಾಡಿದರು.ಮಲೆನಾಡಿನ ಯುವಸಮೂಹಕ್ಕೆ ಸಮಾಜವಾದ ಎಂಬ ಪದ ಕೇವಲ ಕೇಳಿದ ಶಬ್ದಪುಂಜವಾಗಿ ಮಾತ್ರ ಉಳಿದಿದೆ. ಭೂಮಿ ಕೇಂದ್ರಿತವಾಗಿ 60ರಿಂದ 70 ದಶಕದ ಕಾಲಘಟ್ಟದಲ್ಲಿ ನಡೆದ ಹೋರಾಟದಿಂದ ಸಮಾಜವಾದದ ಅರ್ಥ ಅಲ್ಲಿಗೇ ಸೀಮಿತವಾಗಿದೆ. ಆದರೆ, ಬದಲಾದ ಸಂದರ್ಭದಲ್ಲಿ ಅವಕಾಶ ಮತ್ತು ಸಂಪತ್ತಿನ ಹಂಚಿಕೆಯ ಸಮಾಜವಾದ ಹೊರಹೊಮ್ಮಿದೆ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಸಮಾಜವಾದದ ನೆಲೆಯಾದ ಶಿವಮೊಗ್ಗ ಇಂದು ಕೋಮುವಾದದ ನೆಲೆಯಾಗಿ ವಿಜೃಂಭಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.ಚಿಂತಕ ಮುರುಳೀಧರ್, ಚಿಂತಕ ಫಣಿರಾಜ್ ಮಾತನಾಡಿದರು. ಪತ್ರಕರ್ತ, ರಂಗಕರ್ಮಿ, ಸಿನಿಹಬ್ಬದ ಸಂಚಾಲಕ ಹೊನ್ನಾಳಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಜಿ.ಟಿ. ಸತೀಶ್ ವಂದಿಸಿದರು.
- - - ಟಾಪ್ ಕೋಟ್ಅನೇಕ ಸಿನಿಮಾಗಳು ಶ್ರಮಿಕ ವರ್ಗದ ನೋವನ್ನು, ಆ ಕತೆಯನ್ನು ಕಟ್ಟಿಕೊಡುವ ರೀತಿಯನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿವೆ. ಆಯಾ ಕಾಲಘಟ್ಟದ, ಆಯಾ ಪ್ರದೇಶದ ಶ್ರಮಿಕ ವರ್ಗದ ನೋವು, ಸಂಕಷ್ಟ, ಶೋಷಣೆಯನ್ನು ವಿದೇಶಿ ಸಿನಿಮಾಗಳ ನಿರ್ದೇಶಕರು ಅತ್ಯುತ್ತಮ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇವೆಲ್ಲವನ್ನೂ ನಾವು ನೋಡುವ, ವಿಶ್ಲೇಷಿಸುವ, ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು
- ಮುರುಳೀಧರ್, ಚಿಂತಕ- - -
-29ಎಸ್‌ಎಂಜಿಕೆಪಿ01:ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಮನುಜಮತದ ಶಿವಮೊಗ್ಗ ಸಿನಿಹಬ್ಬ ಸಮಾರೋಪದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿದರು.