ಕನ್ನಡಪ್ರಭ ವಾರ್ತೆ ಹರಿಹರ
ದಿನ ಪತ್ರಿಕೆ ಓದುವ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾದ್ಯವೆಂದು ಹಿರಿಯ ವಕೀಲ ಹಾಗೂ ಪತ್ರಕರ್ತ ಟಿ.ಇನಾಯತ್ ಉಲ್ಲಾ ಹೇಳಿದರು.ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಪತ್ರಿಕೋದ್ಯಮ ವಿಷಯದ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಶಾಲಾ ಹಂತದಿಂದಲೆ ಮಕ್ಕಳು ಪ್ರಮುಖ ಪತ್ರಿಕೆ ನಿಯಮಿತವಾಗಿ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರಮುಖವಾಗಿರುವ ದಿನ, ವಾರ, ಮಾಸ ಪತ್ರಿಕೆ ಮನೆಗೆ ತರಿಸಿಕೊಂಡು ಓದಬೇಕು. ಈ ಪತ್ರಿಕೆಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ, ಉತ್ತರಗಳಿರುವ ಅಂಕಣ ಓದುವ ಮೂಲಕ ಫಲಿತಾಂಶ ಉತ್ತಮಗೊಳಿಸಲು ಸಾಧ್ಯವಿದೆ ಎಂದರು.
ಕನ್ನಡ ಹಾಗೂ ಆಂಗ್ಲ ಭಾಷೆ ವ್ಯಾಕರಣ, ಅಕ್ಷರಗಳ ಪರಿಚಯ, ಉಚ್ಚಾರ ಕಲಿಕೆ, ನಮ್ಮೂರು ಹಾಗೂ ಸುತ್ತಲು ನಡೆಯುತ್ತಿರುವ ಘಟನಾವಳಿ, ಬೆಳವಣಿಗೆಗಳನ್ನು ವಿದ್ಯಾರ್ಥಿ ದೆಸೆಯಲ್ಲೆ ತಿಳಿದುಕೊಳ್ಳಬೇಕು. ಮೊಬೈಲ್, ಟಿವಿ ಇತರೆ ಮಾಧ್ಯಮಗಳಿಗಿಂತ ಪತ್ರಿಕೆಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ಸಂಗಾತಿ ಎಂದರು.ದೇಶ ಕಂಡ ಅಪ್ರತಿಮ ವಿಜ್ಞಾನಿ ಹಾಗೂ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು ತಮ್ಮ ಬಾಲ್ಯದಲ್ಲಿ ಮನೆ, ಮನೆಗೆ ಹಂಚಿಕೆ ಮಾಡುವಾಗ ದಿನಪತ್ರಿಕೆ ಓದುತ್ತಾ ತಮ್ಮ ಜ್ಞಾನ ವೃದ್ಧಿಸಿಕೊಂಡರು. ಈ ಉದಾಹರಣೆ ಪತ್ರಿಕೆಗಳ ಮಹತ್ವ ಸಾರುತ್ತದೆ ಎಂದರು. ಸುದ್ದಿ ಸಂಗ್ರಹ, ಮುದ್ರಣ, ಹಂಚಿಕೆ ಸೇರಿ ಪತ್ರಿಕೋದ್ಯಮದ ವಿವಿಧ ವಿಷಯಗಳ ಕುರಿತು ಶಿಬಿರಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದರು.
ಅಧ್ಯಕ್ಷತೆವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಶಾರದೇಶಾನಂದ ಶ್ರೀ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಷ್ಟೆ ಬೆಳವಣಿಗೆಗಳಾಗಿದ್ದರೂ ಕೂಡ ದಿನಪತ್ರಿಕೆಗಳು ಮಾತ್ರ ಹೆಚ್ಚಿನ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿವೆ. ರಾಜಕೀಯ, ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಕ್ರೀಡೆ, ಮನೋರಂಜನೆ, ವ್ಯಾಪಾರ, ಕೃಷಿ ಹೀಗೆ ಕುಟುಂಬದ ಎಲ್ಲಾ ಸದಸ್ಯರಿಗೂ ಅಗತ್ಯ ಮಾಹಿತಿ ಪತ್ರಿಕೆ ಮೂಲಕ ಪಡೆಯಲು ಸಾಧ್ಯವಿದೆ ಎಂದರು.ಎಂಕೆಇಟಿ ಪ್ರೌಢಶಾಲೆ ಪ್ರಾಚಾರ್ಯ ಮಂಜುನಾಥ ಕುಲಕರ್ಣಿ ಮಾತನಾಡಿದರು.