ಸವಣೂರು: ಸರ್ಕಾರಿ ನೌಕರರ ಹಿತಕ್ಕಾಗಿ ಯಾವುದೇ ಹೋರಾಟ, ತ್ಯಾಗಕ್ಕೂ ಸಿದ್ಧ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಮಹಿಳೆಯರಿಗೆ ಕಚೇರಿಗಳಲ್ಲಿ ಅಗತ್ಯವಿರುವ ಸೌಲಭ್ಯಗಳ ಕೊರತೆಯಿರುವುದು ತಿಳಿದಿದೆ. ಸರ್ಕಾರಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಸಂಘದ ಶಕ್ತಿ ಅಗಾಧವಾಗಿದೆ. ಹೋರಾಟಗಳು ಇನ್ನೂ ಸಾಕಷ್ಟು ಮಾಡಬೇಕಾಗಿದೆ. ಅದಕ್ಕಾಗಿ ಸರ್ಕಾರ ಯಾವುದೇ ಇರಲಿ, ಮುಖ್ಯಮಂತ್ರಿ ಯಾರೇ ಇರಲಿ, ನೌಕರ ಬಂಧುಗಳ ಸಲುವಾಗಿ ಎಲ್ಲ ತ್ಯಾಗಕ್ಕೂ ಸಿದ್ಧ. ಯಾರೋ ರಸ್ತೆಯ ಮೇಲೆ ಟೋಪಿ ಹಾಕಿಕೊಂಡು ಕುಳಿತಿರುವವರ ಮಾತು ಕೇಳಿ ಸಂಘ ದುರ್ಬಲಗೊಳಿಸುವ ಹುನ್ನಾರ ಮಾಡಬಾರದು ಎಂದು ಮನವಿ ಮಾಡಿದರು.
ಎನ್‌ಪಿಎಸ್ ಬದಲಿಗೆ ಒಪಿಎಸ್, ಕೇಂದ್ರ ವೇತನವನ್ನು ರಾಜ್ಯ ನೌಕರರಿಗೂ ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರದ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸರ್ಕಾರಿ ನೌಕರರಿಗೆ ಗೌರವದ ಜೀವನ ನಡೆಸಲು ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕೊಡಿಸಿಯೇ ಸಿದ್ಧ ಎಂದು ಭರವಸೆ ನೀಡಿದರು. ಅನೇಕ ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ ರಾಜ್ಯ ನೌಕರರ ಸಂಘದಿಂದ ಸುಮಾರು ₹551 ಕೋಟಿಗಳನ್ನು ಸಂಘದ ಸದಸ್ಯರು ನೀಡಿದ್ದಾರೆ ಎಂದರು.ಶಾಸಕ ಯಾಸೀರ ಪಠಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೇಲಧಿಕಾರಿಗಳ ನಿರ್ಲಕ್ಷ್ಯದಿಂದ ಕೆಳದರ್ಜೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ನೇರವಾಗಿ ತಮಗೆ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು. ಪಟ್ಟಣದ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಮತ್ತು ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಉಪವಿಭಾಗಾಧಿಕಾರಿ ಮಮತಾ ಹೊಸಗೌಡ್ರ ತಾಲೂಕಿನ ಮಹಿಳಾ ಸಾಧಕಿಯರ ಕಿರುಹೊತ್ತಗೆ ಬಿಡುಗಡೆ ಮಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳನ್ನು ಸನ್ಮಾನಿಸಲಾಯಿತು. 2024-29ನೇ ಸಾಲಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ನಿರ್ದೇಶಕರ ಪದಗ್ರಹಣ ನಾಮಫಲಕ ಪಟ್ಟಿ ಬಿಡುಗಡೆಗೊಳಿಸಿ ಸನ್ಮಾನಿಸಲಾಯಿತು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸುಭಾಸ ಮಜ್ಜಗಿ, ಸವಣೂರು ಉಪವಿಭಾಗಾಧಿಕಾರಿ ಮಮತಾ ಹೊಸಗೌಡ್ರ, ಜಿಲ್ಲಾ ಕ.ರಾ.ಸ.ನೌ.ಸಂ. ಅಧ್ಯಕ್ಷ ಮಲ್ಲೇಶ ಕರಿಗಾರ, ತಹಸೀಲ್ದಾರ್ ಭರತರಾಜ ಕೆ.ಎನ್., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ, ತಾಲೂಕು ಸಂಘದ ಹಿರಿಯ ಉಪಾಧ್ಯಕ್ಷ ರಾಮಕೃಷ್ಣ ಘಾಟಗೆ, ಖಜಾಂಚಿ ಪಟೇಲ್ ಮಹ್ಮದ ಅಸಗರ ಇದ್ದರು.