ಮುಕ್ತ, ಪಾರದರ್ಶಕ ಚುನಾವಣೆಗೆ ಸನ್ನದ್ಧ: ಆಯುಕ್ತೆ

KannadaprabhaNewsNetwork |  
Published : Oct 11, 2026, 02:15 AM IST
 | Kannada Prabha

ಸಾರಾಂಶ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಗಳ ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಗಳ ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಹೇಳಿದರು.

ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಶುಕ್ರವಾರ ನಡೆದ ಸಮಾಲೋಚನಾ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಕುರಿತು ಅಗತ್ಯ ಸೂಚನೆಗಳ ನೀಡಿದ ಅವರು, ಕ್ಷೇತ್ರದ ಎಲ್ಲ ತಾಲೂಕುಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಚುನಾವಣೆಗೆ ಸಂಬಂಧಿಸಿ ಯಾವುದೇ ದೂರುಗಳಿದ್ದಲ್ಲಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08472-200255ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಈಗಾಗಲೇ ಪಕ್ಷೇತರ ಅಭ್ಯರ್ಥಿ ನಬಿರಸೂಲ್ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಬುಧವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವೆಂದು ಘೋಷಿಸಲಾಗಿದೆ. ಇದೀಗ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ ಅಂತಿಮವಾಗಿ 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದರು.ಅಭ್ಯರ್ಥಿಗಳು ಚುನಾವಣಾ ಕರಪತ್ರಗಳನ್ನು ಮುದ್ರಿಸುವ ಮೊದಲು ನಿಗದಿತ ''''''''ಅನೆಕ್ಸರ್-7ಸಿ'''''''' ನಮೂನೆಯಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ವಾಹನಗಳನ್ನು ಬಳಸಲು ಜಿಲ್ಲಾಧಿಕಾರಿ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇಡೀ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದ ಅನುಮತಿಯನ್ನು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪಡೆಯಬೇಕು ಎಂದು ಸೂಚಿಸಿದರು.*ನಿಯಮಗಳ ಪಾಲನೆ ಕಡ್ಡಾಯ: ಮತದಾನ ದಿನವಾದ ಅ.23ರಂದು ಮತದಾನ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತದಾನದ ದಿನ ಮದ್ಯ ಮಾರಾಟ ಹಾಗೂ ಸೇವನೆಯನ್ನೂ ನಿಷೇಧಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾರರು ಚುನಾವಣಾ ಆಯೋಗ ಸೂಚಿಸಿರುವ ಅಧಿಕೃತ ಗುರುತಿನ ಚೀಟಿಗಳಲ್ಲಿ ಯಾವುದಾದರೊಂದನ್ನು ಕಡ್ಡಾಯ ಹಾಜರುಪಡಿಸಬೇಕು ಎಂದು ಹೇಳಿದರು.*ಮತ ಚಲಾವಣೆಯಲ್ಲಿ ಎಚ್ಚರಿಕೆ ವಹಿಸಿ: ಮತದಾರರು ಚುನಾವಣಾ ಆಯೋಗ ಒದಗಿಸುವ ನೇರಳೆ ಬಣ್ಣದ ಸ್ಕೆಚ್ ಪೆನ್‌ನಿಂದ ಮಾತ್ರ ತಮ್ಮ ಮತ ಚಲಾಯಿಸಬೇಕು. ಪ್ರಾಶಸ್ತ್ಯದ ಮತಗಳನ್ನು ಕನ್ನಡ, ಇಂಗ್ಲಿಷ್ ಅಥವಾ ರೋಮನ್ ಅಂಕಿಗಳಲ್ಲಿ ನಮೂದಿಸಬಹುದು. ಈ ಚುನಾವಣೆಯಲ್ಲಿ ನೋಟಾ ಇರುವುದಿಲ್ಲ. ಪ್ರಾಶಸ್ತ್ಯದ ಕ್ರಮಸಂಖ್ಯೆ ನಮೂದಿಸದೆ ಮತ ಚಲಾಯಿಸುವುದು ಅಥವಾ ನಿಗದಿತ ಕ್ರಮಕ್ಕೆ ವಿರುದ್ಧವಾಗಿ ಇತರ ಗುರುತುಗಳನ್ನು ಹಾಕುವುದರಿಂದ ಮತ ಅಮಾನ್ಯವಾಗುವ ಸಾಧ್ಯತೆಯಿದೆ. ಆದ್ದರಿಂದ ಮತದಾರರು ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಮಹಾನಗರ ಪಾಲಿಕೆಯ ಉಪ ಆಯುಕ್ತೆ (ಆಡಳಿತ) ಪ್ರಮೀಳಾ ಎಂ.ಕೆ. ಸೇರಿದಂತೆ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.

34,784 ಮತದಾರರು, 144 ಮತಗಟ್ಟೆಗಳು: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 34,784 ಮತದಾರರು ನೋಂದಣಿಯಾಗಿದ್ದಾರೆ. ಈ ಪೈಕಿ 20,040 ಪುರುಷರು ಹಾಗೂ 14,744 ಮಹಿಳೆಯರಿದ್ದಾರೆ. ಕ್ಷೇತ್ರದಲ್ಲಿ ಬಳ್ಳಾರಿಯ ಒಂದು ಹೆಚ್ಚುವರಿ ಮತಗಟ್ಟೆ ಸಹಿತ ಒಟ್ಟು 144 ಮತದಾನ ಕೇಂದ್ರಗಳ ಸ್ಥಾಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಮತಗಟ್ಟೆ ಏಜೆಂಟರನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವಿವರ ಸಲ್ಲಿಸುವ ಮೂಲಕ ನೇಮಕ ಮಾಡಿಕೊಳ್ಳಬಹುದು ಎಂದು ತಿಳಿಸಿದರು.27ರಂದು ಮತ ಎಣಿಕೆ: ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಭಾಸ್ಕರ್ ಹಾಲ್‌ನಲ್ಲಿ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಂ) ಹಾಗೂ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಭಾಸ್ಕರ್ ಹಾಲ್ ಪಕ್ಕದಲ್ಲಿರುವ ಪ್ರಾಣಿಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಲಾಗುವುದು. ಮತ ಎಣಿಕೆಗಾಗಿ ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಮತ ಎಣಿಕೆ ಏಜೆಂಟರ ವಿವರಗಳನ್ನು ಭಾವಚಿತ್ರದೊಂದಿಗೆ ನಿಗದಿತ ನಮೂನೆ-18ರಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದರು. ಅ. 27ರಂದು ಬೆಳಗ್ಗೆ 7.45ಕ್ಕೆ ಭದ್ರತಾ ಕೊಠಡಿಯ ಮುದ್ರೆ ತೆರೆಯಲಾಗುವುದು. ಈ ಸಂದರ್ಭ ಸಂಬಂಧಪಟ್ಟವರು ಕಡ್ಡಾಯವಾಗಿ ಹಾಜರಿರಬೇಕು ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು